ಬೆಂಗಳೂರು: ಗುಬ್ಬಿ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಶ್ರೀನಿವಾಸ್ ಇಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ತಮ್ಮ ಬೆಂಬಲಿಗರೊಂದಿಗೆ ಕೈ ಹಿಡಿದರು. ಮೂರ್ನಾಲ್ಕು ದಿನಗಳ ಹಿಂದೆ ಇವರು ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಕಳೆದ ಕೆಲವು ದಿನಗಳಿಂದ ಪಕ್ಷದ ಚಟುವಟಿಕೆಯಿಂದ ದೂರವಾಗಿದ್ದ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ಆಗುವುದಾಗಿ ಹೇಳಿಕೊಂಡಿದ್ದರು. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಜೆಡಿಎಸ್‌ನಲ್ಲಿ ಅಸಮಾಧಾನಗೊಂಡಿದ್ದ ಗುಬ್ಬಿ ಶ್ರೀನಿವಾಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದಿಂದ ಉಚ್ಛಾಟಿಸಲಾಗಿತ್ತು.
ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಡಿ. ಕುಪೇಂದ್ರ ರೆಡ್ಡಿಗೆ ಮತ ಚಲಾಯಿಸಬೇಕೆಂಬ ವಿಪ್ ಅನ್ನು ಇವರು ಉಲ್ಲಂಘಿಸಿದ್ದರು. ತಮ್ಮ ಪ್ರಥಮ ಪ್ರಾಶಸ್ತ್ಯದ ಮತವನ್ನು ಬಿಜೆಪಿ ಅಭ್ಯರ್ಥಿ ಲಹರ್ ಸಿಂಗ್ ಅವರಿಗೆ ಮತ್ತು ದ್ವಿತೀಯ ಪ್ರಾಶಸ್ತ್ಯದ ಮತವನ್ನು ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರಿಗೆ ನೀಡಿದ್ದರು. ಆ ಸಂದರ್ಭದಲ್ಲಿ ಪಕ್ಷ ತೊರೆಯುವುದು ಬಹುತೇಕ ಖಚಿತವಾಗಿತ್ತು. ಆರಂಭದಲ್ಲಿ ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ನತ್ತ ಹೆಚ್ಚು ಒಲವು ತೋರಿಸಿದ್ದರು.
ಶ್ರೀನಿವಾಸ್ ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 2008, 13 ಹಾಗೂ 18ರಲ್ಲಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರಭಾವಿತರಾಗಿದ್ದು ಜೆಡಿಎಸ್‌ನಿಂದ ವಿಮುಖರಾಗಿದ್ದರು. ಅಂತಿಮವಾಗಿ ಕಾಂಗ್ರೆಸ್ ಸೇರುವ ಮೂಲಕ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸೂಚನೆ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಮೂಡಿಗೆರೆ ಕ್ಷೇತ್ರದ ಬಿಜೆಪಿ ಮುಖಂಡರಾದ ಗೃಹ ಮಂಡಳಿ ಮಾಜಿ ಅಧ್ಯಕ್ಷ ಹಾಲಪ್ಪ, ಮಂಡ್ಯದ ವಕೀಲ ಹಾಗೂ ಬಿಜೆಪಿ ನಾಯಕ ಸತ್ಯಾನಂದ, ತುಮಕೂರು ಜಿಲ್ಲೆಯ ಕೆಲ ನಾಯಕರು ಸಹ ಇಂದು ಮಾಜಿ ಶಾಸಕ ಶ್ರೀನಿವಾಸ್ ಜೊತೆ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಮೇ ಹತ್ತಕ್ಕೆ ಕೇವಲ ಮತದಾನ ಮಾತ್ರವಲ್ಲ, ಭ್ರಷ್ಟಾಚಾರವನ್ನು ಬಡಿದೋಡಿಸುವ ದಿನ. ರಾಜ್ಯದ ಭವಿಷ್ಯವನ್ನು ಜನರೇ ನಿರ್ಧರಿಸುತ್ತಾರೆ. ಮೊದಲೇ ನೀತಿ ಸಂಹಿತೆ ಬರಬೇಕಿತ್ತು, ತಡವಾಗಿದೆ. ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಎರಡು ದಿನದಲ್ಲಿ ಇದನ್ನು ಹೇಳುತ್ತೇನೆ ಎಂದು ಹೇಳಿದರು.
37 ಮಂದಿ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ- ಡಿಕೆಶಿ.. ಬಹಳಷ್ಟು ದಿನದಿಂದ ನಾನು ಶ್ರೀನಿವಾಸ್ಗೆ ಗಾಳ ಹಾಕುತ್ತಿದ್ದೆ, ಆದರೆ ಬಿದ್ದಿರಲಿಲ್ಲ. ಇಂದು ಮತದಾರರು ಯಾವ ದಿಕ್ಕಿನಲ್ಲಿ ಸಾಗಿದ್ದಾರೋ ಅವರ ಗಾಳಕ್ಕೆ ಬಿದ್ದಿದ್ದಾರೆ. ಶಿವಲಿಂಗೇಗೌಡರು ಇನ್ನೆರಡು ದಿನಗಳಲ್ಲಿ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುತ್ತಾರೆ. ಹಿಂದೆ ಅವರು ಸಹ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದರು. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ ಮಧು ಬಂಗಾರಪ್ಪ, ವೈಎಸ್ವಿ ದತ್ತ ಸೇರಿದಂತೆ 37 ಮಂದಿ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಬಿಜೆಪಿ ಶಾಸಕರಾದ ಪುಟ್ಟಣ್ಣ ಹಾಗೂ ಚಿಂಚನ್ಸೂರ್, ಬಣಕಾರ್, ಲಿಂಬಿಕಾಯಿ ಸಹ ಬಿಜೆಪಿ ತೊರೆದು ಬಂದಿದ್ದಾರೆ. ಬಿಜೆಪಿಯಿಂದ ಬರುವವರ ಇನ್ನು ದೊಡ್ಡ ಪಟ್ಟಿ ಇದೆ ಮುಂದೆ ತಿಳಿಸುತ್ತೇನೆ ಎಂದರು.
ಕಾಂಗ್ರೆಸ್ನಿಂದ ಗೆದ್ದ ಶಾಸಕರನ್ನು ಬಿಜೆಪಿಗೆ ಕೊಂಡೊಯ್ಯುವಾಗ ನಿಮಗೆ ಯಾವ ನೈತಿಕತೆ ಇತ್ತು ಎಂದು ಬಸವರಾಜ ಬೊಮ್ಮಾಯಿಗೆ ಪ್ರಶ್ನಿಸಿದ ಡಿಕೆಶಿ, ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಇದು ರಾಜ್ಯದ ಜನರಿಗೆ ಶಾಪವಾಗಿ ಲಭಿಸಿದ ಸರ್ಕಾರವಾಗಿದೆ. ನಮ್ಮ ಇಂದಿನ ಪರಿಸ್ಥಿತಿಯನ್ನು ಬದಲಿಸಲು ಯಾರಿಗೂ ಸಾಧ್ಯವಿಲ್ಲ. ಇಂದು ವಾಸು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಇವರ ಆಗಮನ ಇಡೀ ರಾಜ್ಯಕ್ಕೆ ಒಂದು ಶಕ್ತಿ ತಂದಿದೆ. ಬಹಳ ಹಿಂದೆಯೇ ಅವರು ಕಾಂಗ್ರೆಸ್ಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು.
ಶ್ರೀನಿವಾಸ್ ಅವರು ಮಾತನಾಡಿ, ನಾನು ರಾಜಕೀಯ ಜೀವನ ಆರಂಭದಲ್ಲಿ ಕಾಂಗ್ರೆಸ್ನಲ್ಲಿದ್ದೆ. 2002 ರಲ್ಲಿ ನಾನು ಜೆಡಿಎಸ್ ಸೇರಿದೆ. 2004 ರಲ್ಲಿ ಜೆಡಿಎಸ್ ಟಿಕೆಟ್ ನೀಡಲಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ನಿಂತೆ. ಗೆದ್ದ ನಂತರ ಜೆಡಿಎಸ್ ಬೆಂಬಲಿಸಿದೆ. ಜೆಡಿಎಸ್ ಬಿಡಬೇಕೆಂದು ಬಿಟ್ಟವನಲ್ಲ. ರಾಜಕೀಯ ಗಿಮಿಕ್, ಮೋಸ, ವಂಚನೆ ನನಗೆ ಗೊತ್ತಿಲ್ಲ. ನಮ್ಮ ತಂದೆ ಸಹ ಕಾಂಗ್ರೆಸ್ನಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದರು. ಮೂರು ಅವಧಿ ಜೆಡಿಎಸ್ ಶಾಸಕನಾಗಿ ಗೆದ್ದೆ. ಆದರೆ ನನಗೆ ಅರಿವಿಲ್ಲದೇ ಕುಮಾರಸ್ವಾಮಿ ಕಾರ್ಯಕ್ರಮ ಆಯೋಜಿಸಿ ಬೇರೆ ಅಭ್ಯರ್ಥಿ ಘೋಷಿಸಿದರು.
ಹೀನಾಯವಾಗಿ ನನ್ನನ್ನು ಹೊರಹಾಕಿದರು- ಶ್ರೀನಿವಾಸ್.. ಜಿ.ಟಿ. ದೇವೇಗೌಡ ಅವರನ್ನು ತಂದೆ, ಮಗ ಮನವೊಲಿಸಿ ಕರೆತಂದರು. ನನ್ನನ್ನು ನಿರ್ಲಕ್ಷ್ಯ ಮಾಡಿದರು. ಸಿದ್ದರಾಮಯ್ಯ ಅವರನ್ನು ಹೊರಹಾಕಿದ್ದಕ್ಕಿಂತ ಹೀನಾಯವಾಗಿ ನನ್ನನ್ನು ಹೊರಹಾಕಿದರು. ನಾನು ಎಚ್ಡಿಕೆ ಅವರನ್ನು ಸಂಪರ್ಕಿಸಿಲ್ಲ. ದೇವೇಗೌಡರಿಗೆ ನಮ್ಮ ಕ್ಷೇತ್ರದಿಂದ 58 ಸಾವಿರ ಮತ ಕೊಡಿಸಿದ್ದೆ. ಆದರೆ ಗೌಡರ ಸೋಲಿಗೆ ಶ್ರೀನಿವಾಸ್ ಕಾರಣ ಅಂತ ಕುಮಾರಸ್ವಾಮಿ ಹೇಳಿದಾಗ ಬೇಸರವಾಗಿ ಪಕ್ಷ ಬಿಡುವ ನಿರ್ಧಾರಕ್ಕೆ ಬಂದೆ. ನಾನು ಬಿಟ್ಟೆ ಅನ್ನುವುದಕ್ಕಿಂತ ದಬ್ಬಿದರು. ನಾನು ಬಿಜೆಪಿಗೆ ಸೇರಲಿಲ್ಲ. ಅದರ ಸಿದ್ಧಾಂತ ನನಗೆ ಒಪ್ಪಿಗೆ ಆಗಲ್ಲ. ತುಮಕೂರು ಜಿಲ್ಲೆಯ ಕಾಂಗ್ರೆಸ್ ನಾಯಕರ ಒತ್ತಾಸೆಯಿಂದ ನನ್ನ ತವರಿಗೆ ವಾಪಸ್ ಆಗುತ್ತಿದ್ದೇನೆ ಎಂದು ಹೇಳಿದರು.
ಸಮಾರಂಭದಲ್ಲಿ ಮಾಜಿ ಸಚಿವರಾದ ಮೋಟಮ್ಮ, ಕೆ ಎನ್ ರಾಜಣ್ಣ, ಟಿ ಬಿ ಜಯಚಂದ್ರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಉಪಸ್ಥಿತರಿದ್ದರು.
ಇದನ್ನೂ ಓದಿ:ಬಿಜೆಪಿ ಮಾಜಿ ಸಂಸದ ಮಂಜುನಾಥ್ ಕುನ್ನೂರು, ಕೆ.ಆರ್ ಪೇಟೆ ದೇವರಾಜ್ ಕಾಂಗ್ರೆಸ್ ಸೇರ್ಪಡೆ