ಬೆಂಗಳೂರು: ಉತ್ಸಾಹದಲ್ಲಿ ನನಗೂ ಫ್ರಿ, ನಿಮಗೂ ಫ್ರೀ ಅಂತ ಮುಖ್ಯಮಂತ್ರಿಗಳು ಹೇಳಿದ್ದಾರೆ. ಒಂದು ಹದಿನೈದು ದಿನ ಸಮಯ ಕೊಡಿ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಿಲ್ಲ ಎಂದರೆ ನಿಮ್ಮ ಜೊತೆ ನಾನು ಸೇರಿಕೊಳ್ಳುತ್ತೇನೆ ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಬಿಜೆಪಿ ನಾಯಕರ ಟೀಕೆಗೆ ತಿರುಗೇಟು ನೀಡಿದ್ದಾರೆ. ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಗ್ಯಾರಂಟಿಗಳನ್ನು ಎಲ್ಲರಿಗೂ ಫ್ರೀ ಕೊಡಲು ಆಗಲ್ಲ. ಮಾಜಿ ಸಚಿವ ಆರ್. ಅಶೋಕ್ ಕರೆಂಟ್ ಬಿಲ್ ಕಟ್ಟಲ್ಲ ಅಂದ್ರೆ ಬಿಡುವವರು ಯಾರು? ಎಂದರು.
ಬಿಪಿಎಲ್ ಕಾರ್ಡ್ ದಾರರಿಗೆ ಕೊಡುವ ಯೋಜನೆಗಳು. ಐಎಎಸ್, ಐಪಿಎಸ್ ಅವರಿಗೆ ಅಲ್ಲ. ಮದ್ಯಮ ವರ್ಗಕ್ಕೆ ಅನುಕೂಲವಾಗುವಂತೆ ಐದು ವರ್ಷಗಳ ಒಳಗೆ ಜಾರಿ ಮಾಡುತ್ತಾರೆ ಎಂದರು. ನಾನು ಮಿನಿಸ್ಟರ್ ಆಗಬೇಕಿತ್ತು. ಎಲ್ಲ ಹಣೆ ಬರಹ ಎಂದು ಶಿವಲಿಂಗೇಗೌಡ ಬೇಸರ ವ್ಯಕ್ತಪಡಿಸಿದರು.
ಗ್ಯಾರಂಟಿಗಳ ಜಾರಿಗೆ ಎಸ್ಸಿಪಿ/ಟಿಎಸ್ಪಿ ಹಣ ಬಳಸಬಾರದು - ಗೋವಿಂದ ಕಾರಜೋಳ:ಮತ್ತೊಂದೆಡೆ ಬೆಂಗಳೂರಿನಲ್ಲಿಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಚುನಾವಣೆ ವೇಳೆ ರಾಜ್ಯದ ಜನತೆಗೆ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಯೋಜನೆಗಳ ಜಾರಿಗೆ ಯಾವುದೇ ಕಾರಣಕ್ಕೂ ವಿಶೇಷ ಘಟಕ ಯೋಜನೆ/ಬುಡಕಟ್ಟು ಉಪ ಯೋಜನೆ (ಎಸ್ಸಿಪಿ/ಟಿಎಸ್ಪಿ) ಹಣ ಬಳಕೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಪಕ್ಷ ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕು ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನಾಡಿನ ಜನತೆಗೆ ಐದು ಭರವಸೆ ನೀಡಿ ರಾಜ್ಯದ ಜನತೆಗೆ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಆರೋಪಿಸಿದರು.