ಕರ್ನಾಟಕ

karnataka

ETV Bharat / state

ನಮ್ಮ ಸರ್ಕಾರದ ಯೋಜನೆಗಳು ದೇಶಕ್ಕೆ ಮಾದರಿ ಆಗಿವೆ: ಡಿಸಿಎಂ ಡಿ ಕೆ ಶಿವಕುಮಾರ್ - ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ದೇಶಕ್ಕೆ ಮಾದರಿ

DCM DK Shivakumar: ನಮ್ಮ ಸರ್ಕಾರ ತಂದಿರುವ ಗ್ಯಾರಂಟಿ ಯೋಜನೆಗಳಿಂದ ದೇಶ ದಿವಾಳಿಯಾಗಲಿದೆ ಎನ್ನುತ್ತಿದ್ದವರು ಈಗ ನಮಗಿಂತ ಮುಂಚೆ ಮಧ್ಯಪ್ರದೇಶದಲ್ಲಿ ಉಚಿತ ಯೋಜನೆಗಳ ಬೋರ್ಡ್ ಹಾಕಿಕೊಂಡು ಕೂತಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಆರೋಪಿಸಿದರು.

flowers on the portrait of former Prime Minister Jawaharlal Nehru
ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಭಾವಚಿತ್ರಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಪುಷ್ಪಾರ್ಚನೆ ಮಾಡಿದರು.

By ETV Bharat Karnataka Team

Published : Nov 14, 2023, 4:34 PM IST

Updated : Nov 14, 2023, 8:29 PM IST

ಡಿಸಿಎಂ ಡಿ ಕೆ ಶಿವಕುಮಾರ್ ಮಾಧ್ಯಮದವರ ಜೊತೆ ಮಾತನಾಡಿದರು.

ಬೆಂಗಳೂರು: ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿದ್ದು, ನಮ್ಮನ್ನು ನೋಡಿ ತೆಲಂಗಾಣ, ಮಧ್ಯಪ್ರದೇಶದಲ್ಲೂ ಆರಂಭ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ದೇಶ ದಿವಾಳಿಯಾಗುತ್ತದೆ ಎಂದು ಹೇಳುತ್ತಿದ್ದರು. ಈಗ ಮಧ್ಯ ಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನಮಗಿಂತ ಮುಂಚೆ ಉಚಿತ ಯೋಜನೆಗಳ ಬೋರ್ಡ್ ಹಾಕಿಕೊಂಡು ಕೂತಿದ್ದಾರೆ. ಅದನ್ನು ಯಾವ ಮಾಡೆಲ್ ಎಂದು ಕರೆಯಬೇಕು? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಗದಿತ ಸಮಯದಲ್ಲಿ ಪ್ರತಿ ಮನೆಗೆ ತಲುಪದಿದ್ದಲ್ಲಿ ಪರಿಶೀಲನೆ ಮಾಡಿ ನಮ್ಮ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಶಕ್ತಿ ಯೋಜನೆಯಲ್ಲಿ 100 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ ಎಂದು ತಿಳಿಸಿದರು.

ಹಿಂದಿನ ವರ್ಷ ಭಾರತ ಜೋಡೋ ಯಾತ್ರೆ ಮಾಡಿ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದೆವು. ಈ ಬಾರಿ ದಸರಾ ಹಬ್ಬದಲ್ಲಿ ದೇವಿ ಪುಷ್ಪಾರ್ಚನೆ ಮಾಡುವ ಭಾಗ್ಯವನ್ನು ನಮಗೆ ಕರುಣಿಸಿದ್ದಾಳೆ. ಮೈಸೂರು ದಸರಾದಲ್ಲಿ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಅವರ ಬಸ್ ಪ್ರಯಾಣದ ಖರ್ಚು ಉಳಿದಿರಬಹುದು. ಆದರೆ, ಅಲ್ಲಿ ಅವರು ಹೋಟೆಲ್​​​ಗಳಲ್ಲಿ ಊಟ ಮಾಡಿದ್ದು, ಅಲ್ಲಿನ ಮಳಿಗೆಗಳಲ್ಲಿ ವಸ್ತುಗಳನ್ನು ಖರೀದಿ ಮಾಡಿದ್ದು, ವ್ಯಾಪಾರ ವಹಿವಾಟು ಹೆಚ್ಚಾಗಿ ಆರ್ಥಿಕತೆಗೆ ಉತ್ತೇಜನ ನೀಡಿದೆ. ಈ ರೀತಿ ನಮ್ಮ ಯೋಜನೆಗಳು ಆರ್ಥಿಕತೆಗೆ ಶಕ್ತಿ ತುಂಬಿವೆ. ಇದು ಕಾಂಗ್ರೆಸ್ ಪಕ್ಷದ ಚಿಂತನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗೃಹಲಕ್ಷ್ಮಿ ಯೋಜನೆಗೆ 1.08 ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 1.04 ಲಕ್ಷ ಜನಕ್ಕೆ ಹಣ ಸಂದಾಯವಾಗುತ್ತಿದೆ. ಉಳಿದ ನಾಲ್ಕು ಲಕ್ಷ ಜನರ ಅರ್ಜಿಯಲ್ಲಿ ತಾಂತ್ರಿಕ ದೋಷಗಳಿಂದ ಹಣ ತಲುಪಿಲ್ಲ. ಈ ದೋಷಗಳನ್ನು ಕಾರ್ಯಕರ್ತರು ಪತ್ತೆ ಹಚ್ಚಿ ಸರಿಪಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಪಠ್ಯಪುಸ್ತಕ ಪರಿಷ್ಕರಣೆಗೆ ಸರ್ಕಾರ ಬದ್ಧ: ಬಿಜೆಪಿ ಸರ್ಕಾರ ಮಕ್ಕಳ ಶಾಲಾಪಠ್ಯ ಪುಸ್ತಕದಲ್ಲಿ ಇತಿಹಾಸ ತಿರುಚುವ ಸಂಚು ಮಾಡಿದ್ದು, ನಮ್ಮ ಸರ್ಕಾರ ಇದನ್ನು ಸರಿಪಡಿಸುವ ಕೆಲಸ ಮಾಡಲಿದೆ. ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಅವರು ನಮ್ಮ ಕರ್ನಾಟಕದ ಇತಿಹಾಸವನ್ನು ತಿರುಚಲು ಹೋಗಿದ್ದಾರೆ. ನಾವು ಈ ವಿಚಾರದಲ್ಲಿ ಕೊಟ್ಟ ಮಾತಿನಂತೆ ನಡೆಯುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಬೆಂಗಳೂರಿನಲ್ಲಿ ಎಚ್ಎಎಲ್, ಹೆಚ್ಎಂಟಿ, ಬಿಇಎಲ್, ಬಿಎಚ್ಇಎಲ್, ಇಸ್ರೋ ಸೇರಿದಂತೆ ಅನೇಕ ಸಂಸ್ಥೆಗಳನ್ನು ಇಲ್ಲಿ ಸ್ಥಾಪಿಸಿದರು. ಈ ಸಂಸ್ಥೆಗಳಿಂದ ನಮ್ಮ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯಕ್ಕೆ ಶಕ್ತಿ ಬಂದಿದೆ. ಅವರ ಕಾಲದಲ್ಲಿನ ಪಂಚವಾರ್ಷಿಕ ಯೋಜನೆ ಹಾಗೂ ಅವರ ಕೈಗೊಂಡ ನಿಲವು ನೀತಿಗಳು ದೇಶದ ಅಭಿವೃದ್ಧಿಗೆ ಭದ್ರ ಬುನಾದಿಯಾಗಿತ್ತು. ಅವರ ವಿದೇಶಾಂಗ ನೀತಿಯನ್ನು ವಿಶ್ವದ ಅನೇಕ ರಾಷ್ಟ್ರಗಳು ಅನುಸರಿಸಿದವು ಎಂದು ವಿವರಿಸಿದರು.

ಮಕ್ಕಳು ದೇಶದ ಭವಿಷ್ಯದ ಆಸ್ತಿ, ನೆಹರೂ ಚಿಂತನೆ:ಮಕ್ಕಳ ವಿಚಾರದಲ್ಲಿ ನೆಹರೂ ಅವರ ದೂರದೃಷ್ಟಿ ಬಹಳ ದೊಡ್ಡದಾಗಿತ್ತು. ಮಕ್ಕಳು ದೇಶದ ಭವಿಷ್ಯದ ಆಸ್ತಿ ಎಂಬುದು ನೆಹರೂ ಅವರ ಚಿಂತನೆಯಾಗಿತ್ತು. ಅಲಹಾಬಾದ್​ನಲ್ಲಿ​ ನೆಹರೂ ಅವರು ತಮ್ಮ ಆಸ್ತಿಯನ್ನು ದೇಶಕ್ಕೆ ದಾನ ಮಾಡಿದರು. ದೆಹಲಿಯಲ್ಲಿ ನೆಹರೂ ಅವರಿದ್ದ ಮನೆಯನ್ನು ಪ್ರಧಾನಮಂತ್ರಿ ವಸ್ತುಸಂಗ್ರಹಾಲಯ ಮಾಡಿ ಅವರ ಹೆಸರು ಇರದಂತೆ ಮಾಡಿದ್ದಾರೆ ಎಂದು ತಿಳಿಸಿದರು.

ನೆಹರೂ ಅವರು ಅಲಹಬಾದ್ ಪಾಲಿಕೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಆಗಿನ ಕಾಲದಲ್ಲಿ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ನಾಯಕರಾಗಿ ಬೆಳೆದಿದ್ದಾರೆ. ಕೇವಲ ಎಂಎಲ್ಎ, ಎಂಪಿ ಚುನಾವಣೆಗೆ, ನಿಗಮ ಮಂಡಳಿಗೆ ಅರ್ಜಿ ಹಾಕುವುದು ಹಾಗಿರಲಿ, ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಗ್ಗೆ ಗಮನಹರಿಸಿ. ನಾನು ಜಿಲ್ಲಾ ಪಂಚಾಯ್ತಿ ಸದಸ್ಯನಾಗಿದ್ದೆ. ಸಿದ್ದರಾಮಯ್ಯ ಅವರು 1977ರಲ್ಲಿ ತಾಲೂಕು ಬೋರ್ಡ್ ಸದಸ್ಯರಾಗಿದ್ದರು ಎಂದು ಹೇಳಿದರು.

ಇದನ್ನೂಓದಿ:ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯತೀತತೆ ನೆಹರು ಬದುಕಿನ ಮೌಲ್ಯಗಳು: ಸಿದ್ದರಾಮಯ್ಯ ಸ್ಮರಣೆ

Last Updated : Nov 14, 2023, 8:29 PM IST

ABOUT THE AUTHOR

...view details