ಬೆಂಗಳೂರು: ಸರ್ವರ್ ಡೌನ್‌ನಿಂದ ಆರಂಭದಲ್ಲಿ ನಿಧಾನಗತಿಯಲ್ಲಿ ಸಾಗಿದ್ದ ಗೃಹ ಜ್ಯೋತಿ ಯೋಜನೆ ಅರ್ಜಿ ಸ್ವೀಕಾರ ಪ್ರಕ್ರಿಯೆ ಇದೀಗ ವೇಗ ಪಡೆದಿದೆ. ಭಾನುವಾರ ಸಂಜೆ 4 ಗಂಟೆ ವೇಳೆಗೆ 51,17,693 ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಉಚಿತ ವಿದ್ಯುತ್ ನೀಡುವ ಬಹುನಿರೀಕ್ಷಿತ ಗೃಹ ಜ್ಯೋತಿ ಯೋಜನೆ ನೋಂದಣಿ ಪ್ರಕ್ರಿಯೆ ಇದೀಗ ಸ್ವಲ್ಪ ವೇಗ ಪಡೆದಿದೆ. ಆರಂಭದಲ್ಲಿ ಸರ್ವರ್ ಡೌನ್ ನಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ನೋಂದಣಿ ಕಾರ್ಯ ಇದೀಗ ಚುರುಕು ಪಡೆಯುತ್ತಿದೆ. ಜೂನ್ 18 ರಿಂದ ಆರಂಭವಾದ ನೋಂದಣಿ ಪ್ರಕ್ರಿಯೆ ಇದೀಗ 50 ಲಕ್ಷ ನೋಂದಣಿಯ ಗಡಿ ದಾಟಿದೆ.
ಭಾನುವಾರ ಸಂಜೆ 4 ಗಂಟೆಯವರೆಗೆ 51,17,693 ಗ್ರಾಹಕರು ಯೋಜನೆಗಾಗಿ ನೋಂದಣಿ ಮಾಡಿಸಿದ್ದಾರೆ. ಇ - ಆಡಳಿತ ಇಲಾಖೆ ಪ್ರತ್ಯೇಕ ನೋಂದಣಿ ಲಿಂಕ್ ಅನ್ನು ರಾಜ್ಯದ 2,000 ವಿದ್ಯುತ್ ಕಚೇರಿಗಳಿಗೆ ನೀಡಿದ ನಂತರ ನೋಂದಣಿ ಪ್ರಕ್ರಿಯೆಗೆ ವೇಗ ದೊರೆತಿದೆ. ಗೃಹ ಜ್ಯೋತಿ ಯೋಜನೆಗೆ ಯಾವುದೇ ವಿದ್ಯುತ್ ಕಚೇರಿ, ನಾಡಕಚೇರಿ ಹಾಗೂ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಫೋನ್ ನಲ್ಲಿ ಅಧಿಕೃತ ಪೋರ್ಟಲ್ https://sevasindhugs.karnataka.gov.in ಮೂಲಕ ನೋಂದಣಿ ಸಂಪೂರ್ಣ ಉಚಿತವಾಗಿದೆ. ಗ್ರಾಹಕರು ಮೇಲ್ಕಂಡ ವೆಬ್’ಸೈಟ್ ಹೊರತುಪಡಿಸಿ, ನೋಂದಣಿಗೆ ಯಾವುದೇ ಖಾಸಗಿ/ನಕಲಿ ವೆಬ್’ಸೈಟ್ ಬಳಸದಂತೆ ಇಂಧನ ಇಲಾಖೆ ತಿಳಿಸಿದೆ.
ಜೊತೆಗೆ ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ನೋಂದಣಿಗೆ ನಿಗದಿತ ಸೇವಾ ಶುಲ್ಕವನ್ನಷ್ಟೇ ಪಾವತಿಸಿ ನೋಂದಾಯಿಸಿಕೊಳ್ಳಬಹುದು. ಹೆಚ್ಚುವರಿ ಹಣಕ್ಕೆ ಯಾರಾದರೂ ಬೇಡಿಕೆಯಿಟ್ಟಲ್ಲಿ, ಗ್ರಾಹಕರು ಕೂಡಲೇ 24x7 ಸಹಾಯವಾಣಿ 1912 ಕ್ಕೆ ಕರೆಮಾಡಿ ತಿಳಿಸಬಹುದು. ಅಂತಹ ಪ್ರಯತ್ನಗಳ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ವಿವಿಧ ಎಸ್ಕಾಂ ನೋಂದಣಿ ಏನಿದೆ?:
ಬೆಸ್ಕಾಂ- 20,55,522 ನೋಂದಣಿ
ಚೆಸ್ಕಾಂ- 7,90,894 ನೋಂದಣಿ
ಜೆಸ್ಕಾಂ- 5,66,289 ನೋಂದಣಿ
ಹೆಸ್ಕಾಂ- 10,82,336 ನೋಂದಣಿ
ಮೆಸ್ಕಾಂ- 5,98,981 ನೋಂದಣಿ
ಹೆಚ್ಆರ್ ಇಸಿಎಸ್- 23,670 ನೋಂದಣಿ
ಗೃಹ ಜ್ಯೋತಿ ಯೋಜನೆಗೆ ಷರತ್ತುಗಳು :ಈ ಯೋಜನೆಯು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯವಾಗುತ್ತದೆ. ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವುದಿಲ್ಲ.
ಪ್ರತಿ ತಿಂಗಳ ಮೀಟರ್ ರೀಡಿಂಗ್ ಮಾಡಿದಾಗ, ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ನ್ನು ನಮೂದಿಸಲಾಗುತ್ತದೆ. 200 ಯೂನಿಟ್ಗಳ ಬಳಕೆಯನ್ನು ಮೀರಿದ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್ ಪಾವತಿಸಬೇಕು.
ಗೃಹ ವಿದ್ಯುತ್ ಬಳಕೆದಾರನ ಅರ್ಹ ಮೊತ್ತವನ್ನು ಬಿಲ್ನಲ್ಲಿ ಕಡಿತಗೊಳಿಸಿ, ಉಳಿದ ಮೊತ್ತವನ್ನು ಗ್ರಾಹಕರಿಗೆ net bill ನೀಡಲಾಗುತ್ತದೆ ಹಾಗೂ ಗ್ರಾಹಕರು net bill ಅನ್ನು ಪಾವತಿಸಬೇಕು.
ಅರ್ಹ ಯುನಿಟ್/ಮೊತ್ತಕ್ಕಿಂತ ಒಳಗೆ ಬಿಲ್ ಆಗಿದ್ದಲ್ಲಿ ಅಂತಹ ಗ್ರಾಹಕರಿಗೆ ಶೂನ್ಯ ಬಿಲ್ ನೀಡಲಾಗುತ್ತದೆ. ಈ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
ಪ್ರತಿ ಫಲಾನುಭವಿಯು ತನ್ನ customer ID/Account ID ಕಡ್ಡಾಯವಾಗಿ ಆಧಾರ್ಗೆ ಜೋಡಣೆ ಮಾಡಬೇಕು. ಪ್ರಸ್ತುತ ಜಾರಿಯಲ್ಲಿರುವ ಭಾಗ್ಯ ಜ್ಯೋತಿ/ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯ ಫಲಾನುಭವಿಗಳೂ ಈ ಯೋಜನೆಯಲ್ಲಿ ಸೇರಬಹುದು.
2023ರ ಜೂನ್ 20ರ ಅಂತ್ಯಕ್ಕೆ (ಜೂನ್ನಲ್ಲಿ ಬಳಸಿದ ವಿದ್ಯುತ್ಗೆ ಜುಲೈನಲ್ಲಿ ನೀಡುವ ವಿದ್ಯುತ್ ಬಿಲ್ ಸೇರಿದಂತೆ) ಬಾಕಿ ಇರುವ ವಿದ್ಯುತ್ ಶುಲ್ಕವನ್ನು ಮೂರು ತಿಂಗಳೊಳಗೆ ಪಾವತಿಸಬೇಕು. ಬಾಕಿ ಮೊತ್ತವನ್ನು ನಿಗದಿತ ಅವಧಿಯೊಳಗೆ ಪಾವತಿ ಮಾಡದಿದ್ದಲ್ಲಿ ಅಂತಹ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುತ್ತದೆ.
ಗೃಹ ವಿದ್ಯುತ್ ಗ್ರಾಹಕರ ಸ್ಥಾವರಗಳಿಗೆ ಮಾಪಕವನ್ನು ಅಳವಡಿಸುವುದು ಹಾಗೂ ಮಾಪಕ ಓದುವುದು ಕಡ್ಡಾಯವಾಗಿರುತ್ತದೆ.
ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಮೀಟರ್ ಇದ್ದಲ್ಲಿ ಒಂದು ಮೀಟರ್ಗೆ ಮಾತ್ರ ಈ ಯೋಜನೆಯಡಿ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂಓದಿ:ಕೇಜ್ರಿವಾಲ್ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ: ರಾಹುಲ್ ಗಾಂಧಿ ನಾಯಕತ್ವ ಪ್ರಶ್ನಿಸಿದ ಆಪ್ಗೆ ಕಾಂಗ್ರೆಸ್ ತಿರುಗೇಟು