ಬೆಂಗಳೂರು :ಅನ್ನಭಾಗ್ಯ ಯೋಜನೆಗೆ ಬೇಕಾದ ಅಕ್ಕಿಯನ್ನು ಹೊರರಾಜ್ಯಗಳಿಂದ ತರಲು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಯೋಜನೆಗೆ ಅಗತ್ಯವಾದ ಅಕ್ಕಿಯನ್ನು ತೆರೆದ ಮಾರುಕಟ್ಟೆಯಲ್ಲಿ ಒದಗಿಸಲು ಕೇಂದ್ರ ಸರ್ಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಸಿದ್ದರಾಮಯ್ಯ ತಮ್ಮ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯನ್ನು ಜುಲೈ ಒಂದರಂದೇ ಜಾರಿಗೆ ತರಲು ಎಲ್ಲ ಕಸರತ್ತು ನಡೆಸಿದ್ದಾರೆ.
ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅನ್ನಭಾಗ್ಯ ಯೋಜನೆಗೆ ಅಗತ್ಯವಾದ ಅಕ್ಕಿ ಯಾವ ಯಾವ ರಾಜ್ಯಗಳಿಂದ ತರಬಹುದು ಎಂಬ ಕುರಿತು ಮಾಹಿತಿ ಪಡೆದಿದ್ದಲ್ಲದೆ, ಈ ಅಕ್ಕಿಯನ್ನು ಪಡೆಯಲು ಹೊರರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸಿದ್ಧ ಎಂಬ ಸಂದೇಶ ರವಾನಿಸಿದರು. ಈ ಮಧ್ಯೆ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರು, ಅನ್ನಭಾಗ್ಯ ಯೋಜನೆಗೆ ಅಗತ್ಯವಾದ ಅಕ್ಕಿಯನ್ನು ನೀಡಲು ಕೇಂದ್ರ ಸರ್ಕಾರ ಹಿಂಜರಿದ ಬೆಳವಣಿಗೆಯನ್ನು ಖಂಡಿಸಿದರು.
ತೆರೆದ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಅಕ್ಕಿಯನ್ನು 34 ರೂ. ದರದಲ್ಲಿ ಖರೀದಿಸಲು ನಾವು ಸಿದ್ಧರಿದ್ದರೂ ಕೇಂದ್ರ ಸರ್ಕಾರ ನಮಗೆ ಅಕ್ಕಿ ನೀಡಲು ತಯಾರಿಲ್ಲ. ಆದರೆ ಅದೇ ಕಾಲಕ್ಕೆ ಟೆಂಡರ್ ಮೂಲಕ 15 ಲಕ್ಷ ಟನ್ ಅಕ್ಕಿಯನ್ನು ವಿಲೇವಾರಿ ಮಾಡಲು ತಯಾರಿ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಮೊದಲು ನಮಗೆ ಅಕ್ಕಿ ಕೊಡುವುದಾಗಿ ಹೇಳಿದವರು ಇದ್ದಕ್ಕಿದ್ದಂತೆ ಅಕ್ಕಿ ಕೊಡುವುದಿಲ್ಲ ಎಂದಿರುವುದು ರಾಜಕೀಯವೇ ಹೊರತು ಇನ್ನೇನಲ್ಲ. ಬಡವರ ಪರ ಕಾರ್ಯಕ್ರಮಗಳಿಗೆ ಅದು ವಿರುದ್ಧವಾಗಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ ಎಂದರು.
ಕೇಂದ್ರ ಸರ್ಕಾರದ ಈ ಧೋರಣೆಯ ಹಿನ್ನೆಲೆಯಲ್ಲಿ ನಾವು ತೆಲಂಗಾಣ, ಛತ್ತೀಸ್ ಘಡದ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿದ್ದು, ಅವರು ರಾಜ್ಯಕ್ಕೆ ಅಕ್ಕಿ ನೀಡಲು ಒಪ್ಪಿಕೊಂಡಿದ್ದಾರೆ. ಆದರೆ ಯಾವ ರೀತಿ ರಾಜ್ಯಕ್ಕೆ ಸರಬರಾಜು ಮಾಡಬೇಕು ಎಂಬ ಸಂಬಂಧ ಚರ್ಚಿಸಲು ಬರುವಂತೆ ಹೇಳಿದ್ದಾರೆ. ಅದರ ಪ್ರಕಾರ, ನಮ್ಮ ಅಧಿಕಾರಿಗಳ ತಂಡ ತೆಲಂಗಾಣಕ್ಕೆ ತೆರಳಿದ್ದು, ಆದಷ್ಟು ಬೇಗ ಹೊರರಾಜ್ಯಗಳಿಂದ ಅಗತ್ಯದಷ್ಟು ಅಕ್ಕಿ ಪಡೆಯಲು ಕ್ರಮ ಕೈಗೊಳ್ಳುತ್ತೇವೆ. ಸಾಧ್ಯವಾದ ಮಟ್ಟಿಗೆ ಜುಲೈ 1 ರಿಂದಲೇ ಈ ಯೋಜನೆಯನ್ನು ಜಾರಿಗೊಳಿಸಲು ತಯಾರಿ ನಡೆಸಿದ್ದೇವೆ ಎಂದರು. ಅನ್ನಭಾಗ್ಯ ಯೋಜನೆಗೆ ಬೇಕಾದ ಅಕ್ಕಿಯನ್ನು ಪಡೆಯಲು ಹೊರರಾಜ್ಯದ ಮುಖ್ಯಮಂತ್ರಿಗಳ ಜೊತೆ ಮಾತನಾಡಲು ನಾನೇ ಸಿದ್ಧ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.