ಬೆಂಗಳೂರು : ರಾಜ್ಯ ಸರಕಾರ ಜಾರಿಗೆ ತಂದಿರುವ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ನೋಂದಣಿ ಕಾರ್ಯ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಸಂಜೆ 5.30 ಗಂಟೆವರೆಗೆ ಒಟ್ಟು 1, 61,958 ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ.
ಬೆಂಗಳೂರು ಒನ್, ಕರ್ನಾಟಕ ಒನ್ ಹಾಗು ಗ್ರಾಮ ಒನ್‌ಗಳಲ್ಲಿ ನೋಂದಣಿ ನಿರಾತಂಕವಾಗಿ ನಡೆಯಿತು.
ನೋಂದಣಿ ಪ್ರಕ್ರಿಯೆ ಸರಳೀಕರಣವಾಗಿದ್ದು, ಗ್ರಾಹಕರು ಯಾವುದೇ ದಾಖಲೆಗಳನ್ನು ನೀಡಬೇಕಾಗಿಲ್ಲ. ವಿದ್ಯುತ್ ಸಂಖ್ಯೆಯಲ್ಲಿರುವ ಖಾತೆ ಸಂಖ್ಯೆ, ಗ್ರಾಹಕರ ಆಧಾರ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನಷ್ಟೇ ನಮೂದಿಸಿದರೆ ಸಾಕು. ನೋಂದಣಿ ಪ್ರಕ್ರಿಯೆ ರಾಜ್ಯದ ಎಲ್ಲ ಕರ್ನಾಟಕ ಒನ್, ಗ್ರಾಮ ಒನ್ ಹಾಗು ಬೆಂಗಳೂರು ಒನ್ ಕೇಂದ್ರಗಳಲ್ಲಿ ನಡೆಯುತ್ತಿದೆ. ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಮೂಲಕ ನೋಂದಣಿ ಮಾಡಲಾಗುತ್ತಿದೆ. ನೋಂದಣಿ ಪ್ರಕ್ರಿಯೆಗೆ ಯಾವುದೇ ಗಡುವು ನಿಗದಿಪಡಿಸಲಾಗಿಲ್ಲ. ಆದ್ದರಿಂದ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೊದಲನೇ ದಿನವಾದ ನಿನ್ನೆ (ಭಾನುವಾರ) ಗೃಹ ಜ್ಯೋತಿ ಯೋಜನೆಗಾಗಿ 55,000 ಗ್ರಾಹಕರು ಅರ್ಜಿ ಸಲ್ಲಿಸಿದ್ದರು. ರಜಾದಿನವಾದ ಭಾನುವಾರ ಕೂಡ ಬೆಳಗ್ಗೆ 11 ಗಂಟೆಗೆ ಆರಂಭವಾದ ಅರ್ಜಿ ಸಲ್ಲಿಕೆ ಸಂಜೆ 6 ಗಂಟೆ ವೇಳೆಗೆ ರಾಜ್ಯದಲ್ಲಿ ಒಟ್ಟು 55,000 ಗ್ರಾಹಕರು ಯೋಜನೆಗೆ ನೋಂದಾಯಿಸಿಕೊಂಡಿದ್ದರು ಎಂದು ಇಂಧನ ಇಲಾಖೆ ತಿಳಿಸಿತ್ತು.
ಬಾಡಿಗೆದಾರರ ವಾಸದ ಮನೆ ವಿಳಾಸಕ್ಕೆ ಆಧಾರ್ ಜೋಡಣೆ : ಗೃಹ ಜ್ಯೋತಿ ಯೋಜನೆ ಬಗ್ಗೆ ಫಲಾನುಭವಿಗಳಲ್ಲಿ ಸಾಕಷ್ಟು ಅನುಮಾನ, ಗೊಂದಲ ಏರ್ಪಟ್ಟಿದೆ. ಪ್ರಮುಖವಾಗಿ ಬಾಡಿಗೆದಾರರಿಗೆ ಗೃಹ ಜ್ಯೋತಿ ಯೋಜನೆ ಸಿಗುವ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಈ ಮುಂಚೆ ಹೊರಡಿಸಿದ್ದ ಆದೇಶದನ್ವಯ ಬಾಡಿಗೆದಾರರು ಉಚಿತ ವಿದ್ಯುತ್ ಯೋಜನೆಯಿಂದ ವಂಚಿತರಾಗುವ ಗೊಂದಲ ಕಂಡುಬಂದಿತ್ತು. ಆದರೆ, ಬಳಿಕ ಸಿಎಂ ಸಿದ್ದರಾಮಯ್ಯ ಬಾಡಿಗೆದಾರರಿಗೂ ಯೋಜನೆ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದರು.
ಕೆಲ ದಿನಗಳ ಹಿಂದೆ ಇಂಧನ ಇಲಾಖೆ ಕೆಲವು ಸ್ಪಷ್ಟೀಕರಣ ನೀಡಿದ್ದು, ಗೊಂದಲ ನಿವಾರಿಸಲು ಯತ್ನಿಸಿದೆ. ಆದರೂ ಬಾಡಿಗೆದಾರಿಗೆ ಗೃಹ ಜ್ಯೋತಿ ಸಿಗುವುದು ಮತ್ತೆ ಗೊಂದಲದಲ್ಲೇ ಇದೆ. ಬಾಡಿಗೆದಾರನು ವಾಸದ ಮನೆ ವಿಳಾಸಕ್ಕೆ ಆಧಾರ್ ಕಾರ್ಡ್ ಜೋಡಿಸಿದ್ದರೆ ಮಾತ್ರ ಯೋಜನೆ ಅನ್ವಯವಾಗಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಈ ಅಂಶವೇ ಬಾಡಿಗೆದಾರರಿಗೆ ಮತ್ತಷ್ಟು ಗೊಂದಲ ಉಂಟಾಗುವಂತೆ ಮಾಡಿದೆ.
ಷರತ್ತುಗಳೇನು? :
- 200 ಯೂನಿಟ್ಗಳ ಬಳಕೆಯ ಮಿತಿಯನ್ನು ಯಾವುದಾದರೂ ತಿಂಗಳಲ್ಲಿ ಮೀರಿದಲ್ಲಿ, ಆ ತಿಂಗಳ ಪೂರ್ಣ ವಿದ್ಯುತ್ ಬಿಲ್ ಪಾವತಿಸಿ, ಯೋಜನೆಯಲ್ಲಿ ಮುಂದುವರಿಯಬಹುದು.
- ಹೊಸ ಸಂಪರ್ಕ ಪಡೆದ ಗ್ರಾಹಕರಿಗೆ ಬಳಕೆ ಇತಿಹಾಸ ಇಲ್ಲದಿರುವುದರಿಂದ ರಾಜ್ಯದ ಗೃಹ ಬಳಕೆದಾರರು ಸರಾಸರಿ ಬಳಕೆಯ ಮಾಸಿಕ 53 ಯೂನಿಟ್‌ಗಳಾಗಿರುವುದರಿಂದ 53 ಯೂನಿಟ್‌ಗಳನ್ನೇ ನಿರ್ಧರಿಸಿ ಈ ಯೋಜನೆ ಸೌಲಭ್ಯ ಲಭಿಸಲಿದೆ.
- Multi Stored Apartment ಗಳಲ್ಲಿ ಯಾವ ಮನೆಗಳಿಗೆ ಪ್ರತ್ಯೇಕ ಮೀಟರ್ ಇದೆಯೋ ಹಾಗೂ ಮೀಟರ್ ರೀಡಿಂಗ್ ಮಾಡಲಾಗುತ್ತಿದೆಯೋ ಅಂತಹ ಎಲ್ಲ ಮನೆಗಳಿಗೆ ಈ ಯೋಜನೆ ಅನ್ವಯಿಸಲಿದೆ.
ಇದನ್ನೂ ಓದಿ :Guarantee scheme: ಗೃಹ ಜ್ಯೋತಿ ಯೋಜನೆಗೆ ಮೊದಲ ದಿನ 55 ಸಾವಿರ ಗ್ರಾಹಕರ ನೋಂದಣಿ