ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಬಂಡಾಯದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಮಾಜಿ ಸಚಿವ ಹಾಗು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ದೂರಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯೊಳಗೆ ಜೆಡಿಎಸ್ ಮುಗಿಸಲು ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಇಬ್ರಾಹಿಂ ಅವರು ಕಾಂಗ್ರೆಸ್ ಮಾತು ಕೇಳಿ ನೀವು ದುಡುಕಬಾರದು. ನಿಮ್ಮೊಂದಿಗೆ ಜೆಡಿಎಸ್ ವರಿಷ್ಠರಿದ್ದಾರೆ ಎಂದು ಹೇಳಿದರು.
ಮೈತ್ರಿ ಸಭೆಯಲ್ಲಿ ಇಬ್ರಾಹಿಂ ಕೂಡಾ ಇದ್ದರು: ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಬಂಡಾಯ ಇಲ್ಲ. ಪಕ್ಷ ಎರಡು ಭಾಗ ಆಗುವುದಿಲ್ಲ. ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕರೆದಿದ್ದ ಸಭೆಯಲ್ಲಿ ಸಿ.ಎಂ.ಇಬ್ರಾಹಿಂ ಕೂಡ ಇದ್ದರು. ಅವರು ಕೂಡಾ ಮೈತ್ರಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಜಿಟಿಡಿ ಹೇಳಿದರು. ಅಲ್ಲದೇ ಅರಮನೆ ಮೈದಾನದಲ್ಲಿ ಜೆಡಿಎಸ್ ಸಭೆ ನಡೆದಾಗ ಇಬ್ರಾಹಿಂ ಭಾಗವಹಿಸಿದ್ದರು. ಆ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬೆಂಬಲ ಘೋಷಿಸಿದ್ದರು. ಸೀಟು ಹಂಚಿಕೆ ವಿಚಾರದಲ್ಲೂ ಸರಿಯಾದ ತೀರ್ಮಾನ ಕೈಗೊಳ್ಳುವಂತೆ ಸಲಹೆಯನ್ನೂ ನೀಡಿದ್ದರು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಷ್ಟರ ಮಟ್ಟಿಗೆ ಗೆಲ್ಲಿಸಲು ಆಗಲಿಲ್ಲ ಎಂದು ಇಬ್ರಾಹಿಂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ದೇವೇಗೌಡರು ರಾಜೀನಾಮೆ ಬೇಡ, ಪಕ್ಷ ಕಟ್ಟೋಣ ಎಂದು ಕಿವಿಮಾತು ಹೇಳಿದ್ದರು. ಅವರೊಂದಿಗೆ ಮಾತನಾಡುವುದಾಗಿಯೂ ದೇವೇಗೌಡರು ಹೇಳಿದ್ದಾರೆ. ಯಾರದೋ ಒತ್ತಡಕ್ಕೆ ಮಣಿದು ಇಬ್ರಾಹಿಂ ಸಭೆ ನಡೆಸಿದ್ದಾರೆ ಎಂದು ಜಿಟಿಡಿ ತಿಳಿಸಿದರು.
ಇದೇ ವೇಳೆ, ಮಾಜಿ ಶಾಸಕ ಮಹಿಮಾ ಪಟೇಲ್ ಹಾಗೂ ಎಂ.ಪಿ.ನಾಡಗೌಡರು ಪಕ್ಷಕ್ಕೆ ಸೇರುವುದಾದರೆ ಅಭ್ಯಂತರವಿಲ್ಲ ಎಂದರು.
ವಿಧಾನಸಭೆ ಚುನಾವಣೆಗೆ ಮುನ್ನ ಜೆಡಿಎಸ್ ಮುಗಿಸಲು ಎರಡೂ ರಾಷ್ಟ್ರೀಯ ಪಕ್ಷಗಳು ತೀರ್ಮಾನ ಮಾಡಿದ್ದವು. ಆಗ ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷರಾಗಿ ದೇವೇಗೌಡರು ಮಾಡಿದರು. ದೆಹಲಿಗೆ ಕುಮಾರಸ್ವಾಮಿ ಕರೆದಿಲ್ಲ ಎಂಬ ಕಾರಣಕ್ಕೆ ಅವರು ಬೇಸರಗೊಂಡಿದ್ದಾರೆ. ಪಕ್ಷ ಈಗ ಸಂಕಷ್ಟದಲ್ಲಿದ್ದು ಇಬ್ರಾಹಿಂ ಅವರೇ ರಾಜ್ಯಾಧ್ಯಕ್ಷರಾಗಬೇಕೆಂದು ಮನವಿ ಮಾಡುತ್ತೇವೆ ಎಂದು ಜಿಟಿಡಿ ಹೇಳಿದರು.
ತನ್ವೀರ್ ಸೇಠ್ ಹೇಳಿದ್ದೇನು?:ಹುಟ್ಟು ಗುಣ ಸುಟ್ಟರೂ ಹೋಗಲ್ಲ ಅನ್ನುವ ಹಾಗೆ ಸಿ.ಎಂ.ಇಬ್ರಾಹಿಂ ಅವರಲ್ಲಿ ಕಾಂಗ್ರೆಸ್ ಗುಣ ಇದೆ ಎಂದು ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯಿಸಿದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ಕೊಡುವುದಾಗಿ ಹೇಳಿರುವ ಸಿ.ಎಂ.ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯೆಸಿದ ಸೇಠ್, ಅವರು ಇನ್ನೂ ಕಾಂಗ್ರೆಸ್ ಮನಸ್ಥಿತಿಯಲ್ಲಿದ್ದಾರೆ. ಅವರ ರಾಜಕೀಯ ಆರಂಭವಾಗಿದ್ದು ಕಾಂಗ್ರೆಸ್ನಿಂದ. ಹೀಗಾಗಿ ಹುಟ್ಟುಗುಣ ಸುಟ್ಟರೂ ಹೋಗಲ್ಲ ಎಂದರು.