ಕರ್ನಾಟಕ

karnataka

ETV Bharat / state

13,764 ಕೋಟಿ ರೂ. ಜಿಎಸ್‌ಟಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ - Bangalore latest news

ಇಂದು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ರಾಜ್ಯ ಸರ್ಕಾರ ಕಳೆದ ನಾಲ್ಕು ತಿಂಗಳ ಜಿಎಸ್‌ಟಿ ಪರಿಹಾರ 13,764 ಕೋಟಿ ರೂ. ಸಂದಾಯ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿತು.

Vidhanasowdha
Vidhanasowdha

By

Published : Aug 27, 2020, 10:02 PM IST

ಬೆಂಗಳೂರು : ಕೋವಿಡ್ ಮತ್ತು ಪ್ರವಾಹದಿಂದಾಗಿ ರಾಜ್ಯದ ಆರ್ಥಿಕ ಪ್ರಗತಿ ಸಾಧಿಸಲು ಕಷ್ಟವಾಗುತ್ತಿದ್ದು, ಕಳೆದ ನಾಲ್ಕು ತಿಂಗಳ ಜಿಎಸ್‌ಟಿ ಪರಿಹಾರ 13,764 ಕೋಟಿ ರೂ. ಸಂದಾಯ ಮಾಡುವಂತೆ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ.

ರಾಜ್ಯದ ಒಟ್ಟು ತೆರಿಗೆ ರಾಜಸ್ವ 1,09,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಆದರೆ, ಕೋವಿಡ್ ಮತ್ತು ಪ್ರವಾಹದಿಂದ ರಾಜಸ್ವದ ಕೊರತೆಯಾಗಿ ಇದರಿಂದ ಆರ್ಥಿಕ ಪ್ರಗತಿ ಸಾಧಿಸಲು ಕಷ್ಟವಾಗುತ್ತದೆ. ಜೊತೆಗೆ ಕೋವಿಡ್ ಎದುರಿಸಲು ಹೆಚ್ಚುವರಿ ಹಣಕಾಸಿನ ಅವಶ್ಯಕತೆ ಇದೆ. ಸಂವಿಧಾನ 101ರ ತಿದ್ದುಪಡಿಯ ವಿಧಿ 18ರ ಪ್ರಕಾರ ಜಿಎಸ್‌ಟಿ ಕೌನ್ಸಿಲ್ ರಾಜ್ಯಗಳಿಗೆ ತೆರಿಗೆ ಸಂಗ್ರಹದ ಕೊರತೆಯನ್ನು ನೀಗಿಸುವುದಾಗಿ ಸ್ಪಷ್ಟವಾಗಿ ಹೇಳಲಾಗಿದೆ. ಅದರಂತೆ ತಕ್ಷಣ ಪರಿಹಾರವನ್ನು ನೀಡಬೇಕು ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ.

ಕೋವಿಡ್ ಇದ್ದರೂ ಕಳೆದ ನಾಲ್ಕು ತಿಂಗಳ ಜಿಎಸ್‌ಟಿ ತೆರಿಗೆ ಸಂಗ್ರಹ ಶೇ 71.61ರಷ್ಟು ಸಾಧಿಸಲಾಗಿದೆ. ಇದು ಇತರೆ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಜಿಎಸ್‌ಟಿ ಪರಿಹಾರ 13, 764 ಕೋಟಿ ರೂ. ಆಗಿದ್ದು, ಇದರ ಸಂದಾಯ ರಾಜ್ಯದ ಆರ್ಥಿಕತೆಗೆ ಅವಶ್ಯಕತೆ ಇದೆ. ತೆರಿಗೆ ಪರಿಹಾರಕ್ಕಾಗಿ ವಿಧಿಸುವ ಸೆಸ್ ಕೇಂದ್ರ ಸರ್ಕಾರದ ಪರಿಹಾರದ ಖಾತೆಗೆ ನೇರವಾಗಿ ಜಮೆ ಆಗುವುದರಿಂದ ರಾಜ್ಯಗಳು ಸಾಲ ಪಡೆಯಲು ಕಷ್ಟವಾಗುತ್ತದೆ‌. ಜೊತೆಗೆ ಈ ಸಾಲ ಮರುಪಾವತಿಸಲು ಕೇಂದ್ರ ಸರ್ಕಾರ ವಿಶೇಷ ತೆರಿಗೆ ವಿಧಿಸುವ ಅಧಿಕಾರ ಇದೆ. 2023ರ ನಂತರ ಅದರ ಅವಧಿಯ ಅಧಿಕಾರ ಇದೆ. ಅದಕ್ಕಾಗಿ ಕೇಂದ್ರ ಸರ್ಕಾರ ಸಾಲವನ್ನು ಪಡೆದು ತೆರಿಗೆ ಪರಿಹಾರವನ್ನು ಕೊಡುವುದು ಸೂಕ್ತ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

ಐಷಾರಾಮಿ ವಸ್ತುಗಳ ಮೇಲೆ ಮತ್ತು ತಂಬಾಕು, ಪಾನ್ ಮಸಾಲಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವಂತೆ ರಾಜ್ಯ ಸರ್ಕಾರ ಸಲಹೆ ನೀಡಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಈಗಿರುವ ಆರ್ಥಿಕ ಸಂಕಷ್ಟದ ಪರಿಹಾರ ಕಂಡುಕೊಳ್ಳುವುದು ಒಕ್ಕೂಟ ವ್ಯವಸ್ಥೆಯಲ್ಲಿ ಅನಿವಾರ್ಯ ಮತ್ತು ಅವಶ್ಯಕವಾಗಿರುತ್ತದೆ. ಕರ್ನಾಟಕ ಕೇಂದ್ರದ ಜೊತೆಗೆ ಎಲ್ಲಾ ಸಹಕಾರ ನೀಡುವುದಾಗಿ ಸಭೆಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕೇಂದ್ರ, ರಾಜ್ಯಗಳಿಗೆ ಯಾವುದೇ ಹೊರೆ ಇಲ್ಲದೆ ಸಾಲವನ್ನು ಪಡೆಯುವ ವ್ಯವಸ್ಥೆಯನ್ನು ಮಾಡುತ್ತದೆ. ಈ ಸಾಲವನ್ನು ಮೂರು ವರ್ಷ ಪರಿಹಾರ ಸೆಸ್ ಅನ್ನು ವಿಸ್ತರಿಸುವ ಮೂಲಕ ಸಾಲವನ್ನು ಮರುಪಾವತಿಸಲಾಗುತ್ತದೆ ಎಂದು ಪ್ರಸ್ತಾವನೆ ಮಂಡಿಸಿದರು. ರಾಜ್ಯಗಳಿಗೆ ಈ ಬಗ್ಗೆ ಒಪ್ಪಿಗೆ ಸೂಚಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ.

ABOUT THE AUTHOR

...view details