ಕರ್ನಾಟಕ

karnataka

ETV Bharat / state

ಗೃಹಲಕ್ಷ್ಮಿ ಯೋಜನೆ: ಇನ್ನು ಮುಂದೆ ನಾಡದೇವತೆ ಚಾಮುಂಡೇಶ್ವರಿಗೂ ಪ್ರತಿ ತಿಂಗಳು 2 ಸಾವಿರ ರೂಪಾಯಿ ಜಮೆ - ​ ETV Bharat Karnataka

ಜಗನ್ಮಾತೆ ಚಾಮುಂಡೇಶ್ವರಿಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ 2,000 ರೂಪಾಯಿ ಹಣ ಜಮೆ ಮಾಡುವಂತೆ ಡಿಸಿಎಂ ಡಿಕೆಶಿ ಅವರಿಗೆ ಎಂಎಲ್​ಸಿ ದಿನೇಶ್ ಗೂಳಿಗೌಡ ಪತ್ರ ಬರೆದಿದ್ದರು. ಈ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿದೆ.

ಗೃಹಲಕ್ಷ್ಮಿ ಯೋಜನೆ
ಗೃಹಲಕ್ಷ್ಮಿ ಯೋಜನೆ

By ETV Bharat Karnataka Team

Published : Nov 17, 2023, 11:09 AM IST

ಬೆಂಗಳೂರು: ಇನ್ಮುಂದೆ ಗೃಹಲಕ್ಷ್ಮಿ ಯೋಜನೆಯ 2,000 ರೂಪಾಯಿ ಹಣ ಫಲಾನುಭವಿಗಳ ಖಾತೆಗೆ ಜಮೆ ಮಾಡುವ ಮುನ್ನ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಜಮೆಯಾಗಲಿದೆ. ಈ ಸಂಬಂಧ ಎಂಎಲ್​ಸಿ ದಿನೇಶ್ ಗೂಳಿಗೌಡ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡುವ ಮುನ್ನ ನಾಡದೇವತೆಗೆ ಎರಡು ಸಾವಿರ ರೂಪಾಯಿಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಜಮೆ ಮಾಡಲು ಮನವಿ ಮಾಡಿದ್ದರು.

ಡಿ.ಕೆ.ಶಿವಕುಮಾರ್​ ಈ ಮನವಿಗೆ ತಕ್ಷಣ ಸ್ಪಂದಿಸಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಅವರಿಗೆ ತಮ್ಮ ಇಲಾಖೆಯಿಂದ ಅಥವಾ ವೈಯಕ್ತಿಕವಾಗಿ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿಗಳನ್ನು ದೇವಿಗೆ ಜಮೆ ಮಾಡಲು ಸೂಚನೆ ನೀಡಿದ್ದಾರೆ.

ದಿನೇಶ್ ಗೂಳಿಗೌಡ ಪತ್ರ: ರಾಜ್ಯ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ ಗೃಹ ಲಕ್ಷ್ಮೀ ಯೋಜನೆ ಜನರಿಗೆ ಅತ್ಯಂತ ಉಪಕಾರಿಯಾಗಿದೆ. ಚುನಾವಣಾಪೂರ್ವ ಕಾಂಗ್ರೆಸ್‌ ಪಕ್ಷದ ವತಿಯಿಂದ ಮೈಸೂರಿನ ನಾಡದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ತೆರಳಿ ಪಕ್ಷದ ಐದು ಗ್ಯಾರಂಟಿಗಳ ಕಾರ್ಡ್‌ಗಳನ್ನು ಇಟ್ಟು ದೇವಿಯ ಬಳಿ, ಶಕ್ತಿ ಕೊಡು ಎಂದು ಕೋರಿಕೆ ಇಡಲಾಗಿತ್ತು. ಆ ಸಂದರ್ಭದಲ್ಲಿ ಹರಕೆಯನ್ನು ನಾಡದೇವತೆ ಬಳಿ ಮಾಡಿಕೊಳ್ಳಲಾಗಿತ್ತು. ಪಕ್ಷ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಈಡೇರಿಸುವ ವಾಗ್ದಾನ ಮಾಡಲಾಗಿತ್ತು.

ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದರು. ಇದರ ಪರಿಣಾಮ 135 ಸ್ಥಾನಗಳೊಂದಿಗೆ ಸಂಪೂರ್ಣ ಬಹುಮತ ಪಡೆದು ಈಗ ಜನಪರ ಜನಪ್ರಿಯ ಆಡಳಿತ ನೀಡುತ್ತಿದೆ. ಇದಕ್ಕೆ ಕಾರಣವಾಗಿರುವ, ಆಶೀರ್ವಾದ ನೀಡಿ ಹರಸಿರುವ ಜಗನ್ಮಾತೆ ಚಾಮುಂಡೇಶ್ವರಿಗೆ ಮೈಸೂರಿನಲ್ಲಿ ಪೂಜೆ ಸಲ್ಲಿಸಿ ಆಗಸ್ಟ್ 30ರಂದು ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಈ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ.

ಅಂದು ಹರಕೆ ತೀರಿಸಲು ಡಿ.ಕೆ ಶಿವಕುಮಾರ್, ಲಕ್ಷ್ಮಿ ಹೆಬ್ಬಾಳ್ಕರ್ ಹಾಗು ಶಾಸಕರು ದೇಗುಲಕ್ಕೆ ಭೇಟಿ ಮಾಡಿ, ವಿಶೇಷ ಪೂಜೆ ಸಲ್ಲಿಸಿದ್ದರು. ಮಾತ್ರವಲ್ಲ, ಗೃಹ ಲಕ್ಷ್ಮಿಯರಿಗೆ ನೀಡುವ 2 ಸಾವಿರ ರೂ.ಗಳನ್ನು ದೇವಿಗೆ ಸಲ್ಲಿಸಲಾಗಿತ್ತು. ಈಗ ಪ್ರತಿ ತಿಂಗಳು 2 ಸಾವಿರ ರೂ.ಗಳನ್ನು ರಾಜ್ಯದ 1.2 ಕೋಟಿಗೂ ಅಧಿಕ ಕುಟುಂಬಗಳಿಗೆ ಜಮೆ ಮಾಡಲಾಗುತ್ತಿದೆ. ಆ ಹಣದಿಂದ ಸಾಕಷ್ಟು ಬಡ ಕುಟುಂಬಗಳ ಜೀವನ ಮಟ್ಟ ಸುಧಾರಣೆಗೊಂಡಿದೆ. ಅಲ್ಲದೆ, ನಮ್ಮ ಸರ್ಕಾರದ ಹಾಗೂ ತಮ್ಮಗಳ ಬಗ್ಗೆ, ಶುಭ ಹಾರೈಕೆಯನ್ನು ಮಾಡುತ್ತಲೇ ಇದ್ದಾರೆ. ಈಗ ಪ್ರತಿ ತಿಂಗಳು ಮನೆಯ ಯಜಮಾನಿಯರ ಖಾತೆಗೆ ನಿಖರವಾಗಿ ತಲಾ 2 ಸಾವಿರ ರೂ. ಹಣ ಜಮಾ ಆಗುತ್ತಿರುವುದು ಖುಷಿಯ ವಿಚಾರ.

ಅದೇ ರೀತಿ ಪ್ರತಿ ತಿಂಗಳ ಕಂತನ್ನು ಯಜಮಾನಿಯರಿಗೆ ಪಾವತಿಸುವ ಮೊದಲು ನಾಡದೇವಿ ಚಾಮುಂಡೇಶ್ವರಿಯ ಸನ್ನಧಿಗೂ ಸಲ್ಲಿಸಬೇಕು. ಆ ಮೂಲಕ ಮೊದಲ ಹಣ ನಾಡದೇವತೆಗೆ ಸಲ್ಲಿಕೆಯಾಗಿ ಬಳಿಕ ಉಳಿದವರಿಗೆ ಪಾವತಿಯಾಗುವಂತೆ ವ್ಯವಸ್ಥೆ ಮಾಡಲು ಕೋರಿದ್ದಾರೆ.

ಇದನ್ನೂ ಓದಿ:ಧಾರ್ಮಿಕ ಪರಿಷತ್ ಪ್ರಥಮ ಸಭೆ: ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆ ಸೇರಿ ಹಲವು ನಿರ್ಧಾರಗಳು

ABOUT THE AUTHOR

...view details