ಬೆಂಗಳೂರು: ವಕೀಲರು, ಮತ್ತುವರ ಕುಟುಂಬಸ್ಥರಿಗೆ ಗುಂಪು ವಿಮಾ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅತ್ಯಾಕರ್ಷಕ ರಿಯಾಯಿತಿ ಒಳಗೊಂಡ ಅತ್ಯುತ್ತಮ ದರ ಪ್ರೀಮಿಯಂ ನಿರ್ಧಾರ ಹಾಗೂ ಪ್ರಸ್ತಾವಗಳ ಅಧ್ಯಯನಕ್ಕಾಗಿ ಹಿರಿಯ ವಕೀಲರಾದ ಎನ್.ಎಸ್.ಎಸ್.ಗುಪ್ತಾ ಅವರ ನೇತೃತ್ವದಲ್ಲಿ ಏಳು ಸದಸ್ಯರ ಸಮಿತಿಯನ್ನು ರಚನೆ ಮಾಡಲಾಗಿದೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಬೆಂಗಳೂರು ವಕೀಲರ ಸಂಘ, ಹಿರಿಯ ವಕೀಲರಾದ ಉದಯ್ ಹೊಳ್ಳ, ಪ್ರಮೋದ್ ಕಠಾವಿ, ಕೆ.ಎನ್. ಫಣೀಂದ್ರ, ಲಕ್ಷ್ಮಿ ಐಯ್ಯಂಗಾರ್, ಪ್ರಶಾಂತ್ ಚಂದ್ರ ಹಾಗೂ ಬಿ.ಎಂ.ಅರುಣ್ ಸಮಿತಿಯ ಇತರೆ ಸದಸ್ಯರಾಗಿದ್ದಾರೆ. ಫಣೀಂದ್ರ ಅವರು ಸಂಚಾಲಕರಾಗಿಯೂ ಕೆಲಸ ನಿರ್ವಹಿಸಲಿದ್ದಾರೆ ಎಂದು ತಿಳಿಸಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ವಿಮಾ ಆಯ್ಕೆಗಳನ್ನು ಅಧ್ಯಯನ ನಡೆಸಲು ಒಕ್ಕೋರಲಿನಿಂದ ಸಮಿತಿ ರಚಿಸಲು ಜನವರಿ 12ರಂದು ಬೆಂಗಳೂರು ವಕೀಲರ ಸಂಘದ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ವಿಮಾ ಸೌಲಭ್ಯವಿರುವ ಆಯ್ಕೆಯನ್ನು 2-3 ತಿಂಗಳಲ್ಲಿ ಅಂತಿಮಗೊಳಿಸಬೇಕು: ಮಾರುಕಟ್ಟೆಯಲ್ಲಿರುವ ಎಲ್ಲ ವಿಮಾ ಕಂಪನಿಗಳಿಂದ ಪ್ರಸ್ತಾವ ಸ್ವೀಕರಿಸಿ, ಅತ್ಯುತ್ತಮವಾದ ನಗದು ರಹಿತ ವೈದ್ಯಕೀಯ ವಿಮಾ ಸೌಲಭ್ಯವಿರುವ ಆಯ್ಕೆಯನ್ನು 2-3 ತಿಂಗಳಲ್ಲಿ ಅಂತಿಮಗೊಳಿಸುವಂತೆ ಸಮಿತಿಗೆ ಸಂಘ ಕೋರಿದೆ. ಐವತ್ತು ಸಾವಿರದಿಂದ ಒಂದು ಲಕ್ಷ ರೂಪಾಯಿ (ವಕೀಲರು ಮತ್ತು ಕುಟುಂಬ ಸದಸ್ಯರು), ಎರಡೂವರೆ ಲಕ್ಷ ರೂಪಾಯಿ (ವಕೀಲರು ಮತ್ತು ಕುಟುಂಬ ಸದಸ್ಯರು), ಎರಡೂವರೆಯಿಂದ ಐದು ಲಕ್ಷ ರೂಪಾಯಿ (ವಕೀಲರು ಮತ್ತು ಕುಟುಂಬ ಸದಸ್ಯರು). ಈ ಮೇಲೆ ಉಲ್ಲೇಖಿಸಿರುವ ಮೊತ್ತಕ್ಕೆ ವಿಮೆ ಸೌಲಭ್ಯವನ್ನು ಸಮಿತಿ ಪರಿಶೀಲಿಸಬೇಕು. ಸಮಿತಿಗೆ ನೆರವು ನೀಡುವುದಕ್ಕಾಗಿ ಯಾರು ಬೇಕಾದರೂ ಸಲಹೆಗಳನ್ನು ನೀಡಬಹುದಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ಬೆಂಗಳೂರು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ವಿವೇಕ್ ರೆಡ್ಡಿ ಆಯ್ಕೆ : ನಳಿನ್‍ಕುಮಾರ್ ಕಟೀಲ್ ಅಭಿನಂದನೆ