ಕರ್ನಾಟಕ

karnataka

ETV Bharat / state

ಅಂತರ್ಜಲ ಮಟ್ಟ ಪಾತಾಳಕ್ಕೆ! 2 ಸಾವಿರ ಅಡಿ ಕೊರೆಸಿದರೂ ಬೊಗಸೆ ನೀರಿಲ್ಲ! - kannada news

ವರ್ಷಪೂರ್ತಿ ಜೀವಜಲ ಒದಗಿಸುತ್ತಿದ್ದ ಕೆರೆಗಳು ಬತ್ತಿಹೋದರೆ ಅವುಗಳನ್ನು ಅವಲಂಬಿಸಿ ಬದುಕುವ ಜನ, ಜಾನುವಾರುಗಳ ಬದುಕು ದುಸ್ತರವಾಗುತ್ತದೆ ಎನ್ನುವುದಕ್ಕೆ ಜೀವಂತ ಉದಾಹರಣೆ ದೇವನಹಳ್ಳಿ.

ಕೆರೆಯನ್ನು ಅವಲಂಬಿಸಿದ್ದ ಪ್ರದೇಶಗಳ ಜನರ ಜೀವನದ ಮೇಲೆ ಬರೆ

By

Published : May 2, 2019, 9:35 PM IST

ಬೆಂಗಳೂರು: ನೀರು ಮನುಷ್ಯ ಸೇರಿದಂತೆ ಭೂಮಿ ಮೇಲಿರುವ ಸಕಲ ಜೀವರಾಶಿಗಳಿಗೆ ಅದೆಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಜಲಮೂಲಗಳಲ್ಲಿ ನೀರು ಮಾಯವಾದರೆ ಜೀವರಾಶಿಗಳ ಪಾಡು ದುಸ್ತರವಾಗುತ್ತವೆ. ಇಂಥದ್ದೇ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ದೊಡ್ಡ ಕೆರೆ ಮತ್ತು ಚಿಕ್ಕ ಕೆರೆಗಳು ಬತ್ತಿ ಹೋಗಿವೆ. ಇಲ್ಲಿ ನೀರಿಗಾಗಿ ಜನರು ಪರದಾಡುವ ಸ್ಥಿತಿ ಇದೆ. ಶುದ್ಧ ಕುಡಿಯುವ ನೀರಿಲ್ಲದೇ, ತೊಂದರೆ ಅನುಭವಿಸುತ್ತಿರುವ ಜನರಿಗೆ ಬೇಸಿಗೆಯ ಬಿಸಿ ಹೈರಾಣು ಮಾಡುತ್ತಿದೆ. ದಶಕಗಳ ಹಿಂದೆ ಇಲ್ಲಿನ ಸುತ್ತಮುತ್ತಲಿನ ಬೆಟ್ಟಗುಡ್ಡಗಳಿಂದ ಹರಿದು ಬಂದ ನೀರು ನೂರಾರು ಎಕರೆ ಪ್ರದೇಶಗಳ ಈ ಕೆರೆಗಳಲ್ಲಿ ಸಂಗ್ರಹಗೊಂಡು ಜನರ ಜೀವನಾಡಿಯಾಗಿತ್ತು. ಆದರೆ, ಸರಿಯಾದ ನಿರ್ವಹಣೆ ಕೊರತೆಯಿಂದ ದೇವನಹಳ್ಳಿಯ ದೊಡ್ಡ ಕೆರೆಯ ಒಡಲು ಬರಿದಾಗಿ ಕೆರೆ ಸುತ್ತಲಿನ ಸುಮಾರು ಐವತ್ತು ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕಿಳಿದಿದೆ.

ಅಚ್ಚರಿ ಅಂದ್ರೆ, 1,500 ರಿಂದ 2,000 ಅಡಿ ಆಳದವರೆಗೆ ಕೊಳವೆಬಾವಿ ಕೊರೆದರೂ ಇಲ್ಲಿ ಹನಿ ನೀರು ಸಿಗುವುದು ಡೌಟು. ಹೀಗಾಗಿ ಸುತ್ತಲಿನ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಕಳೆದ ಹತ್ತು ವರ್ಷಗಳಿಂದೀಚೆಗೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಇದರ ಜೊತೆಗೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಸುತ್ತಮುತ್ತಲಿನ ಗ್ರಾಮಗಳಿಗೆ ಬೇಸಿಗೆ ಆರಂಭಕ್ಕೂ ಮುನ್ನವೇ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

ಕೆರೆಯನ್ನು ಅವಲಂಬಿಸಿದ್ದ ಪ್ರದೇಶಗಳ ಜನರ ಜೀವನದ ಮೇಲೆ ಬರೆ

ಕೆರೆ ಬತ್ತಿದ ಬಳಿಕ ಕೆರೆ ಸುತ್ತಲಿನ ಗ್ರಾಮಗಳ ಒಂದೆರಡು ಕಿ.ಮೀ ದೂರದ ಪ್ರದೇಶದಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಕಳೆದ ಎರಡು ಮೂರು ವರ್ಷಗಳಲ್ಲಿ ದೇವನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮರಗಿಡಗಳು, ರೈತರ ‌ಬೆಳೆ ಸೇರಿದಂತೆ ದಾಖಲೆಯ ಪ್ರಮಾಣದಲ್ಲಿ ಪರಿಸರದಲ್ಲಿನ ಮರಗಳು ಒಣಗಿ ನಾಶವಾಗುತ್ತಿದೆ. ಕೆರೆ ಸುತ್ತಮುತ್ತಲಿನ ಹಲವು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ಉಂಟಾಗಿದೆ.

ಈ ವರ್ಷದಲ್ಲೇ ದೇವನಹಳ್ಳಿ ತಾಲೂಕಿನಾದ್ಯಾಂತ 150 ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು ಶೇಕಡ 10 ರಷ್ಟು ಬೋರ್‌ ವೆಲ್‌ಗಳಲ್ಲಿ ಮಾತ್ರ ನೀರು ಸಿಕ್ಕಿದೆ. ಉಳಿದೆಲ್ಲವೂ ಖಾಲಿ! ನೀರು ಸಿಕ್ಕಿದ್ದು‌ ಕೂಡಾ 1,500 ಅಡಿಗಳಿಗಿಂತ ಕೆಳಗೆ. ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಪೂರೈಸುವ ನಿಯಮಿತ ನೀರು ಜನರಿಗೆ ಆಧಾರವಾಗಿದೆ. ‌ಇನ್ನು ದನಕರುಗಳ ಪಾಡು ಹೇಳತೀರದು. ನೀರಿಲ್ಲದೆ ದನಕರುಗಳನ್ನು ರೈತರು ಮಾರಾಟ ಮಾಡುತ್ತಿದ್ದಾರೆ.

ಈ ನಡುವೆ ರಾಜ್ಯ ಸರಕಾರ ಎತ್ತಿನ ಹೊಳೆ, ಎನ್.ಎಚ್ ವ್ಯಾಲಿ, ಕೆಸಿ ವ್ಯಾಲಿ ಯೋಜನೆಗಳ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸೇರಿದಂತೆ ಬಯಲು ಸೀಮೆಗೆ ನೀರು ಹರಿಸುವ ಯೋಜನೆಯ ಕಾಮಗಾರಿ ಆರಂಭಿಸಿತ್ತು. ಈ ಯೋಜನೆಗಳೇನೋ ರೈತರಲ್ಲಿ ಬದುಕುವ ಆಸೆ ಮೂಡಿಸಿದೆ.ಸುತ್ತಲಿನ 20 ಕ್ಕೂ ಹೆಚ್ಚು ಕೆರೆಗಳಿಗೆ 13 ಸಾವಿರ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕುಡಿಯುವ ನೀರು ತುಂಬಿಸುವ ಯೋಜನೆ ಶುರುವಾಗಿ ಹತ್ತು ವರ್ಷಗಳಾದರೂ ಕಾಮಗಾರಿ ಮುಗಿದಿಲ್ಲ, ನೀರೂ ಬಂದಿಲ್ಲ. ಹಾಗಾಗಿ ಆದಷ್ಟು ಬೇಗ ಈ ಯೋಜನೆಗಳ ಕಾಮಗಾರಿ ಮುಗಿದಿದ್ದೇ ಆದಲ್ಲಿ ಸುತ್ತಲಿನ ಭೂಪ್ರದೇಶದಲ್ಲಿ ಅಂತರ್ಜಲ ಹೆಚ್ಚಳವಾಗಿ ಕೃಷಿ ಚಟುವಟಿಕೆಗಳು ಗರಿಗೆದರಲಿವೆ.

ABOUT THE AUTHOR

...view details