ಕರ್ನಾಟಕ

karnataka

ETV Bharat / state

ಕುಂಭದ್ರೋಣ ಮಳೆ ಸುರಿದರೂ ಕರ್ನಾಟಕದಲ್ಲಿ ಅಂತರ್ಜಲ ಮಟ್ಟ ಏರುತ್ತಿಲ್ಲವೇಕೆ?

ಅತಿವೃಷ್ಠಿಯಿಂದ ರಾಜ್ಯ ತತ್ತರಿಸಿದ್ದರೂ ಅಂತರ್ಜಲ ಮಟ್ಟದ ಹೆಚ್ಚಳದ ಕಂಡು ಬಂದಿಲ್ಲ. ಬಯಲುಸೀಮೆಯ ಜೊತೆಗೆ ಮಲೆನಾಡು, ಕರಾವಳಿಯಲ್ಲಿಯೂ ಅಂತರ್ಜಲ ಮಟ್ಟದಲ್ಲಿ ಕುಸಿತ ಕಂಡು ಬಂದಿದ್ದು ಆತಂಕದ ವಿಚಾರ.

By

Published : Mar 15, 2020, 4:56 PM IST

Groundwater level increase in Karnataka
ಸಚಿವ ಜೆ.ಸಿ. ಮಾಧುಸ್ವಾಮಿ

ಬೆಂಗಳೂರು: ಕಳೆದ ಐದು ವರ್ಷಗಳ ಅವಧಿಯಲ್ಲಿ 1,737 ಕೊಳವೆ ಬಾವಿಗಳಲ್ಲಿ, ತಾಲೂಕುವಾರು ವಾರ್ಷಿಕ ಅಂತರ್ಜಲ ಮಟ್ಟದ ಪರಿಸ್ಥಿತಿ ಪರಿಶೀಲನೆ ನಡೆಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ವಿಧಾನ ಪರಿಷತ್​​ನಲ್ಲಿ ಪಿ.ಆರ್. ರಮೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ 124 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟದಲ್ಲಿ ಕುಸಿತ ಕಂಡು ಬಂದಿದ್ದು, 54 ತಾಲೂಕುಗಳಲ್ಲಿ ಮಾತ್ರ ಅಂತರ್ಜಲ ಮಟ್ಟದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ರಾಮನಗರ ಜಿಲ್ಲೆಯ 4 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ಉತ್ತರ ಕನ್ನಡ ಜಿಲ್ಲೆಯ 8 ತಾಲ್ಲೂಕುಗಳ ಅಂತರ್ಜಲ ಮಟ್ಟ ಹೆಚ್ಚಳವಾಗಿರುವುದು ದಾಖಲೆಯಾಗಿದೆ. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ, ಚಿಕ್ಕಮಗಳೂರು, ಕೋಟೆನಾಡು ಚಿತ್ರದುರ್ಗ, ವಿಜಯಪುರ, ಕಲಬುರಗಿ, ಕೋಲಾರ, ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಅಂತರ್ಜಲ ಮಟ್ಟ ಕುಸಿದಿದೆ ಎನ್ನುವ ಆತಂಕಕಾರಿ ಮಾಹಿತಿ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಶೇ.100ರಷ್ಟು ಕುಡಿಯುವ ನೀರಿಗೆ ಕೊಳವೆ ಬಾವಿಗಳನ್ನು ಅವಲಂಬಿಸಿದ್ದಾರೆ. ವಿಜಯಪುರ ಶೇ.21, ಯಾದಗಿರಿ ಶೇ.23 ರಷ್ಟು ಪ್ರಮಾಣದಲ್ಲಿ ಕೊಳವೆ ಬಾವಿ ಅವಲಂಬಿಸಿದ್ದು, ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಚೆಕ್ ಡ್ಯಾಂ, ಬ್ಯಾರೇಜ್, ಕಿಂಡಿ ಅಣೆಕಟ್ಟು, ಇಂಗುಗುಂಡಿ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳುತ್ತಿರುವುದಾಗಿ ಸಚಿವರು ಮಾಹಿತಿ ನೀಡಿದ್ದಾರೆ.

ಅಂತರ್ಜಲದ ಮಟ್ಟದಲ್ಲಿ ಹೆಚ್ಚಳ ಕಂಡ ತಾಲೂಕುಗಳು:

ಬಾಗಲಕೋಟೆ ಜಿಲ್ಲೆಯ ಬೀಳಗಿ, ಮುಧೋಳ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಬೆಳಗಾವಿ ನಗರ, ಗೋಕಾಕ್, ಹುಕ್ಕೇರಿ, ರಾಯಭಾಗ್, ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಹಡಗಲಿ, ಸಿರುಗುಪ್ಪ, ಬೀದರ್ ಜಿಲ್ಲೆಯ ಭಾಲ್ಕಿ, ಬಸವಕಲ್ಯಾಣ, ಬೀದರ್ ನಗರ, ಹುಮನಾಬಾದ್, ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲ್ಲೂಕು, ಗುಂಡ್ಲುಪೇಟೆ, ಕೊಳ್ಳೆಗಾಲ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೆಪಲ್ಲಿ, ಚಿಕ್ಕಬಳ್ಳಾಪುರ ನಗರ, ಗುಡಿಬಂಡೆ, ಮಂಗಳೂರು ಜಿಲ್ಲೆಯ ಬಂಡ್ವಾಳದಲ್ಲಿ ಅಂತರ್ಜಲದ ಮಟ್ಟದಲ್ಲಿ ಹೆಚ್ಚಳ ಕಂಡು ಬಂದಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಧಾರವಾಡ ಜಿಲ್ಲೆಯ ಧಾರವಾಡ ನಗರ, ಗದಗ ಜಿಲ್ಲೆಯ ಗದಗ ನಗರ, ಮುಂಡರಗಿ, ಹಾಸನ ಜಿಲ್ಲೆಯ ಆಲೂರು, ಅರಕಲಗೋಡು, ಹಾವೇರಿ ಜಿಲ್ಲೆಯ ಸವಣೂರು, ಶಿಗ್ಗಾವಿ, ಕೊಡಗು ಜಿಲ್ಲೆಯ ವಿರಾಜಪೇಟೆ, ಕೊಪ್ಪಳ ಜಿಲ್ಲೆಯ ಗಂಗಾವತಿ, ಮಂಡ್ಯ ಜಿಲ್ಲೆಯ ಮದ್ದೂರು, ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ, ನಂಜನಗೂಡು, ಪಿರಿಯಾಪಟ್ಟಣ, ರಾಮನಗರ ಜಿಲ್ಲೆಯ ಚನ್ನಪಟ್ಟಣ, ಕನಕಪುರ, ಮಾಗಡಿ, ರಾಮಗರ ಪಟ್ಟಣ, ಉಡುಪಿ ಜಿಲ್ಲೆಯ ಕುಂದಾಪುರ ,ಉತ್ತರ ಕನ್ನಡ ಜಿಲ್ಲೆಯ ಅಂಕೋಲ, ಭಟ್ಕಳ, ಹಳಿಯಾಳ, ಕಾರವಾರ, ಮುಂಡಗೋಡು, ಸಿದ್ದಾಪುರ, ಶಿರಸಿ, ಯಲ್ಲಾಪುರ ಹಾಗೂ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಅಂತರ್ಜಲದ ಮಟ್ಟದಲ್ಲಿ ಹೆಚ್ಚಳ ಕಂಡು ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details