ಕರ್ನಾಟಕ

karnataka

ETV Bharat / state

ಗೃಹ ಲಕ್ಷ್ಮಿ ಯೋಜನೆ ನೋಂದಣಿ ಪ್ರಕ್ರಿಯೆ ಸ್ಥಗಿತವಾಗಿಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು? - ಈಟಿವಿ ಭಾರತ್​ ಕನ್ನಡ ನ್ಯೂಸ್

ಗೃಹ ಲಕ್ಷ್ಮಿ ಯೋಜನೆ ನೋಂದಣಿ ಪ್ರಕ್ರಿಯೆ ಸ್ಥಗಿತವಾಗಿರುವ ಬಗ್ಗೆ ಅಚಾತುರ್ಯದಿಂದ ವೆಬ್ ಸೈಟ್​ನಲ್ಲಿ ಪೋಸ್ಟ್ ಮಾಡಲಾಗಿದೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

By ETV Bharat Karnataka Team

Published : Sep 7, 2023, 6:09 PM IST

ಗೃಹ ಲಕ್ಷ್ಮಿ ಯೋಜನೆ ನೋಂದಣಿ ಪ್ರಕ್ರಿಯೆ ಸ್ಥಗಿತವಾಗಿಲ್ಲ

ಬೆಂಗಳೂರು : ಗೃಹ ಲಕ್ಷ್ಮಿ ಯೋಜನೆ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಿರುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವೆಬ್ ಸೈಟ್​ನಲ್ಲಿ ಮಾಡಿದ ಪೋಸ್ಟ್ ಅಚಾತುರ್ಯದಿಂದಾಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಮಜಾಯಿಷಿ ನೀಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತನ್ನ ಅಧಿಕೃತ ವೆಬ್ ಸೈಟ್​ನಲ್ಲಿ ಇಂದು ಮಧ್ಯಾಹ್ನ ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿತ ಫಲಾನುಭವಿಗಳ ಖಾತೆಗೆ 2000 ರೂ. ಜಮಾಗೊಳಿಸುವ ಪ್ರಕ್ರಿಯೆಯಲ್ಲಿ ಗೊಂದಲವಾಗದಿರಲೆಂದು, ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿ ಸಲಾಗಿದ್ದು, ಶೀಘ್ರವೇ ನೋಂದಣಿ ಪುನರಾರಂಭಗೊಳ್ಳಲಿದೆ ಎಂದು ಪ್ರಕಟಿಸಲಾಗಿತ್ತು. ಇಲಾಖೆಯ ಈ ಪ್ರಕಟಣೆ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು.

ಈ ಸಂಬಂಧ ಸ್ಪಷ್ಟನೆ ನೀಡಿರುವ ಲಕ್ಷ್ಮಿ ಹೆಬ್ಬಾಳ್ಕರ್, ಇಲಾಖೆ ವೆಬ್ ಸೈಟ್​ನಲ್ಲಿ ಮಾಡಿರುವ ಪ್ರಕಟಣೆ ಬಗ್ಗೆ ನನಗೆ ಗೊತ್ತಾಗಿಲ್ಲ. ಈ ಬಗ್ಗೆ ಇಲಾಖೆ ಕಾರ್ಯದರ್ಶಿ ಹಾಗೂ ನಿರ್ದೇಶಕರ ಬಳಿ ಚರ್ಚೆ ನಡೆಸಿದ್ದೇನೆ. ಯಾಕೆ ಹೀಗೆ ಆಗಿದೆ ಎಂದು ಗೊತ್ತಾಗಿಲ್ಲ. ಕೂಡಲೇ ಆ ಪೋಸ್ಟ್​ನ್ನು ತೆಗೆಸಿ ಹಾಕಲಾಗಿದೆ. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ನಿನ್ನೆನೂ ಕೂಡ 10,000 ನೋಂದಣಿ ಆಗಿದೆ. ಮುಂಚೆ 1 ಲಕ್ಷ ದಿಂದ 5 ಲಕ್ಷದವರೆಗೆ ಅರ್ಜಿ ಬರುತ್ತಿತ್ತು. ಈಗ ಕಡಿಮೆಯಾಗಿದ್ದು, ದಿನಕ್ಕೆ ಸುಮಾರು 10 ಸಾವಿರ ಅರ್ಜಿ ಬರುತ್ತಿದೆ ಎಂದು ತಿಳಿಸಿದರು.

ವೆಬ್ ಸೈಟ್​ನಲ್ಲಿ ಈ ರೀತಿ ಹೋಗಿರುವುದು ಅಚಾತುರ್ಯದಿಂದ ಆಗಿದೆ. ಸಂಬಂಧ ಪಟ್ಟವರಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಯಾರೂ ಗೊಂದಲಕ್ಕೀಡಾಗುವುದು ಬೇಡ. ಇದು ನಿರಂತರವಾಗಿ ನಡೆಯುವ ಯೋಜನೆ. ಈ ತರ ಮಾಡಿದವರಿಗೆ ನೋಟೀಸ್ ಜಾರಿ ಮಾಡಲು ತಿಳಿಸಲಾಗಿದೆ. ಇದು ಒಂದು ಸಣ್ಣ ವಿಚಾರವಲ್ಲ.‌ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಯಾರು ಇದನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್​ ಮಾಡಿದ್ದಾರೆ‌. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಸ್ಪಷ್ಟಪಡಿಸಿದರು.

63 ಲಕ್ಷ ಯಜಮಾನಿಯರಿಗೆ ಹಣ ಜಮೆ :ಗೃಹ ಲಕ್ಷ್ಮಿ ಯೋಜನೆಯಡಿ ಈವರೆಗೆ 63 ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ.
ನಾವು ಈಗಾಗಲೇ 1.8 ಕೋಟಿ ವರೆಗೆ ಇಲಾಖೆಯಿಂದ ಹಣ ಕಳಿಸಿ ಬಿಟ್ಟಿದ್ದೇವೆ. 1.28 ಕೋಟಿ ಯಜಮಾನಿಯರಿಗೆ ಹಣ ಸಂದಾಯ ಮಾಡುವುದು ನಮ್ಮ ಗುರಿ. ಯಾರು ಹೊಸ ಪಡಿತರ ಚೀಟಿ ಮಾಡುತ್ತಾರೆ. ಅವರಿಗೂ ಗೃಹ ಲಕ್ಷ್ಮಿ ಲಾಭ ಸಿಗಲಿದೆ ಎಂದರು.

ಯೋಜನೆಯಡಿ 1.12 ನೋಂದಣಿಯಾಗಿದೆ.‌ 14 ಲಕ್ಷ ಯಜಮಾನಿಗಳ ಅಪ್ ಲೋಡ್ ಆಗಬೇಕಿದೆ. ಎಲ್ಲಿಯೂ ಗೊಂದಲ‌ ಇಲ್ಲ. ಬ್ಯಾಂಕ್‌ನವರು ನಿತ್ಯ ಸ್ವಲ್ಪ ಸ್ವಲ್ಪವಾಗಿ ನಿಗದಿತ ಹಣವನ್ನು ಖಾತೆಗೆ ಜಮೆ ಮಾಡುತ್ತಿದ್ದಾರೆ. ನಮ್ಮ ಇಲಾಖೆ ಕಡೆಯಿಂದ ಹಣ ನೀಡಿದ್ದೇವೆ. ನಮ್ಮ‌ಕಡೆಯಿಂದ ಯಾವುದೇ ಸಮಸ್ಯೆ ಆಗಿಲ್ಲ. ದಿನಕ್ಕೆ 25 ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತೆ ಎಂದು ಅಂದುಕೊಂಡಿದ್ದೇವೆ. ಅದರ ಪ್ರಕಾರ ಒಂದು ವಾರದಲ್ಲಿ ಎಲ್ಲರ ಖಾತೆಗೆ ಹಣ ಜಮೆಯಾಗಲಿದೆ. ಮುಂದಿನ ತಿಂಗಳಿಂದ 1.12 ಕೋಟಿ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ಕೊಟ್ಟಿದ್ದಾರೆ.

ಇದನ್ನೂ ಓದಿ :ದೌರ್ಜನ್ಯ ನಡೆದು 120 ದಿನ ಕಳೆದರೂ ಆರೋಪ ಪಟ್ಟಿ ಏಕೆ ದಾಖಲಾಗಿಲ್ಲ: ಅಧಿಕಾರಿಗಳನ್ನು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ABOUT THE AUTHOR

...view details