ಬೆಂಗಳೂರು:ವಿವಾದಿತ ಎಪಿಎಂಸಿ (ತಿದ್ದುಪಡಿ) ಅಧ್ಯಾದೇಶ 2020ಕ್ಕೆ ಸಂಪುಟ ಅನುಮೋದನೆ ನೀಡಿದೆ. ರಾಜ್ಯಪಾಲರು ಈ ಅಧ್ಯಾದೇಶವನ್ನು ಸಂಪುಟ ಒಪ್ಪಿಗೆ ಬಳಿಕ ಕಳುಹಿಸಿಕೊಡುವಂತೆ ವಾಪಸ್ ಕಳುಹಿಸಿದ್ದರು. ಇಂದು ಸಂಪುಟ ಸಭೆ ಎಪಿಎಂಸಿ ತಿದ್ದುಪಡಿ ಅಧ್ಯಾದೇಶಕ್ಕೆ ಒಪ್ಪಿಗೆ ನೀಡಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಈ ಅಧ್ಯಾದೇಶದಲ್ಲಿ ಎರಡು ಕಾಯ್ದೆಗಳಿಗೆ ತಿದ್ದುಪಡಿ ಮಾಡಲಾಗಿದೆ. ಅದರಂತೆ ಮಾರುಕಟ್ಟೆ ಸಮಿತಿಗೆ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅಧಿಕಾರ ಇತ್ತು. ಈಗ ರೈತರು ತಾವು ಇಚ್ಛಿಸುವ ಖಾಸಗಿಯವರಿಗೆ ನೇರವಾಗಿ ಮಾರಬಹುದಾಗಿದೆ. ಹೀಗಾಗಿ ಮಾರುಕಟ್ಟೆ ಸಮಿತಿಗೆ ಮಾರುಕಟ್ಟೆ ಒಳಗೆ ಅಧಿಕಾರ ಇರುತ್ತದೆ. ಹೊರಗೆ ಇರುವುದಿಲ್ಲ. ಆದರೆ, ರಾಜ್ಯ ಮಾರುಕಟ್ಟೆ ಸಮಿತಿಯ ಅಧಿಕಾರ ಮೊಟಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಇದರಿಂದ ಮಧ್ಯವರ್ತಿಗಳ ಹಾವಳಿ ಕಡಿಮೆಯಾಗಲಿದೆ. ಆದರೆ ಈ ಬಗ್ಗೆ ಬಹಳ ಕೆಟ್ಟದಾಗಿ ಅಪಪ್ರಚಾರ ಮಾಡಲಾಗುತ್ತಿದೆ. ರೈತರು ಯಾರಿಗೆ ಬೇಕಾದರೂ ಮಾರಬಹುದು. ಈ ಸಂಬಂಧ ಅನೇಕ ವರ್ಷಗಳಿಂದ ಕಾನೂನು ಇತ್ತು ಎಂದು ಸ್ಪಷ್ಟಪಡಿಸಿದರು. ಖಾಸಗಿ ಕಂಪನಿಗಳು ಬ್ಯಾಂಕ್ ಗ್ಯಾರಂಟಿ ಇಡುವುದು ಕಡ್ಡಾಯವಾಗಿದೆ. ರೈತರ ಹಿತದೃಷ್ಟಿಯಿಂದ ಈ ತಿದ್ದುಪಡಿ ಮಾಡಲಾಗಿದೆ. ಕಮಿಷನ್ ಏಜೆಂಟ್ಗೆ ಇದರಿಂದ ನಷ್ಟವಾಗಲಿದೆ. ಮಾರುಕಟ್ಟೆಗೆ ಸೆಸ್ ಕಡಿಮೆಯಾಗಬಹುದು. ಆದರೆ ರೈತರ ಹಿತದೃಷ್ಟಿಯಿಂದ ಇದನ್ನು ತರಲಾಗಿದೆ ಎಂದರು.
ಬಿಡಿಎ ಅಕ್ರಮ ಸಕ್ರಮಕ್ಕೆ ಅಸ್ತು:
ಇನ್ನು ಬಿಡಿಎ ಬಡಾವಣೆ ಕಟ್ಟಡಗಳ ಅಕ್ರಮ ಸಕ್ರಮ ಯೋಜನೆಗೂ ಸಂಪುಟ ಅಸ್ತು ಎಂದಿದೆ. ಇದಕ್ಕಾಗಿ 38dಗೆ ತಿದ್ದುಪಡಿ ಮಾಡಲಾಗಿದೆ. ಬಡಾವಣೆಯಲ್ಲಿ 12 ವರ್ಷಕ್ಕೂ ಮುನ್ನ ಕಟ್ಟಿರುವ ಮನೆಗಳನ್ನು ಸಕ್ರಮ ಮಾಡಲಾಗುತ್ತದೆ ಎಂದು ತಿಳಿಸಿದರು.
ಅದರಂತೆ ಬಿಡಿಎಯ 6,000 ಎಕರೆ ಜಾಗದಲ್ಲಿ ಸುಮಾರು 75,000 ಅನಧಿಕೃತ ಕಟ್ಟಡಗಳಿವೆ. ಅವುಗಳನ್ನು ಸಕ್ರಮಗೊಳಿಸಲಾಗುವುದು. ಆದರೆ ಬಿಡಿಎಯ ಖಾಲಿ ನಿವೇಶನವನ್ನು ಸಕ್ರಮ ಮಾಡಲಾಗುವುದಿಲ್ಲ ಎಂದು ಇದೇ ವೇಳೆ ತಿಳಿಸಿದರು.