ಬೆಂಗಳೂರು:ಈ ವರ್ಷ ಸರ್ಕಾರ ಪಟಾಕಿ ಬ್ಯಾನ್ ಮಾಡಿದ್ರೂ ಸಹ ಹಸಿರು ಪಟಾಕಿಗೆ ಅನುಮತಿ ನೀಡಿದೆ. ಆದ್ರೆ ಹಸಿರು ಪಟಾಕಿಯೂ ಸೇಫಲ್ಲ. ಚಳಿಗಾಲದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಈ ಪಟಾಕಿಯ ಹೊಗೆ, ಕೆಮಿಕಲ್ಗಳಿಂದ ಜಾಸ್ತಿಯಾಗಬಹುದು. ಮಹಾಮಾರಿ ಕೊರೊನಾವಂತೂ ಪಟಾಕಿ ಮಾಲಿನ್ಯದಿಂದ ಹೆಚ್ಚಾಗುವ ಭೀತಿ ಇದೆ ಅಂತಾ ವೈದ್ಯರು ಎಚ್ಚರಿಸಿದ್ದಾರೆ.
ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಎಂ.ಎಸ್.ರಾಮಯ್ಯ ಆಸ್ಪತ್ರೆ ತಜ್ಞ ವೈದ್ಯ ಡಾ. ಮಂಜುನಾಥ್, ಹಸಿರು ಪಟಾಕಿಯಲ್ಲಿ ಸಾಮಾನ್ಯ ಪಟಾಕಿಗಳಿಗಿಂತ ಶೇ. 30ರಷ್ಟು ಹೊಗೆ ಹಾಗೂ ಶಬ್ಧ ಕಡಿಮೆ ಇರುತ್ತದೆ. ಆದ್ರೆ ಈ ಹಬ್ಬ ಚಳಿಗಾಲದ ಸಮಯದಲ್ಲಿ ಬಂದಿರುವುದರಿಂದ ವಾಯು ಮಾಲಿನ್ಯವಾಗಿ ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಬರುವುದರ ಜೊತೆಗೆ ಕೋವಿಡ್ ಪ್ರಕರಣಗಳೂ ಹೆಚ್ಚಾಗಬಹುದು ಎಂದಿದ್ದಾರೆ.
ಪಟಾಕಿಗಳಲ್ಲಿ ರಾಸಾಯನಿಕಗಳು, ಸೂಕ್ಷ್ಮ ಕಣಗಳಿದ್ದು, ಅವು ಶ್ವಾಸಕೋಶದಲ್ಲಿ ಸೇರಿ ಕಾಯಿಲೆಗಳು ಹೆಚ್ಚಾಗುತ್ತವೆ. ಚಳಿಗಾಲ, ಪಟಾಕಿ, ಕೊರೊನಾ ಎಲ್ಲಾ ಒಟ್ಟಿಗೆ ಸೇರಿ ಪರಿಸ್ಥಿತಿ ಬಿಗಡಾಯಿಸುವ ಎಲ್ಲಾ ಲಕ್ಷಣಗಳಿದ್ದು, ಪಟಾಕಿ ಸಿಡಿಸುವುದರಿಂದ ಸಿಗುವ ಅನಂದಕ್ಕಿಂತ ತೊಂದರೆ ಹೆಚ್ಚಾಗಲಿದೆ. ಹೀಗಾಗಿ ಪಟಾಕಿ ಹೊಡೆಯುವುದನ್ನು ಬಿಡುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
ಶ್ವಾಸಕೋಶ ತಜ್ಞ ವೈದ್ಯೆ ಡಾ. ತನಿಷ ಸಲೀಮ್ ಮಾತನಾಡಿ, ಇತರೆ ಪಟಾಕಿಗಿಂತ ಹಸಿರು ಪಟಾಕಿಗಳಲ್ಲಿ ಕಡಿಮೆ ಹಾನಿಕಾರಕ ರಾಸಾಯನಿಕಗಳಿವೆ. ಗರ್ಭಿಣಿಯರಿಗೆ, ಮಕ್ಕಳಿಗೆ, ವಯೋವೃದ್ಧರಿಗೆ, ಶ್ವಾಸಕೋಶ ಕಾಯಿಲೆ ಇರುವವರಿಗೆ ಇದರಿಂದ ಕಡಿಮೆ ಪ್ರಭಾವ ಬೀರಬಹುದು. ಹಸಿರು ಪಟಾಕಿಗಳಲ್ಲಿ ಮೂರು ವಿಧವಿದ್ದು, ಯಾವುದೇ ರೀತಿಯ ಹಸಿರು ಪಟಾಕಿಗಳು ಶೇ. 15ರಿಂದ 30ರಷ್ಟು ಕಡಿಮೆ ವಾಯು ಮಾಲಿನ್ಯ ಉಂಟು ಮಾಡುತ್ತವೆ. ಜನರು ಪಟಾಕಿಗಳ ಮೇಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಎಲ್ಲಾ ರೀತಿಯ ವಿವರಗಳು ದೊರೆಯಲಿವೆ. ಹಸಿರು ಪಟಾಕಿಗಳಿಗೆ ಸರ್ಕಾರದಿಂದ ಅನುಮತಿ ಇದ್ದು, ಕಡಿಮೆ ಮಾಲಿನ್ಯದ ಪಟಾಕಿ ಹೊಡೆಯುವುದರಿಂದ ಮುಂದಿನ ಪೀಳಿಗೆಗೆ ಒಳ್ಳೆಯದಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.