ಬೆಂಗಳೂರು:ತೋಟಗಳಲ್ಲಿ, ಜಮೀನಿನಲ್ಲಿ ಬೆಳೆದು ನಿಂತ ಕಳೆ ಗಿಡ, ಹುಲ್ಲನ್ನು ಕೀಳುವುದು ಪ್ರತಿಯೊಬ್ಬರಿಗೂ ದೊಡ್ಡ ಸಮಸ್ಯೆ. ಇವುಗಳ ಪರಿಹಾರಕ್ಕೆ ಸಾಕಷ್ಟು ಯಂತ್ರೋಪಕರಣಗಳು ಬಂದಿದ್ದರೂ, ಎಲ್ಲವೂ ನಿರೀಕ್ಷಿತ ಫಲ ಕೊಡುತ್ತಿಲ್ಲ. ಒಂದಲ್ಲಾ ಒಂದು ತೊಡಕು ಎದುರಾಗುತ್ತಲೇ ಇರುತ್ತದೆ.
ಇತ್ತೀಚಿನ ವರ್ಷದಲ್ಲಿ ಕೈಗಳಲ್ಲಿ ಹಿಡಿದು ಸಮತೋಲನ ಸಾಧಿಸಿ ಹುಲ್ಲು ಕತ್ತರಿಸುವ ಯಂತ್ರಗಳು ಜನಪ್ರಿಯವಾಗಿವೆ. ಆದರೆ ಇದನ್ನು ಸಹ ದೀರ್ಘಕಾಲ ಕೈಲಿ ಹಿಡಿದು ನಿಲ್ಲುವುದು ಕಷ್ಟಸಾಧ್ಯ. ಇಂತಹ ಹಲವು ಸಮಸ್ಯೆಗಳನ್ನು ಅರಿತು ಪರಿಹಾರ ಹುಡುಕುವ ನಿಟ್ಟಿನಲ್ಲಿ ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿ ಕೋಫಾರಂ, ಒಂದು ಹಂತದ ಯಶಸ್ಸು ಸಾಧಿಸಿದೆ. ಸುಧಾರಿತ ತಂತ್ರಜ್ಞಾನ ಬಳಸಿ ಹುಲ್ಲು ಹಾಗೂ ಕಳೆ ಗಿಡವನ್ನು ಕತ್ತರಿಸುವ ಸಾಧನವನ್ನು ಸಿದ್ಧಪಡಿಸಿದ್ದು, ಬೆಂಗಳೂರಿನ ಕೃಷಿ ಮೇಳದಲ್ಲಿ ಪ್ರದರ್ಶಿಸುತ್ತಿದೆ.
ಕಳೆ ನಾಶಕ ಯಂತ್ರವನ್ನು ಸಿದ್ಧಪಡಿಸಿ ಅದನ್ನು ನಾಲ್ಕು ಗಾಲಿಗಳನ್ನು ಅಳವಡಿಸಿರುವ ಪಟ್ಟಿ ಮೇಲೆ ಕೂರಿಸಿದೆ. ಭಾರ ಗಾಲಿಗಳ ಮೇಲೆ ಬೀಳಲಿದೆ. ತಳ್ಳಿಕೊಂಡು ಸಾಗುತ್ತಾ ಕಳೆ ಕೀಳಬಹುದು. ಬ್ಲೇಡ್ ದೊಡ್ಡದಿದ್ದು ಗಿಡಗಳು ಸಹ ಕತ್ತರಿಸುತ್ತದೆ. ಚಿಕ್ಕ ಹುಲ್ಲುಗಳಿಗಾಗಿ ಬೇರೊಂದು ಸಾಧನ ಬಳಸಲಾಗುತ್ತದೆ. ಇದಲ್ಲದೇ ಯಂತ್ರ ತೆಗೆದಿಟ್ಟು ಮಣ್ಣು ಗೊಬ್ಬರದ ಬುಟ್ಟಿಗಳನ್ನು ಇದರಲ್ಲಿರಿಸಿ ಸಾಗಿಸಬಹುದು. ಗೊಬ್ಬರ ಸಿಂಪಡಣೆಗೂ ಈ ಯಂತ್ರ ಉಪಯೋಗ ಆಗಲಿದೆ. ವಿದ್ಯುತ್ ಚಾಲಿತ ಯಂತ್ರವಾಗಿದೆ, ವಿಶೇಷ ಬರ್ನರ್ ಮುಖಾಂತರ ಹುಲ್ಲನ್ನು ಬುಡ ಸಮೇತವಾಗಿ ಸುಟ್ಟಾಕಬಹುದು. 20 ಅಡಿ ವ್ಯಾಪ್ತಿಯ ಪ್ರದೇಶಕ್ಕೆ ಔಷಧವನ್ನು ಸಹ ಸಿಂಪಡಿಸಬಹುದಾಗಿದೆ.