ಅನುದಾನ ಹಂಚಿಕೆಯಲ್ಲಿ ವ್ಯತ್ಯಾಸ ಆಗಿರುವುದು ಸತ್ಯ, ಅದನ್ನು ಸರಿ ಪಡಿಸುತ್ತೇನೆ: ಬಿಎಸ್ವೈ
ನಾವು ಅಧಿಕಾರಕ್ಕೆ ಬಂದಾಗ ಆರ್ಥಿಕ ಸಮಸ್ಯೆ ಇತ್ತು. ಹಾಗಾಗಿ ಅನುದಾನ ಕೊಡುವಲ್ಲಿ ಒಂದಷ್ಟು ವ್ಯತ್ಯಾಸಗಳಾಗಿವೆ. ಅನುದಾನ ಕುರಿತು ಸದ್ಯದಲ್ಲೇ ಎಲ್ಲಾ ಶಾಸಕರ ಜೊತೆ ಚರ್ಚೆ ನಡೆಸಿ ಅನುದಾನ ಸಮಸ್ಯೆ ಸರಿಪಡಿಸ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಬೆಂಗಳೂರು:ಶಾಸಕರ ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲಿ ವ್ಯತ್ಯಾಸವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ.
ವಿಧಾನಸಭೆಯಲ್ಲಿ ನಿಯಮ 69ರಡಿ ಜೆಡಿಎಸ್ನ ಶಿವಲಿಂಗೇಗೌಡರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಅನುದಾನ ತಾರತಮ್ಯದ ಬಗ್ಗೆ ಬಿಜೆಪಿ ಶಾಸಕರಲ್ಲೂ ಅಸಮಾಧಾನ ಇದೆ. ಬೇರೆ ಬೇರೆ ಕಾರಣಕ್ಕೆ ಅನುದಾನ ಹಂಚಿಕೆಯಲ್ಲಿ ಸಮಸ್ಯೆ ಆಗಿದೆ. ನಾವು ಅಧಿಕಾರಕ್ಕೆ ಬಂದಾಗ ಆರ್ಥಿಕ ಸಮಸ್ಯೆ ಇತ್ತು. ಹಾಗಾಗಿ ಅನುದಾನ ಕೊಡುವಲ್ಲಿ ಒಂದಷ್ಟು ವ್ಯತ್ಯಾಸಗಳಾಗಿವೆ. ಅನುದಾನ ಕುರಿತು ಸದ್ಯದಲ್ಲೇ ಎಲ್ಲ ಶಾಸಕರ ಜೊತೆ ಚರ್ಚೆ ನಡೆಸಿ ಅನುದಾನ ಸಮಸ್ಯೆ ಸರಿಪಡಿಸ್ತೇನೆ ಎಂದು ಭರವಸೆ ನೀಡಿದರು. ಅನುದಾನ ತಾರತಮ್ಯದ ಬಗ್ಗೆ ಜೆಡಿಎಸ್ ಶಾಸಕರಿಗೆ ಮಾತ್ರವಲ್ಲ ಬಿಜೆಪಿ ಶಾಸಕರಿಗೂ ಅಸಮಾಧಾನ ಇದೆ. ಅದನ್ನು ಸರಿಪಡಿಸುತ್ತೇನೆ. ಸಹಕರಿಸಿ ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಶಾಸಕರ ಕ್ಷೇತ್ರಗಳಿಗೆ ಅನುದಾನ ತಾರತಮ್ಯ ಮಾಡಲಾಗಿದೆ. ಒಂದೊಂದು ಕ್ಷೇತ್ರಕ್ಕೆ ಒಂದೊಂದು ರೀತಿ ಅನುದಾನ ನೀಡಲಾಗುತ್ತಿದೆ. ಹಲವು ಕ್ಷೇತ್ರಗಳಿಗೆ ಅನುದಾನ ಕೊಟ್ಟಿಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅನುದಾನ ಕೊಟ್ಟರು. ಆದ್ರೆ ಬಿಜೆಪಿ ಸರ್ಕಾರದಲ್ಲಿ ಅನುದಾನ ತಾರತಮ್ಯ ಆಗುತ್ತಿದೆ. ಕಾಮಗಾರಿ ಪೂರ್ಣಗೊಂಡರೂ ಹಣ ಬಿಡುಗಡೆಯನ್ನು ತಡೆ ಹಿಡಿಯಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ರೇವಣ್ಣ, ಯಾರ್ಯಾರ ಕ್ಷೇತ್ರಗಳಿಗೆ ಎಷ್ಟೆಷ್ಟು ಅನುದಾನ ಹೋಗಿದೆ ಅಂತ ಚರ್ಚೆ ಆಗಲಿ. ಚರ್ಚೆಗೆ ನಾನು ಸಿದ್ಧ. ಅನುದಾನ ತಾರತಮ್ಯ ಬಗ್ಗೆ ಚರ್ಚೆ ಆಗಲಿ. ಒಂದು ವೇಳೆ ನನ್ನ ಆಡಳಿತದಲ್ಲಿ ತಾರತಮ್ಯವಾಗಿದ್ದರೆ ನಾನು ರಾಜೀನಾಮೆ ಕೊಡಲು ಸಿದ್ಧ ಎಂದು ಸವಾಲು ಹಾಕಿದರು. ನಮ್ಮ ಪಕ್ಷದಲ್ಲಿ ಕುಮಾರಸ್ವಾಮಿ ಕ್ಷೇತ್ರಕ್ಕೆ 30 ಕೊಟಿ ರೂ. ಹಾಗೂ ರೇವಣ್ಣಗೆ 2 ಕೋಟಿ ರೂ. ಹಣ ಕೊಟ್ಟಿದ್ದೀರಾ?. ಯಾಕೆ ಅವರಿಬ್ಬರಿಗೆ ಮಾತ್ರ ಕೊಟ್ಟರೆ ಹಿಂದಿರುವ ನಮ್ಮ ಬಾಯನ್ನು ಮುಚ್ಚಿಸಬಹುದು ಎಂದು ಅಲ್ವಾ ಎಂದು ಪ್ರಶ್ನಿಸಿದರು.