ಬೆಂಗಳೂರು: ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಳೀನ್‌ಕುಮಾರ್ ಕಟೀಲ್ ಅವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭವ್ಯಸ್ವಾಗತ ನೀಡಲಾಯಿತು.
ಸಾವಿರಾರು ಬೆಂಬಲಿಗರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಹೂ ಗುಚ್ಛ ನೀಡಿ ಸ್ವಾಗತ ಕೋರಿದ್ರು. ಯಲಹಂಕ ಶಾಸಕ ವಿಶ್ವನಾಥ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಿಜೆಪಿ ಅಧ್ಯಕ್ಷ ರಾಜಣ್ಣ ಸೇರಿ ಸಾವಿರಾರು ಕಾರ್ಯಕರ್ತರು ಏರ್‌ಪೋರ್ಟ್‌ಗೆ ತೆರಳಿದ್ದರು.
ಇದೇ ವೇಳೆ ಬೆಂಬಲಿಗರು, ಕಾರ್ಯಕರ್ತರು ಸೆಲ್ಪಿ ಪಡೆಯಲು ಮುಂದಾದ್ರು. ಅಭಿಮಾನಿಗಳಿಂದ ನೂತನ ರಾಜ್ಯಧ್ಯಕ್ಷರನ್ನು ಕಾರಿನಲ್ಲಿ ಹತ್ತಿಸುವಲ್ಲಿ ಪೊಲೀಸರು ಹರಸಾಹಸ ಪಡಬೇಕಾಯ್ತು. ನೂಕು ನುಗ್ಗಲಿನಲ್ಲೇ ಪೊಲೀಸರು ನಳೀನ್‌ಕುಮಾರ್ ಕಟೀಲ್ ಅವರನ್ನು ಕಾರು ಹತ್ತಿಸಿದ್ರು.
ಬಿಜೆಪಿ ನೂತನ ರಾಜ್ಯಾಧ್ಯಕ್ಷರಿಗೆ ಏರ್ಪೋರ್ಟ್ನಲ್ಲಿ ಅದ್ಧೂರಿ ಸ್ವಾಗತ.. ನಂತರ ಮಾತನಾಡಿದ ನೂತನ ರಾಜ್ಯಧ್ಯಕ್ಷ ನಳೀನ್‌ಕುಮಾರ್ ಕಟೀಲ್, ನನಗೆ ರಾಷ್ಟ್ರೀಯ ಅಧ್ಯಕ್ಷರು ಬಹು ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಸಿಎಂ ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಕಿರಿಯರ ಜೊತೆಯಲ್ಲಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ. ರೈತರ ಪರವಾದ ಬಜೆಟ್‌ನ ಯಡಿಯೂರಪ್ಪ ನೇತೃತ್ವದ ಸರ್ಕಾರ ನೀಡಿತ್ತು. ಅಭಿವೃದ್ಧಿ ಕೆಲಸಗಳನ್ನು ಮುಂದೆಯೂ ಮಾಡಿಕೊಂಡು ಸರ್ಕಾರವನ್ನು ಮುನ್ನಡಸಲಿದ್ದೇವೆ ಎಂದರು.
ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಕೂಡ ಮಾತನಾಡಿದ್ದು, ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಳೀನ್ ಕುಮಾರ್ ಕಟೀಲ್ ಅವರನ್ನು ಸ್ವಾಗತಿಸಲು ನಾವೆಲ್ಲ ಬಂದಿದ್ದೇವೆ. ಸರ್ಕಾರ ಸುಭದ್ರವಾಗಿ ಆಡಳಿತ ನಡೆಸಲಿದೆ. ಸಚಿವರ ಆಯ್ಕೆಯನ್ನು ರಾಷ್ಟ್ರೀಯ ಅಧ್ಯಕ್ಷರು ಮಾಡಿದ್ದು, ಕೆಲವರಲ್ಲಿ ಅಸಮಾಧಾನ ಇರುವುದು ನಿಜ. ಅದನ್ನೆಲ್ಲಾ ರಾಷ್ಟ್ರೀಯ ಅಧ್ಯಕ್ಷರೇ ನೋಡಿಕೊಳ್ಳುತ್ತಾರೆ. ಸಚಿವ ಸಂಪುಟ ಇನ್ನೆರಡು ದಿನಗಳಲ್ಲಿ ವಿಸ್ತರಣೆಯಾಗಬಹುದು ಎಂದ ಅವರು, ಸಿಟಿ ರವಿ ಅಸಮಾಧಾನಗೊಂಡು ರಾಜೀನಾಮೆ ಕೊಡುವ ವಿಚಾರ ನನಗೆ ಗೊತ್ತಿಲ್ಲ ಎಂದರು.