ದೇವನಹಳ್ಳಿ(ಬೆಂಗಳೂರು): ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್ (ಐಬಿಎಸ್‌ಎ) ವಿಶ್ವ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾವನ್ನು ಭಾರತೀಯ ಅಂಧರ ತಂಡ ಮಣಿಸಿ ಚಿನ್ನ ಗೆದ್ದು ಸಾಧನೆ ಮಾಡಿದೆ. ಲಂಡನ್ ಬರ್ನಿಂಗ್ ಹ್ಯಾಂನಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡ ಪ್ರತಿನಿಧಿಸಿದ ಆಟಗಾರ್ತಿಯರು ಸ್ವದೇಶಕ್ಕೆ ವಾಪಸ್ ಆಗಿದ್ದಾರೆ. ಅದರಲ್ಲೂ ಕರ್ನಾಟಕ ಮೂಲದ ಯುವತಿ ವರ್ಷಾ ನಾಯಕತ್ವದಲ್ಲಿ ಮಹಿಳಾ ತಂಡ ಚಿನ್ನ ಗೆದ್ದಿದೆ.
ಪಂದ್ಯದಲ್ಲಿ ಅಭೂತ ಪೂರ್ವ ಸಾಧನೆ ಮಾಡಿದ ಭಾರತ ತಂಡದಲ್ಲಿ ಕರ್ನಾಟಕದ ಮೂವರು ಆಟಗಾರ್ತಿಯರು ಭಾಗವಹಿಸಿದ್ದರು. ಅವರು ಇಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ, ದೇಶ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದ ಯುವತಿಯರನ್ನು ಏರ್ಪೋಟ್ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಕಳೆದ ತಿಂಗಳು 17 ರಿಂದ 26 ರವರೆಗೂ ಲಂಡನ್ನಲ್ಲಿ ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್ (ಐಬಿಎಸ್‌ಎ) ವಿಶ್ವ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಭಾರತದ ಪುರುಷ ಮತ್ತು ಮಹಿಳೆಯರ ತಂಡ ಕ್ರಿಕೆಟ್ನಲ್ಲಿ ಭಾಗವಹಿಸಿತ್ತು. ವನಿತೆಯರು ಆಸ್ಟ್ರೇಲಿಯಾವನ್ನು ಮಣಿಸಿ ಚಿನ್ನ ಗೆದ್ದರೆ, ಪುರುಷರ ತಂಡ ಪಾಕಿಸ್ತಾನದ ವಿರುದ್ಧ ಮಣಿದು ಬೆಳ್ಳಿಗೆ ತೃಪ್ತಿ ಪಡಬೇಕಾಯಿತು.
ವನಿತೆಯರ ತಂಡದ ನೇತೃತ್ವವನ್ನು ಕರ್ನಾಟಕದ ತುಮಕೂರು ಮೂಲದ ವರ್ಷಾ ವಹಿಸಿಕೊಂಡಿದ್ದರು. ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 9 ವಿಕೆಟ್ಗಳಿಂದ ಮಣಿಸಿತು. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸಿಸ್ ವನಿತೆಯರ ಪಡೆ ನಿಗದಿತ 20 ಓವರ್ಗೆ 8 ವಿಕೆಟ್ ಕಳೆದುಕೊಂಡು 114ರನ್ ಕಲೆ ಹಾಕಿತು. ಭಾರತೀಯರ ಆಟಕ್ಕೆ ಮಳೆ ಅಡ್ಡಿಯುಂಟು ಮಾಡಿದ್ದರಿಂದ ಡಿಎಲ್ಎಸ್ ನಿಯಮದಂತೆ 9 ಓವರ್ಗೆ ಪಂದ್ಯವನ್ನು ಕಡಿತ ಮಾಡಲಾಯಿತು. ಅದರಿಂತೆ ಭಾರತಕ್ಕೆ 43 ರನ್ನ ಗುರಿ ಕೊಡಲಾಯಿತು. ಈ ಗುರಿಯನ್ನ ಬೆನ್ನತ್ತಿದ ಭಾರತ ಕೇವಲ 3.3 ಓವರ್ಗಳಲ್ಲಿ 1 ವಿಕೆಟ್ ನಷ್ಟ ಸಾಧಿಸಿ ಗೆಲುವಿನ ನಗೆ ಬೀರಿತು.