ಬೆಂಗಳೂರು :ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಪುನರ್ವಿಂಗಡನೆ ಸಂಬಂಧ ಮಹತ್ವದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ 2021 ಅನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಗಿದೆ.
ಈ ವಿಧೇಯಕದ ಮೂಲ ಉದ್ದೇಶ ಕರ್ನಾಟಕ ಪಂಚಾಯತ್ ರಾಜ್ ಕ್ಷೇತ್ರ ಪುನರ್ವಿಂಗಡನೆ ಆಯೋಗ (ಡಿಲಿಮಿಟೇಷನ್ ಕಮಿಷನ್) ರಚಿಸುವುದಾಗಿದೆ. ಈ ಆಯೋಗದ ಮೂಲಕ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಪುನರ್ವಿಂಗಡನೆ ಮಾಡಲಾಗುತ್ತದೆ.
ಈ ಹಿಂದೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಮಾಡಿದ ತಾಪಂ ಹಾಗೂ ಜಿಪಂ ಸೀಮಾ ನಿರ್ಣಯ (ಕ್ಷೇತ್ರ ಪುನರ್ ವಿಂಗಡನೆ) ಅವೈಜ್ಞಾನಿಕ ಹಾಗೂ ಕಾನೂನು ಬಾಹಿರವಾಗಿದೆ ಎಂದು ಆಕ್ಷೇಪಿಸಿ ಹೈಕೋರ್ಟ್ನಲ್ಲಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಹಿನ್ನೆಲೆ ಕ್ಷೇತ್ರ ಪುನರ್ ವಿಂಗಡಣೆ ಆಯೋಗ ರಚನೆಗಾಗಿ ವಿಧೇಯಕವನ್ನು ತರಲಾಗಿದೆ.
ಈ ವಿಧೇಯಕ ಜಾರಿಯಾದ ತಕ್ಷಣ ತಾಪಂ ಹಾಗೂ ಜಿಪಂ ಕ್ಷೇತ್ರಗಳ ಎಲ್ಲಾ ಕ್ಷೇತ್ರ ಪುನರ್ ವಿಂಗಡನೆ ಅಧಿಸೂಚನೆ ರದ್ದಾಗಲಿದೆ. ಜೊತೆಗೆ ಪ್ರಸ್ತುತವಿರುವ ಕ್ಷೇತ್ರ ಪುನರ್ವಿಂಗಡನೆ ಆಧಾರದಲ್ಲಿ ಜಾರಿಯಲ್ಲಿರುವ ತಾಪಂ ಹಾಗೂ ಜಿಪಂ ಕ್ಷೇತ್ರಗಳ ಮೀಸಲಿರಿಸುವ ಎಲ್ಲಾ ಅಧಿಸೂಚನೆಗಳನ್ನು ಕೂಡಲೇ ರದ್ದಾಗಲಿದೆ.
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚನೆ
ಆಯೋಗಕ್ಕೆ ನಿವೃತ್ತ ಮುಖ್ಯ ಕಾರ್ಯದರ್ಶಿ ಅಥವಾ ಅಪರ ಕಾರ್ಯದರ್ಶಿ ಅಧ್ಯಕ್ಷರಾಗಿರುತ್ತಾರೆ. ಸರ್ಕಾರ ನೇಮಿಸುವ ಗ್ರಾಮೀಣಾಭಿವೃದ್ಧಿ ವಿಕೇಂದ್ರೀಕರಣ ಮತ್ತು ಪಂಚಾಯತ್ ರಾಜ್ ವಿಷಯಗಳಲ್ಲಿ ಅನುಭವ ಹೊಂದಿರುವ ನಿವೃತ್ತ ಕಾರ್ಯದರ್ಶಿ ಆಯೋಗದ ಸದಸ್ಯರಾಗಿರುತ್ತಾರೆ.