ಬೆಂಗಳೂರು: ಅವಧಿ ಮುಗಿದ ಒಂದು ಗ್ರಾಮ ಪಂಚಾಯಿತಿಗೆ ಚುನಾವಣೆ ಸೇರಿದಂತೆ ವಿವಿಧ ಕಾರಣಗಳಿಂದ ತೆರವಾದ 156 ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಯಲ್ಲಿ ವಿವಿಧ ಕಾರಣಗಳಿಂದ ತೆರವಾದ 7 ಪುರಸಭೆ, ಒಂದು ನಗರ ಸಭೆಗೆ ರಾಜ್ಯ ಚುನಾವನಾ ಆಯೋಗವು ಉಪ ಚುನಾವಣೆಯನ್ನು ಪ್ರಕಟಿಸಿದೆ. ಮೇ. 20 ರಂದು ಮತದಾನ ನಡೆಯಲಿದೆ. ಗ್ರಾಮ ಪಂಚಾಯಿತಿಗಳಿಗೆ ಮೇ.5 ರಂದು ಅಧಿಸೂಚನೆಯನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಹೊರಡಿಸಲಿದ್ದಾರೆ.
ಮೇ.10 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆ ದಿನಾಂಕವಾಗಿದೆ. ಮೇ.11 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮೇ.13 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಮೇ. 20 ರಂದು ಮತದಾನ ನಡೆಯಲಿದ್ದು, ಮರು ಮತದಾನ ಅವಶ್ಯವಿದ್ದರೆ ಮೇ.21 ರಂದು ನಡೆಸಲಾಗುವುದು. ಮೇ. 22 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.
ನಗರ ಸ್ಥಳೀಯ ಸಂಸ್ಥೆಗಳ ಉಪಚುನಾವಣೆ: ಇನ್ನು ನಗರ ಸ್ಥಳೀಯ ಸಂಸ್ಥೆಗಳ ಉಪಚುನಾವಣೆಗೆ ಮೇ. 2 ರಂದು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದಾರೆ. ಮೇ.9 ರಂದು ನಾಮಪತ್ರಗಳನ್ನು ಸಲಿಸಲು ಕೊನೆ ದಿನವಾಗಿದ್ದು, ಮೇ. 10 ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುತ್ತದೆ. ಮೇ. 12 ರಂದು ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯದಿನವಾಗಿದೆ. ಮೇ. 20 ರಂದು ಮತದಾನ ನಡೆಯಲಿದ್ದು, ಮರು ಮತದಾನ ಅವಶ್ಯವಿದ್ದರೆ ಮೇ. 21 ರಂದು ನಡೆಸಲಾಗುವುದು. ಮೇ. 22 ರಂದು ಮತ ಎಣಿಕೆ ನಡೆಯಲಿದೆ. ದಾವಣಗೆರೆ ಮಹಾನಗರ ಪಾಲಿಕೆಯ 28 ಮತ್ತು 37 ನೇ ವಾರ್ಡ್‌ಗಳಿಗೂ ಉಪಚುನಾವಣೆ ನಡೆಯಲಿದೆ. ಅಲ್ಲದೇ, ತುಮಕೂರು ಜಿಲ್ಲೆ ಶಿರಾ ನಗರಸಭೆಗೆ ಸಾರ್ವತ್ರಿಕ ಚುನಾವಣೆ ಜರುಗಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
ಇದನ್ನೂ ಓದಿ:ಬೆಂಗಳೂರು: ಟಿಟಿಡಿ ದೇವಸ್ಥಾನಕ್ಕೆ ಪುನೀತ್ ಅಭಿಮಾನಿಗಳ ಮುತ್ತಿಗೆ ಯತ್ನ
ವಿವಿಧ ಕಾರಣಗಳಿಂದ ತೆರವಾಗಿರುವ 156 ಗ್ರಾಮಪಂಚಾಯಿತಿಗಳ 201 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ಅವಧಿ ಮುಕ್ತಾಯಗೊಂಡ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮಪಂಚಾಯಿತಿ ಮತ್ತು ಈ ಹಿಂದೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಯಾಗದೆ ಇರುವ ಕಾರಣ ಚುನಾವಣೆ ನಡೆಯದ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹಾಗೂ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಸಾವಳಿಗಿ ಗ್ರಾಮಪಂಚಾಯಿತಿಗೆ ಚುನಾವಣೆ ನಡೆಯಲಿದೆ ಎಂದು ಆಯೋಗವು ತಿಳಿಸಿದೆ.