ಬೆಂಗಳೂರು :ಕೊರೊನಾ ಸೋಂಕು ಹಿನ್ನೆಲೆ ಕಳೆದ 8 ತಿಂಗಳಿನಿಂದ ಕಾಲೇಜು ಆರಂಭಕ್ಕೆ ಬ್ರೇಕ್ ಹಾಕಲಾಗಿತ್ತು. ಸೋಂಕಿನ ತೀವ್ರತೆ ಕಡಿಮೆ ಆಗುತ್ತಿರುವುದರಿಂದ ಮೊದಲ ಹಂತವಾಗಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳು ಇಂದಿನಿಂದ ಆರಂಭಗೊಳ್ಳುತ್ತಿವೆ.
ಕಾಲೇಜಿಗೆ ಬರುವ ವಿದ್ಯಾರ್ಥಿಗಳೇನು ನಿಯಮ ಪಾಲಿಸಬೇಕು?
ಪದವಿ, ಎಂಜಿನಿಯರಿಂಗ್ ಹಾಗೂ ಡಿಪ್ಲೊಮಾ ಕಾಲೇಜುಗಳ ತರಗತಿಗಳ ವಿದ್ಯಾರ್ಥಿಗಳು, ಕಾಲೇಜಿಗೆ ಬರಲು ಇಚ್ಚಿಸಿದ್ದರೆ ಪೋಷಕರಿಂದ ಒಪ್ಪಿಗೆ ಪತ್ರ ಪಡೆಯಬೇಕು. ದೈಹಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮನೆಯಿಂದಲೇ ಊಟ ಮತ್ತು ಕುಡಿಯುವ ನೀರನ್ನು ತಂದು ಸ್ವತಃ ಅವರೇ ಉಪಯೋಗಿಸಬೇಕು.
ಕಾಲೇಜಿನವರಿಗೆ ಇರುವ ನಿಯಮಗಳೇನು?
ಕಾಲೇಜಿನ ಸಂಪೂರ್ಣ ಕಟ್ಟಡ, ಮುಖ್ಯದ್ವಾರ, ಶೌಚಾಲಯ ಹಾಗೂ ಎಲ್ಲ ಕೊಠಡಿಗಳಲ್ಲಿನ ಪೀಠೋಪಕರಣ ಮತ್ತು ಪಠ್ಯ ಸಾಮಗ್ರಿಗಳನ್ನು ಸ್ಯಾನಿಟೈಸ್ ಮಾಡಬೇಕು. ಕೋವಿಡ್ ಪರೀಕ್ಷೆಯ ಫಲಿತಾಂಶ ನೆಗೆಟಿವ್ ಇದ್ದಲ್ಲಿ ಮಾತ್ರ ವಿದ್ಯಾರ್ಥಿಗಳು, ಬೋಧಕರು ಕಾಲೇಜಿಗೆ ಹಾಜರಾಗುವುದು.
ಉಪನ್ಯಾಸಕರು ಕಡ್ಡಾಯವಾಗಿ ಮಾಸ್ಕ್, ಫೇಸ್‌ಶಿಲ್ಡ್ ಅಥವಾ Visor ಅನ್ನು ಧರಿಸುವುದು. ಕಾಲೇಜುಗಳಲ್ಲಿ ಲೈಬ್ರರಿ ಮತ್ತು ಕ್ಯಾಂಟೀನ್ಗಳನ್ನು ತೆರೆಯುವಂತಿಲ್ಲ. ಯಾವುದೇ ಸಾಂಸ್ಕೃತಿಕ ಚಟುವಟಿಕೆ, ಎನ್ಸಿಸಿ ಹಾಗೂ ಎನ್ಎಸ್ಎಸ್ ಚಟುವಟಿಕೆ ಪ್ರಾರಂಭಿಸುವಂತಿಲ್ಲ.
ಕಾಲೇಜು ಪ್ರವೇಶ-ನಿರ್ಗಮನ ಸ್ಥಳಗಳಲ್ಲಿ ಥರ್ಮಲ್ ಸ್ಕ್ಯಾನರ್ ಮತ್ತು ಸ್ಯಾನಿಟೈಸ್ಗೆ ಸೂಕ್ತ ವ್ಯವಸ್ಥೆ ಮಾಡಬೇಕು. ನೆಲದ ಮೇಲೆ ನಿರ್ದಿಷ್ಟ ಗುರುತುಗಳನ್ನು ಮಾಡುವುದು. ಜ್ವರ, ಕೆಮ್ಮು, ಉಸಿರಾಟದ ತೊಂದರೆಯ ಲಕ್ಷಣಗಳನ್ನು ಹೊಂದಿದ್ದರೆ ಶಿಕ್ಷಣ ಸಂಸ್ಥೆಯ ಆವರಣದೊಳಗೆ ಪ್ರವೇಶಿಸುವುದನ್ನ ನಿಷೇಧಿಸಲಾಗಿದೆ.
ಟೆಲಿ ಕೌನ್ಸೆಲಿಂಗ್:
ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಲು ಟೆಲಿ ಕೌನ್ಸೆಲಿಂಗ್ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರೀಯ ಟೋಲ್ ಫ್ರಿ ಸಹಾಯವಾಣಿ-84454440632 ಈ ಸಂಖ್ಯೆ ಕರೆ ಮಾಡಬಹುದು.