ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ವ್ಯಾಪ್ತಿಯ ನಾಗರಿಕರಿಗೆ ಧೈರ್ಯವಾಗಿ ಬದುಕುವ ವಾತಾವರಣವನ್ನು ರಾಜ್ಯ ಸರ್ಕಾರ ಕಲ್ಪಿಸಬೇಕು ಎಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅಭಿಪ್ರಾಯ ಪಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಭಾಗದಲ್ಲಿ ಇಂತಹದ್ದೊಂದು ಕಹಿ ಘಟನೆ ಆಗಬಾರದಿತ್ತು. ರಾಜ್ಯ ಸರ್ಕಾರ ಕೂಡಲೇ ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ಮೂಲಕ ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತೇನೆ. ಸರ್ಕಾರ ಸಮರ್ಥವಾಗಿ ತನಿಖೆ ನಡೆಸುವ ವಿಶ್ವಾಸವಿದೆ. ಆದರೆ ಅಲ್ಲಿನ ಜನರಲ್ಲಿ ಧೈರ್ಯ ತುಂಬುವ ರೀತಿಯಲ್ಲಿ ಸರ್ಕಾರ ನಡೆದುಕೊಳ್ಳಬೇಕು. ಇಲ್ಲಿನ ಅಲ್ಪಸಂಖ್ಯಾತರು ಮಾತ್ರವಲ್ಲ, ಎಲ್ಲಾ ವರ್ಗದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಜನರಿಗೆ ಧೈರ್ಯ ತುಂಬುವ ರೀತಿ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದರು.
ಪುಲಕೇಶಿ ನಗರದಲ್ಲಿ ರಾತ್ರಿ ನಡೆದ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ಈ ಘಟನೆ ನಡೆಯಬಾರದಿತ್ತು. ಈ ಘಟನೆ ಯಾಕೆ ನಡೆದಿದೆ ಅನ್ನೋದು ತನಿಖೆಯ ಬಳಿಕ ಗೊತ್ತಾಗಲಿದೆ. ಅಖಂಡ ಶ್ರೀನಿವಾಸ್ ಮನೆ ಸಂಪೂರ್ಣ ಸುಟ್ಟು ಹಾಕಿದ್ದಾರೆ. ಕೆಜಿ ಹಳ್ಳಿ ಪೊಲೀಸ್ ಠಾಣೆಯನ್ನು ಡ್ಯಾಮೇಜ್ ಮಾಡೋಕೆ ಪ್ರಯತ್ನ ಮಾಡಿದ್ದಾರೆ. ಡಿಜೆ ಹಳ್ಳಿ ಬಳಿ ಎಲ್ಲಾ ವಾಹನ ಸುಟ್ಟಿದ್ದಾರೆ. ರಸ್ತೆಯಲ್ಲಿ ಇದ್ದ ಖಾಸಗಿ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಮುನೇಗೌಡ ಮನೆ ಬಳಿ ದಾಂಧಲೆ ಮಾಡಿ ಗಾಡಿಗೆ ಬೆಂಕಿ ಹಾಕಿದ್ದಾರೆ. ನವೀನ್ ಎಂಬ ಯುವಕ ಪೈಗಂಬರರ ಬಗ್ಗೆ ಫೇಸ್ಬುಕ್ನಲ್ಲಿ ಅವಹೇಳನಕಾರಿ ಮಾಡಿದಕ್ಕೆ ಗಲಾಟೆ ಮಾಡಿದ್ದಾರೆ ಎನ್ನೋದು ಮೇಲ್ನೋಟಕ್ಕೆ ಕಾಣ್ತಿದೆ. ಅಖಂಡ ಶ್ರೀನಿವಾಸ್, ಅವರ ಅಕ್ಕ, ಸಹೋದರನ ಮನೆ ಸುಟ್ಟಿದ್ದಾರೆ. ರಾಜಕೀಯ ಪರಿಸ್ಥಿತಿಯಲ್ಲಿ ಅವರಿಗೆ ಆಗಿರುವ ತೊಂದರೆ ಬಗ್ಗೆ ಅವರ ಜೊತೆ ಕಾಂಗ್ರೆಸ್ ಪಕ್ಷ ಇದೆ. ಅವರಿಗೆ ನ್ಯಾಯ ಕೊಡೊಕೆ ನಾವೆಲ್ಲಾ ಹೋರಾಟ ಮಾಡ್ತೇವೆ ಎಂದು ಭರವಸೆ ನೀಡಿದರು.
ಡಿಕೆ ಶಿವಕುಮಾರ್ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು. ನಮ್ಮ ಶಾಸಕರಿಗೆ ರಕ್ಷಣೆ ಇಲ್ಲ ಹೀಗಾಗಿ ರಾಜ್ಯ ಸರ್ಕಾರಕ್ಕೆ ಬೇಗ ತನಿಖೆ ಮಾಡಲು ಒತ್ತಾಯ ಮಾಡಿದ್ದಾರೆ. ಮಾಜಿ ಗೃಹ ಸಚಿವರ ನೇತೃತ್ವದಲ್ಲಿ ಸತ್ಯಾಶೋಧನಾ ಸಮಿತಿ ರಚನೆ ಆಗಿದೆ. ಜಾರ್ಜ್, ರಾಮಲಿಂಗಾ ರೆಡ್ಡಿ ಮತ್ತು ನಾನು ಅದರ ನೇತೃತ್ವವಹಿಸಲಿದ್ದೇವೆ. ಈಗಾಗಲೇ ಎರಡು ಸಮಿತಿ ಮಾಡಿದ್ದೇವೆ. ಸ್ಥಳೀಯ ಲೀಡರ್ಸ್ ಕರೆಸಿ ಮಾತಾಡಿದ್ದೇವೆ ಎಂದರು.
ಮಾಹಿತಿ ಪಡೆದು, ವರದಿಯನ್ನು ಅಧ್ಯಕ್ಷರಿಗೆ ನೀಡ್ತೇವೆ. ಯಾಕೆ ಈ ಘಟನೆ ಆಯ್ತು ಎಂದು ತನಿಖೆ ಮಾಡಲು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ. ಕಾಂಗ್ರೆಸ್ ಪಕ್ಷವೇ ಕಾರಣ ಎಂಬಂತೆ ಸಚಿವರು ಮಾತಾಡ್ತಾ ಇದ್ದಾರೆ. ಕಾಂಗ್ರೆಸ್ ಮಾಡಿಸಿದೆ ಅನ್ನೋದಕ್ಕೆ ಸಚಿವರ ಬಳಿ ಏನು ಆಧಾರ ಇದೆ. ಮೊದಲು ತನಿಖೆ ಮಾಡಲಿ. ಪೊಲೀಸ್ ಸ್ಟೇಷನ್ ಸುಡೋರನ್ನ ನಾವು ಬೆಂಬಲ ಮಾಡಲ್ಲ. ಯಾರೇ ಮಾಡಿದ್ರು ಶಿಕ್ಷೆ ಆಗಲಿ. ಮಹಿಳೆಯರನ್ನು, ಮಕ್ಕಳನ್ನು ಬಂಧಿಸ್ತಾ ಇದ್ದಾರೆ. 10-12 ವರ್ಷದ ಮಕ್ಕಳನ್ನು ಅರೆಸ್ಟ್ ಮಾಡ್ತಾ ಇದ್ದಾರೆ. ಗೃಹ ಇಲಾಖೆ ನಿಮ್ಮ ಬಳಿ ಇದೆ. ಸರ್ಕಾರ ನಿಮ್ಮ ಕೈಯಲ್ಲಿ ಇದೆ. ತನಿಖೆ ಮಾಡಿ, ಕಂಡು ಹಿಡಿಯಿರಿ ಎಂದು ಒತ್ತಾಯಿಸಿದರು.
ಸುಟ್ಟ ಪೊಲೀಸ್ ಸ್ಟೇಷನ್ ನಮ್ಮ ಕಾಲದಲ್ಲಿ ನಿರ್ಮಾಣ ಆಗಿತ್ತು. ಈಗ ಪೋಲೀಸ್ ಸ್ಟೇಷನ್ ನೋಡಿದ್ರೆ ಬೇಸರ ಆಗುತ್ತೆ. ಅಖಂಡ ಶ್ರೀನಿವಾಸ್ಗೆ ನೀವು ರಕ್ಷಣೆ ಕೊಡಬೇಕಿತ್ತು. ನಮ್ಮ ಪಕ್ಷದಿಂದ ನಾವು ರಕ್ಷಣೆ ಮಾಡ್ತೇವೆ. ನಿಮಗೆ ಒಬ್ಬ ದಲಿತ ಶಾಸಕನಿಗೆ ರಕ್ಷಣೆ ಕೊಡೋಕೆ ಆಗಲ್ವೇ? ಪೊಲೀಸ್ ಠಾಣೆ ಸುಡುವ ತನಕ ನಿಮ್ಮ ಪೊಲೀಸ್ ವ್ಯವಸ್ಥೆ ಏನ್ ಮಾಡ್ತಾ ಇತ್ತು. ಇಂಟೆಲಿಜೆನ್ಸ್ ಡಿಪಾರ್ಟ್ಮೆಂಟ್ ನಿಮ್ಮಲ್ಲಿ ಇಲ್ವಾ? ಇದು ಸರ್ಕಾರದ ಸಂಪೂರ್ಣ ವೈಫಲ್ಯ. ಜಾರ್ಜ್ ಜೊತೆ ಓಡಾಡಿದ ಮೌಲ್ವಿಯನ್ನು ಅರೆಸ್ಟ್ ಮಾಡಿದ್ದು ಯಾಕೆ? ಅವರನ್ನು ಬಂಧಿಸಿ ಮೂರು ದಿನ ಆಯ್ತು. ಅಮಾಯಕರಿಗೆ ಯಾಕೆ ತೊಂದರೆ ಕೊಡ್ತಾ ಇದ್ದೀರಿ ಎಂದು ಕೇಳಿದರು.
ಎಸ್ಡಿಪಿಐ ಒಂದು ರಾಜಕೀಯ ಪಕ್ಷ. ಅವರು ಕೆಲವು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ನಾವು ಎಸ್ಡಿಪಿಐ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಎಸ್ಡಿಪಿಐನಿಂದಲೇ ಕೃತ್ಯ ನಡೆದಿದೆ ಅನ್ನೋಕೆ ಆಗಲ್ಲ. ತನಿಖೆಯಿಂದ ಅದು ಹೊರಬರಬೇಕು. ಈಗಲೇ ನಾವು ಅದನ್ನ ಹೇಳೋಕೆ ಬರಲ್ಲ ಎಂದು ವಿವರಿಸಿದರು.