ಬೆಂಗಳೂರು: "ಕೋ ವರ್ಕಿಂಗ್ ಸ್ಪೇಸ್ ಪರಿಕಲ್ಪನೆಯನ್ನು ಬಜೆಟ್ನಲ್ಲಿ ದೊಡ್ಡ ಮಟ್ಟದ ಯೋಜನೆಯ ಮೂಲಕ ಪ್ರೋತ್ಸಾಹಿಸುತ್ತೇವೆ. ಇದರಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆ. ಈಗಿನ ಯುವಕ, ಯುವತಿಯರ ಬೆಳವಣಿಗೆಯನ್ನು ನಾನು ಬೆಂಬಲಿಸುತ್ತೇನೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶನಿವಾರ ಹೆಚ್.ಎಸ್.ಆರ್ ಲೇಔಟ್ನಲ್ಲಿ ಹೊಸದಾಗಿ ಪ್ರಾರಂಭವಾಗಿರುವ ವಿಶ್ವದ ಅತಿ ದೊಡ್ಡ ಖಾಸಗಿ ಕೋ ವರ್ಕಿಂಗ್ ಸ್ಪೇಸ್ ಬಿಹೈವ್ ಉದ್ಘಾಟಿಸಿ ಮಾತನಾಡಿದ ಅವರು, "ನಮ್ಮ ಸ್ಥಳೀಯ ಹುಡುಗರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಬಹಳ ದೊಡ್ಡ ಕೋ ವರ್ಕಿಂಗ್ ಸ್ಪೇಸ್ ಪ್ರಾರಂಭಿಸಿದ್ದಾರೆ. ಬಜೆಟ್ ಸಭೆಗಳ ಮಧ್ಯೆಯೂ ಇವರನ್ನು ಪ್ರೋತ್ಸಾಹಿಸಲು ಇಲ್ಲಿಗೆ ಬಂದಿದ್ದೇನೆ. ಕೋ ವರ್ಕ್ ಸ್ಪೇಸ್ಗಳಿಂದ ಯುವಕರು ಮತ್ತು ಸ್ಟಾರ್ಟಪ್ಗಳು ಹೆಚ್ಚಿನ ಬಂಡವಾಳ ಇಲ್ಲದೇ ತಮ್ಮ ಕಂಪನಿಯನ್ನು ಪ್ರಾರಂಭಿಸಬಹುದು" ಎಂದು ಹೇಳಿದರು.
ಜನರೇ ಆರ್ಥಿಕತೆ ಸೃಷ್ಟಿಸುತ್ತಾರೆ: "ಹಣ ಆರ್ಥಿಕತೆ ಅಲ್ಲ. ಕಠಿಣ ಕೆಲಸ ಮಾಡುವ ಸಮಾಜದಿಂದ ಆರ್ಥಿಕತೆ ಸೃಷ್ಟಿಯಾಗುತ್ತದೆ. ನಾನು ಈಗಿನ ಯುವಕ, ಯುವತಿಯರ ಬೆಳವಣಿಗೆಯನ್ನು ಬೆಂಬಲಿಸುತ್ತೇನೆ. ನಮ್ಮ ದೇಶದ 46% ಜನಸಂಖ್ಯೆ ಯುವಪಡೆ ಇದೆ. ನಮ್ಮ ಪ್ರಧಾನಿಯವರ ಕನಸಿನಂತೆ ನಮ್ಮ ದೇಶ ಅಭಿವೃದ್ಧಿಯಾಗುತ್ತಿದೆ. ಇಡೀ ವಿಶ್ವದ ಆರ್ಥಿಕ ಬೆಳವಣಿಗೆ ಈಗ ಶೇ 1-2 ರಷ್ಟಿದ್ದರೆ, ಭಾರತದ ಆರ್ಥಿಕತೆ ಶೇ 7 ರಷ್ಟಿದೆ. ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಭಾರತ ವಿಶ್ವ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತದೆ" ಎಂದರು.