ಬೆಂಗಳೂರು: ಕೋವಿಡ್ ಹಾಗೂ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಶ್ಲಾಘಿಸಿದ್ದು, ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಸರ್ಕಾರದಿಂದ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ನೀಡಿದ 1.5 ಕೋಟಿ ಮೌಲ್ಯದ ಮೂರು ರಕ್ತ ಸಂಗ್ರಹ ವಾಹನಗಳಿಗೆ ಹಸಿರು ನಿಶಾನೆ ತೋರಿಸಿ ಜನರ ಸೇವೆಗೆ ಅಣಿ ಮಾಡಿಕೊಟ್ಟು ಸಿಎಂ ಮಾತನಾಡಿದರು. ರಾಜ್ಯಾದ್ಯಂತ ರೆಡ್ ಕ್ರಾಸ್ ಸಂಸ್ಥೆಯ ಈ ವಾಹನಗಳು ಸಂಚರಿಸಿ ರಕ್ತದ ಕೊರತೆ ನೀಗಿಸಲು ಸಹಾಯ ಮಾಡಲಿ ಎಂದು ಆಶಿಸಿದರು.
ಪ್ರತಿ ಜಿಲ್ಲೆಯಲ್ಲೂ ರೆಡ್ ಕ್ರಾಸ್ ಕೇಂದ್ರ:ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಾಜ್ಯದ ನಾನಾ ಭಾಗಗಳಲ್ಲಿ ರಕ್ತ ಸಂಗ್ರಹಣ (ಬ್ಲಡ್ ಬ್ಯಾಂಕ್) ಕೇಂದ್ರಗಳನ್ನು ಹೊಂದಿದ್ದು, ಪ್ರತಿಯೊಂದು ಜಿಲ್ಲೆಯಲ್ಲಿಯೂ ರೆಡ್ ಕ್ರಾಸ್ ರಕ್ತ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಕೂಡ ಸಹಾಯಹಸ್ತ ಚಾಚಲಿದೆ ಎಂದು ಭರವಸೆ ನೀಡಿದರು. ರೆಡ್ ಕ್ರಾಸ್ ಸಂಸ್ಥೆಯು ಅತ್ಯುತ್ತಮ ಸೇವಾ ಕಾರ್ಯಗಳನ್ನು ಮಾಡುತ್ತಿದೆ ಪ್ರಕೃತಿ ವಿಕೋಪ, ಕೋವಿಡ್-19 ಸಂದರ್ಭದಲ್ಲಿ ಸಂಸ್ಥೆಯ ಸ್ವಯಂಸೇವಕರು ಸಲ್ಲಿಸಿದ ಕಾರ್ಯಕ್ರಮಗಳಿಂದ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು.
ರೆಡ್ ಕ್ರಾಸ್ ಸಂಸ್ಥೆಯು ಕೇವಲ ರಕ್ತದಾನ, ಆರೋಗ್ಯ ಅಭಿವೃದ್ಧಿ ಕಾರ್ಯಕ್ರಮಗಳಷ್ಟೇ ಅಲ್ಲದೇ ಪ್ರಥಮ ಚಿಕಿತ್ಸಾ ಕಾರ್ಯಾಗಾರಗಳು, ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸಲು ಯುವಕರ ಕಾರ್ಯಪಡೆ ತಯಾರು ಮಾಡುತ್ತಿದೆ. ಎಲ್ಲ ವಿಶ್ವವಿದ್ಯಾಲಯಗಳಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಯುವ ರೆಡ್ ಕ್ರಾಸ್ ಘಟಕಗಳು ಸಕ್ರಿಯವಾಗಿದೆ.