ಕರ್ನಾಟಕ

karnataka

ETV Bharat / state

ನೆರೆ ಪೀಡಿತ ಪ್ರದೇಶದಲ್ಲಿ ಎನ್​​ಡಿಆರ್​​ಎಫ್ ಕಾರ್ಯಾಚರಣೆ ಚುರುಕು: ಮಳೆ ನಿಂತ ಬಳಿಕ ಸಮೀಕ್ಷೆ: ಸಿಎಂ ಬಿಎಸ್​​ವೈ - NDRF Team operation in rain affected area

ವಾಯುಭಾರ ಕುಸಿತದಿಂದ ರಾಜ್ಯದ ಹಲವೆಡೆ ಮಳೆಯಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಎನ್ ಡಿಆರ್ ಎಫ್  ತಂಡಗಳು ರಕ್ಷಣಾ ಕಾರ್ಯ ಕೈಗೊಂಡಿವೆ. ಇನ್ನು ಮಳೆ ನಿಂತ ಬಳಿಕ ಪರಿಹಾರ ನೀಡಲು ಮುಂದಾಗುತ್ತೇವೆ ಎಂದು ಸಿಎಂ ಜನರಿಗೆ ಅಭಯ ನೀಡಿದ್ದಾರೆ.

Yadiyurappa
Yadiyurappa

By

Published : Oct 15, 2020, 8:51 PM IST

ಬೆಂಗಳೂರು:ರಾಜ್ಯದಲ್ಲಿ ಸಂಭವಿಸಿರುವ ಮಳೆಹಾನಿಯಿಂದ ಹಲವು ಕಡೆ ಪ್ರವಾಹ ಸ್ಥಿತಿ ತಲೆದೂರಿದ್ದು, ಎನ್ ಡಿಆರ್ ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಮಳೆ ನಿಂತ ನಂತರ ಸಮೀಕ್ಷೆ ನಡೆಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಿದ್ದು, ಜನರು ಆತಂಕಪಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.

ವಾಯುಭಾರ ಕುಸಿತದಿಂದ ಕಳೆದ ಮೂರು- ನಾಲ್ಕು ದಿನಗಳಿಂದ ರಾಜ್ಯದ ಹಲವೆಡೆ ವ್ಯಾಪಕ ಮಳೆಯಾಗುತ್ತಿದೆ. ಭೀಮಾ ನದಿಯಲ್ಲಿ ನೀರು ಹೆಚ್ಚಾಗಿರುವುದರಿಂದ ನದಿಯ ಪಾತ್ರದ ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ. ಈಗಾಗಲೇ ಜಿಲ್ಲಾಡಳಿತಗಳು ಮುಂಜಾಗ್ರತೆ ಕ್ರಮವಾಗಿ ಅಪಾಯದಲ್ಲಿ ಇರುವ ಜನರನ್ನು ಗಂಜಿಕೇಂದ್ರಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಂಡಿವೆ ಎಂದರು.

ಜನರ ಸುರಕ್ಷತೆಗಾಗಿ ಕೇಂದ್ರ ಸರ್ಕಾರದ ವತಿಯಿಂದ ಕಲಬುರಗಿ ಹಾಗೂ ಯಾದಗಿರಿಯಲ್ಲಿ ತಲಾ 2 ಮತ್ತು ರಾಯಚೂರಿನಲ್ಲಿ 1 ಎನ್ ಡಿಆರ್ ಎಫ್ ತಂಡ ಕಾರ್ಯನಿರ್ವಹಿಸುತ್ತಿವೆ. ಹೆಚ್ಚುವರಿಯಾಗಿ ಇನ್ನೂ ಎರಡು ತಂಡಗಳನ್ನು ಕರೆಸುತ್ತೇವೆ. ಅದರಲ್ಲಿ ಒಂದು ತಂಡ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಕಳುಹಿಸಲಾಗುವುದು. ಜನರ ಸುರಕ್ಷತೆಗಾಗಿ ಎರಡು ಹೆಲಿಕ್ಯಾಪ್ಟರ್​ಗಳನ್ನು ಸಹ ಬೀದರ್ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.

ಈಗಾಗಲೇ ಪ್ರವಾಹದಿಂದ ಆಗುತ್ತಿರುವ ಅನಾಹುತಗಳನ್ನು ತಡೆಗಟ್ಟಲು ಹೆಚ್ಚಿನ ನಿಗಾ ವಹಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ನಾಳೆ ಬೆಳಗ್ಗೆ ಪ್ರವಾಹಪೀಡಿತ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ವಿಡಿಯೋ ಸಂವಾದದ ಮೂಲಕ ಸಭೆಯನ್ನೂ ನಡೆಸಲಾಗುತ್ತದೆ. ಮಳೆ ನಿಂತ ನಂತರ ಹಾನಿಯ ಬಗ್ಗೆ ಸಮೀಕ್ಷೆ ಕೈಗೊಂಡು ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಹಾಗಾಗಿ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಪತ್ರಿಕಾ ಪ್ರಕಟಣೆ ಮೂಲಕ ಸಿಎಂ ಅಭಯ ನೀಡಿದ್ದಾರೆ.

ABOUT THE AUTHOR

...view details