ಕರ್ನಾಟಕ

karnataka

ETV Bharat / state

ಕೋವಿಡ್ ನಿಯಂತ್ರಣ ಸಂಬಂಧ ಭಾನುವಾರ ಮುಂದಿನ ಕ್ರಮದ ಘೋಷಣೆ: ಸುಧಾಕರ್

ಸಿಎಂ ಆಧ್ಯಕತೆಯಲ್ಲಿ ಆರೋಗ್ಯ, ವೈದ್ಯಕೀಯ ಮುಖ್ಯಕಾರ್ಯದರ್ಶಿ ಜೊತೆ ಉನ್ನತ ಮಟ್ಟದ ಸಭೆ ಮಾಡಲಾಗಿದೆ. ಬೆಂಗಳೂರಿಗೆ ಸಂಬಂಧಿಸಿದ ಶಾಸಕರು, ಸಚಿವರ ಜೊತೆ ಭಾನುವಾರ ಸಭೆ ನಡೆಯಲಿದೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.

govt-to-announce-next-action-to-control-covid-19
ಸುಧಾಕರ್

By

Published : Apr 16, 2021, 2:09 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೆಚ್ಚಳವಾಗುತ್ತಿದ್ದು, ಭಾನುವಾರ ಎಲ್ಲರ ಸಲಹೆ ಸೂಚನೆ ಪಡೆದು, ಕೋವಿಡ್ ನಿಯಂತ್ರಣದ ಬಗ್ಗೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬ ಘೋಷಣೆ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಸಿಎಂ ನಿವಾಸ ಕಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಆಧ್ಯಕತೆಯಲ್ಲಿ ಆರೋಗ್ಯ, ವೈದ್ಯಕೀಯ ಮುಖ್ಯಕಾರ್ಯದರ್ಶಿ ಜೊತೆ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಬೆಂಗಳೂರಿಗೆ ಸಂಬಂಧಿಸಿದ ಶಾಸಕರು, ಸಚಿವರ ಜೊತೆ ಭಾನುವಾರವೇ ಸಭೆ ನಡೆಯಲಿದೆ. ಇಂದಿನ ಸಭೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದು, ಗುಂಪುಗೂಡುವ ಚಟುವಟಿಕೆಗಳ ನಿಯಂತ್ರಣ, ಚಿಕಿತ್ಸೆ ಕೊಡುವುದು, ಟೆಸ್ಟಿಂಗ್ ಹೆಚ್ಚಳ, ಕಂಟೈನ್‌ಮೆಂಟ್ ಝೋನ್ ಹೆಚ್ಚಳ, ಹೋಮ್ ಐಸೋಲೇಷನ್ ಇರುವವರ ಮೇಲೆ ನಿಗಾ ಇಡುವ ಬಗ್ಗೆ ಇಂದು ಚರ್ಚೆಯಾಗಿದೆ. ಅತಿ ಹೆಚ್ಚು ಹಾಸಿಗೆ ಮೀಸಲಿಡುವುದಕ್ಕೆ ಮೊದಲ ಆದ್ಯತೆ. ಖಾಸಗಿ, ಕಾರ್ಪೊರೇಟ್ ಆಸ್ಪತ್ರೆ. ಮೂರರಿಂದ, ಐದು ಸ್ಟಾರ್ ಹೋಟೆಲ್ ಜೊತೆ ಒಡಂಬಡಿಕೆ ಮಾಡಿಕೊಳ್ಳುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು ಎಂದರು.

ಕಡಿಮೆ ಅನಾರೋಗ್ಯದಲ್ಲಿರುವವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡುವುದು ಶೇ. 95ರಷ್ಟು ಜನರಿಗೆ ಆಸ್ಪತ್ರೆ ಅವಶ್ಯಕತೆ ಇಲ್ಲ. ಹಾಗಾಗಿ ಅವರೆಲ್ಲಾ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುವಂತೆ ಕಳಕಳಿಯ ಮನವಿ ಮಾಡುತ್ತೇನೆ. ಕಡಿಮೆ ಸೋಂಕಿನ ಲಕ್ಷಣ ಇರುವವರು, ಆಸ್ಪತ್ರೆ, ವೈದ್ಯರ ಅವಶ್ಯಕತೆ ಇದೆ ಅನ್ನೋದಾದರೆ ಖಾಸಗಿ ಹೋಟೆಲ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಮೂರು ಸಾವಿರ ಹಾಸಿಗೆ ಹೋಟೆಲ್ ವ್ಯವಸ್ಥೆ ಇದೆ ಬಳಸಿಕೊಳ್ಳಿ ಎಂದು ತಿಳಿಸಿದರು.

ಬೆಂಗಳೂರಿನ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಒಂದು ಸಾವಿರ ಹಾಸಿಗೆ ಮೀಸಲಿರಿಸಲಾಗಿದೆ. ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಎರಡು ಸಾವಿರ ಬೆಡ್ ಜೊತೆ, ಹೆಚ್ಚುವರಿಯಾಗಿ ಎರಡುವರೆ ಸಾವಿರ ಬೆಡ್ ನೀಡಲು ತೀರ್ಮಾನಿಸಿದ್ದು ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದಿಂದ ಕಳಿಸುವ ರೋಗಿಗಳಿಗೆ ಬೆಡ್ ನೀಡಬೇಕು ಎಂದು ಹೇಳಿದರು.
ನಮ್ಮ ಐಎಎಸ್, ಐಪಿಎಸ್, ನೋಡಲ್ ಅಧಿಕಾರಿ, ಸ್ವಸ್ಥ ಅಧಿಕಾರಿಗಳು 24 ಗಂಟೆ ಕೆಲಸ ಮಾಡುತ್ತಾರೆ. ನಾಲ್ಕು ಜನ ಅಧಿಕಾರಿಗಳು ದೊಡ್ಡ ಆಸ್ಪತ್ರೆಯಲ್ಲಿ ಇರಲಿದ್ದಾರೆ. ಬೆಂಗಳೂರಿಗೆ ಸೀಮಿತವಾಗಿ ಪ್ರತೀ ವಾರ್ಡಿಗೆ ಹೆಚ್ಚುವರಿ ಒಂದು ಆಂಬ್ಯುಲೆನ್ಸ್ ಮೀಸಲಿರಿಸಿದ್ದು, 49 ಆಂಬ್ಯುಲೆನ್ಸ್ ಶ್ರದ್ಧಾಂಜಲಿ ಆಂಬ್ಯುಲೆನ್ಸ್ ಆಗಿ ಪರಿವರ್ತನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ರೆಮಿಡಿಸೀವರ್ ಕೊರತೆ ಇಲ್ಲ. ಇದರ ಹೊರತಾಗಿ ಖರೀದಿಗೆ ಪ್ರಕ್ರಿಯೆ ಆರಂಭವಾಗಿದೆ. ಆಕ್ಸಿಜನ್ ಮುಖ್ಯವಾಗಿದ್ದು, ವೈದ್ಯಕೀಯ ಕಾಲೇಜುಗಳಲ್ಲಿ ಆಕ್ಸಿಜನ್ ಘಟಕ ಸ್ಥಾಪನೆಗೆ ಸಿಎಂ ಸೂಚನೆ ನೀಡಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಟೆಂಡರ್ ಕರೆದಿದ್ದು, ಆಕ್ಸಿಜನ್ ಘಟಕ ಸ್ಥಾಪನೆ ಮಾಡಲಿದ್ದೇವೆ. ಜಂಬೂ ಸಿಲಿಂಡರ್‌, ಕಮರ್ಷಿಯಲ್ ಆಕ್ಸಿಜನ್ ಪಡೆಯಲು ಒಡಂಬಡಿಕೆ ಆಗಿದೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಆಗದಂತೆ ಕ್ರಮ ವಹಿಸಿದ್ದೇವೆ. ಮೈಕ್ರೋ ಕಂಟೋನ್ಮೆಂಟ್​​ಗಳನ್ನು ಬೆಂಗಳೂರಿನಲ್ಲಿ ಹೆಚ್ಚಳ ಮಾಡುತ್ತೇವೆ ಎಂದರು.

ರೋಗದ ಲಕ್ಷಣ ಇದ್ದರೆ ಶೀಘ್ರವೇ ಟೆಸ್ಟ್ ಮಾಡಬೇಕು. 24 ಗಂಟೆಯೊಳಗೆ ವರದಿ ಬರಬೇಕು. ಈಗ ಕೆಲವೆಡೆ ಬೇಗ ಬರದಿರೋದು ಗಮನಿಸಿದ್ದೇನೆ. ಶೀಘ್ರವೇ ಫಲಿತಾಂಶ ನೀಡಲು ಸೂಚಿಸುತ್ತೇನೆ. ಜನರ ಚಿಕಿತ್ಸೆಗಾಗಿ ಆರು ತಿಂಗಳ ಕಾಲ ನೇರ ನೇಮಕಾತಿ, ಗುತ್ತಿಗೆ ಆಧಾರದ ಮೇಲೆ ಆರೋಗ್ಯ ಸಿಬ್ಬಂದಿ ತೆಗೆದುಕೊಂಡಿದ್ದೇವೆ. ಅತಿ ಹೆಚ್ಚು ಜನ ಒಂದೆಡೆ ಸೇರುವಂತಿಲ್ಲ. ಒಳಾಂಗಣ ಮದುವೆ ಸಮಾರಂಭದಲ್ಲಿ ಕೇವಲ ನೂರು ಜನ ಇರಬೇಕು. ಹೊರಾಂಗಣ ಮದುವೆ ಸಮಾರಂಭ ಇನ್ನೂರು ದಾಟಬಾರದು, ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಎಚ್ಚರಿಕೆ ನೀಡಿದರು.

ಸಿಎಂ ಯಡಿಯೂರಪ್ಪ ಸಚಿವ ಸಂಪುಟದ ಪ್ರತಿ ಸದಸ್ಯರು ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ನಿಮ್ಮ ಸಲಹೆ, ಸಹಕಾರ ಅವಶ್ಯಕತೆ ಇದೆ ಎಂದು ಪ್ರತಿಪಕ್ಷ ನಾಯಕರಿಗೂ ಮನವಿ ಮಾಡುತ್ತೇನೆ. ಎಲ್ಲರೂ ಸೇರಿ ಸೋಂಕು ನಿಯಂತ್ರಣ ಮಾಡೋಣ.ಅನಗತ್ಯ ಚಟುವಟಿಕೆಗೆ ಬ್ರೇಕ್ ಹಾಕಲು ಮನವಿ ಮಾಡುತ್ತೇನೆ, ಅದಷ್ಟು ಬೇಗ ಎರಡನೇ ಅಲೆ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೂರನೇ ಅಲೆ ಸುಳಿವು:

ಲಸಿಕೆ ಹಾಕಿಸಿಕೊಂಡ ಮೇಲೂ ಸೋಂಕು ಬಂದಿದೆ. ಲಸಿಕೆ ಹಾಕಿಸಿಕೊಂಡವರಿಗೆ ಸೋಂಕು ಬರುವುದಿಲ್ಲ ಅಂತ ನಾವು ಹೇಳಿಲ್ಲ. ಸಾವಿನ ಪ್ರಮಾಣ ಕಡಿಮೆ ಆಗಲಿದೆ. ಅಲ್ಲದೆ ಮುಂದೆ ಬರುವ ಮೂರನೇ ಅಲೆ ತಪ್ಪಿಸಿಕೊಳ್ಳಬಹುದು ಎಂದು ಮೂರನೇ ಅಲೆ ಬಗ್ಗೆ ಸಚಿವ ಸುಧಾಕರ್ ಮುನ್ಸೂಚನೆ ನೀಡಿದರು‌.

ಆತ್ಮಹತ್ಯೆ ಮಾಡಿಕೊಳ್ಳಬೇಡಿ:

ರಾಜ್ಯದಲ್ಲಿ ಕೊರೊನಾ ತೀವ್ರಗೊಂಡಿದ್ದು, ಹೆಚ್ಚು ಆತಂಕ ಪಡುವ ಸ್ಥಿತಿ ಇದೆ. ಆದರೆ ಎರಡನೇ ಅಲೆಯಲ್ಲಿ ಶೇ.95ರಷ್ಟು ಜನರಿಗೆ ಆಸ್ಪತ್ರೆ ಚಿಕಿತ್ಸೆ ಬೇಕಿಲ್ಲ. ಬೇಕಿರೋದು ಕೇವಲ ಶೇ.5ರಷ್ಟು ಜನರಿಗೆ ಮಾತ್ರ, ಹಾಗಾಗಿ ಯಾರೂ ಹೆದರಿ ಆತ್ಮಹತ್ಯೆ ಮಾಡಿಕೊಳ್ಳೋ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಮನವಿ ಮಾಡಿದರು.

ಎಲ್ಲಾ ರಾಜ್ಯಗಳ ಮಾರ್ಗಸೂಚಿ ಗಮನಿಸಿದ್ದು, ನಿರಂತರ ಸಂಪರ್ಕದಲ್ಲಿದ್ದೇವೆ. ಇನ್ನೂ ಅನೇಕ ಕ್ರಮಗಳನ್ನ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.

ಇದನ್ನೂ ಓದಿ:ಖಾಸಗಿ ಆಸ್ಪತ್ರೆಗಳಿಗೆ ಬೆಡ್ ಬಿಟ್ಟುಕೊಡಲು ಡೆಡ್​ಲೈನ್: ಜನಜಂಗುಳಿ ಪ್ರದೇಶಗಳಲ್ಲಿ ಕಠಿಣ ನಿಯಮ ಸಾಧ್ಯತೆ

ABOUT THE AUTHOR

...view details