ಬೆಂಗಳೂರು : ಬೊಮ್ಮಾಯಿ ಸರ್ಕಾರ ಟೆಂಡರ್‌ಗಳಲ್ಲಿ 40% ಕಮಿಷನ್ ಪಡೆಯಲು ಕಾನೂನುಬಾಹಿರ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೆಲ್ಲವನ್ನು ನೋಡಿ ಸುಮ್ಮನೆ ಕೂತಿರುವ ಚುನಾವಣಾ ಆಯೋಗದ ಮೇಲೆ ನಂಬಿಕೆ ಕುಗ್ಗಿವೆ. ಈ ವಿಚಾರವಾಗಿ ಕಾಂಗ್ರೆಸ್ ಪಕ್ಷ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಚುನಾವಣೆ ದಿನಾಂಕ ಘೋಷಿಸುವ ಮುನ್ನ ಅನೇಕ ಟೆಂಡರ್ ಗಳನ್ನು ಸಮರ್ಪಕ ಪ್ರಕ್ರಿಯೆ ಮೂಲಕ ಹೊರಡಿಸಿಲ್ಲ. ಟೆಂಡರ್ ಅಂದಾಜು ಮೊತ್ತ, ಕಾಲಾವಧಿ ನಿಗದಿಯಾಗದೇ ಟೆಂಡರ್ ನೀಡಲಾಗಿದೆ. ಇಲಾಖೆವಾರು ಕಾಮಗಾರಿ ವೆಚ್ಚದ ಪರಿಶೀಲನೆ ಇಲ್ಲದೆ ಟೆಂಡರ್ ನೀಡಲಾಗಿದೆ. ಬೊಮ್ಮಾಯಿ ಸರ್ಕಾರ ಕೇವಲ 40% ಕಮಿಷನ್ ಪಡೆಯುವ ಏಕಮಾತ್ರ ಉದ್ದೇಶದಿಂದ ಈ ರೀತಿ ಅಕ್ರಮವಾಗಿ ಟೆಂಡರ್ ನೀಡಲಾಗಿದೆ. ಈ ವಿಚಾರವಾಗಿ ರಾಜ್ಯ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಈ ದೂರಿನಲ್ಲಿ ಕೆಲವು ಟೆಂಡರ್ ಗಳ ಉಲ್ಲೇಖವನ್ನು ಮಾಡಲಾಗಿದೆ ಎಂದರು.
ಶಿರಾಡಿ ಘಾಟ್ ಟೆಂಡರ್ ಗೆ 1976 ಕೋಟಿ, ದೊಡ್ಡಬಳ್ಳಾಪುರದ ಕಾಮಗಾರಿಗೆ 1682 ಕೋಟಿ, ಆಂಧ್ರ ಪ್ರದೇಶ-ಕರ್ನಾಟಕ ಗಡಿ ಭಾಗದ ರಾಯಚೂರಿನಲ್ಲಿ 1633 ಕೋಟಿ, ಹಾಸನ ನಾಲ್ಕು ಪಥ ರಸ್ತೆಗೆ 1318 ಕೋಟಿ, ವಿವಿಧ ಬೈಪಾಸ್ಗಳ ಅಭಿವೃದ್ಧಿಗೆ 1167 ಕೋಟಿ ಹೀಗೆ ದೊಡ್ಡ ಪಟ್ಟಿಗಳಿವೆ. ಒಟ್ಟು 16,516 ಕೋಟಿ ಮೊತ್ತದ ಟೆಂಡರ್ ಗಳನ್ನು ತರಾತುರಿಯಲ್ಲಿ ನೀಡಲಾಗಿದೆ. ಈ ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗ ಸೋಮವಾರ ಸಂಜೆ ಒಂದು ಆದೇಶ ಹೊರಡಿಸಿದ್ದು, ಆಯೋಗವು ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ಟೆಂಡರ್ ಪ್ರಕ್ರಿಯೆ ಮುಂದುವರಿಸದಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.ಇನ್ನು ಈ ಟೆಂಡರ್ ಗಳಿಗೆ ಚುನಾವಣೆ ಮುಗಿಯುವವರೆಗೂ ತಡೆ ನೀಡಬೇಕು. ಇನ್ನು ಈಗಾಗಲೇ ಕರೆಯಲಾಗಿರುವ ಟೆಂಡರ್ ಪ್ರಕ್ರಿಯೆ ಹಾಗೂ ಮುಂದಿನ ದಿನಗಳಲ್ಲಿ ಯಾವುದೇ ಹೊಸ ಟೆಂಡರ್ ಕರೆಯಬಾರದು ಎಂದು ಎಂದು ತಿಳಿಸಿದೆ. ಅಲ್ಲದೆ ಕಾರ್ಯಾದೇಶ ನೀಡಬಾರದು ಎಂದು ತಿಳಿಸಿದೆ ಎಂದು ವಿವರಿಸಿದರು.