ಕರ್ನಾಟಕ

karnataka

ETV Bharat / state

ಆರ್ಥಿಕ ಸಂಕಷ್ಟ ಸರಿದೂಗಿಸಲು ಪರ್ಯಾಯ ಆದಾಯ ಮಾರ್ಗೋಪಾಯ: ಹೇಗಿದೆ ಬೊಕ್ಕಸದ ಸ್ಥಿತಿಗತಿ? - ಆರ್ಥಿಕ ಸಂಕಷ್ಟ ಸರಿ ಮಾಡಲು ಪರ್ಯಾಯ ಮಾರ್ಗ ಅನುಸರಿಸಿದ ಸರ್ಕಾರ

ಕೊರೊನಾ ಲಾಕ್​ಡೌನ್​ನಿಂದ ಆರ್ಥಿಕವಾಗಿ ಸರ್ಕಾರಕ್ಕೆ ಸಾಕಷ್ಟು ನಷ್ಟ ಉಂಟಾಗಿದೆ. ಇದನ್ನು ಸರಿದೂಗಿಸಲು ಸರ್ಕಾರ ಕೆಲವೊಂದು ಪರ್ಯಾಯ ಆದಾಯ ಮಾರ್ಗೋಪಾಯಗಳನ್ನು ಅನುಸರಿಸಿತ್ತು. ಇವುಗಳ ಸ್ಥಿತಿಗತಿಗಳ ಕುರಿತಂತೆ ಮಾಹಿತಿ ಇಂತಿದೆ.

ವಿಧಾನ ಸೌಧ
vidhana soudha

By

Published : Feb 28, 2021, 2:00 PM IST

ಬೆಂಗಳೂರು:ಕೋವಿಡ್ ಹಿನ್ನೆಲೆಯಲ್ಲಿ ಹೇರಲಾದ ಲಾಕ್‌ಡೌನ್​ನಿಂದ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಇದಕ್ಕಾಗಿ ಸರ್ಕಾರ ಪರ್ಯಾಯ ಸಂಪನ್ಮೂಲ ಕ್ರೋಢೀಕರಣದ ಮಾರ್ಗಗಳ ಮೊರೆ ಹೋಗಿತ್ತು. ಆದರೆ ಈ ಮಾರ್ಗೋಪಾಯಗಳಿಂದ ಈವರೆಗೆ ನಿರೀಕ್ಷಿತ ಆದಾಯ ಸಂಗ್ರಹಿಸಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ.

ಲಾಕ್‌ಡೌನ್​​​ನಿಂದ ಸೊರಗಿದ ಬೊಕ್ಕಸವನ್ನು ತುಂಬಿಸಲು ಸರ್ಕಾರ ಪರ್ಯಾಯ ಮಾರ್ಗೋಪಾಯಗಳ‌ ಮೊರೆ ಹೋಗಿತ್ತು. ಅದರಂತೆ ಸರ್ಕಾರ ಬಿಡಿಎ ಮೂಲೆ ನಿವೇಶನ ಹರಾಜು, ಬಿಡಿಎ ಬಡಾವಣೆಯಲ್ಲಿನ ಕಟ್ಟಡ ಅಕ್ರಮ ಸಕ್ರಮಕ್ಕೆ ಕೈ ಹಾಕಿತ್ತು. ಸರ್ಕಾರಿ ಒತ್ತುವರಿ ಜಮೀನನ್ನು ತೆರವುಗೊಳಿಸಿ ಅವುಗಳನ್ನು ಹರಾಜು ಹಾಕುವ ಮೂಲಕ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿತ್ತು. ಆದಾಯ ಕೊರತೆ ಎದುರಿಸುತ್ತಿರುವ ರಾಜ್ಯದ ಖಜಾನೆ ತುಂಬಿಸಲು ಸರ್ಕಾರ ಮೊರೆ ಹೋಗಿದ್ದ ಪರ್ಯಾಯ ಮಾರ್ಗಗಳು ನಿರೀಕ್ಷಿತ ಫಲ ನೀಡುವಲ್ಲಿ ವಿಫಲವಾಗಿವೆ.

ಬಿಡಿಎ ವರದಿ

ಕಾರ್ನರ್ ನಿವೇಶನ ಹರಾಜಿನಿಂದ ಸಂಗ್ರಹವಾಗಿದ್ದೆಷ್ಟು?:

ಸರ್ಕಾರ ಬಿಡಿಎಯ ಕಾರ್ನರ್ ನಿವೇಶನ ಹರಾಜು ಹಾಕುವ ಮೂಲಕ ಬಹುಪಾಲು ಸಂಪನ್ಮೂಲ ಕ್ರೋಢೀಕರಣದ ಲೆಕ್ಕಾಚಾರ ಮಾಡಲಾಗಿತ್ತು. ಬಿಡಿಎಯ ಎಲ್ಲಾ 9 ಬಡಾವಣೆಗಳಲ್ಲಿರುವ 12,000 ಕಾರ್ನರ್ ಸೈಟ್​​ಗಳನ್ನು ಹರಾಜು ಮಾಡಿ ಆ ಮೂಲಕ 15,000 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಈ ಸಂಬಂಧ ಬಿಡಿಎ ಈವರೆಗೆ ಒಟ್ಟು 6 ಸುತ್ತಿನ ಮೂಲೆ ನಿವೇಶನ ಹರಾಜು ಪ್ರಕ್ರಿಯೆ ಪೂರ್ಣಗೊಳಿಸಿದೆ. ಈವರೆಗೆ ಒಟ್ಟು 1,572 ಕಾರ್ನರ್ ಸೈಟ್​​ಗಳನ್ನು ಹರಾಜು ಮಾಡಲಾಗಿದ್ದು, ಇದರಿಂದ ಬಿಡಿಎ 1,422.51 ಕೋಟಿ ರೂ. ಸಂಗ್ರಹಿಸಿದೆ. ಇದರಲ್ಲಿ 509.22 ಕೋಟಿ ರೂ. ಹೆಚ್ಚಿನ ಗಳಿಕೆಯಾಗಿದೆ. ಸ್ವಲ್ಪ ಮಟ್ಟಿಗೆ ಸಂಪನ್ಮೂಲ ಕ್ರೋಢೀಕರಣವಾಗಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಆದಾಯ ಸಂಗ್ರಹವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೈಗೂಡದ ಬಿಡಿಎ ಅಕ್ರಮ‌‌-ಸಕ್ರಮ:

ಸರ್ಕಾರ ಬಿಡಿಎ ಬಡಾವಣೆಗಳಲ್ಲಿನ ಕಟ್ಟಡಗಳ ಅಕ್ರಮಗಳನ್ನು ಸಕ್ರಮಗೊಳಿಸುವ ಮೂಲಕ ದೊಡ್ಡ ಪ್ರಮಾಣದಲ್ಲಿ ಆದಾಯ ಸಂಗ್ರಹಕ್ಕೆ ಯೋಜಿಸಿತ್ತು. ಆದರೆ ಬಿಡಿಎ ಅಕ್ರಮ ಸಕ್ರಮ ಇನ್ನೂ ಆರಂಭಿಕ ಹಂತದಲ್ಲೇ ಇದ್ದು, ಸದ್ಯದ ಮಟ್ಟಿಗೆ ಆದಾಯದ ನಿರೀಕ್ಷೆ ಅಸಾಧ್ಯವಾಗಿದೆ. ಈಗಾಗಲೇ ಆನ್​​​ಲೈನ್ ಮೂಲಕ ಅಕ್ರಮ‌ ಸಕ್ರಮಕ್ಕಾಗಿ ಅರ್ಜಿ ಹಾಕಲು ತಿಳಿಸಲಾಗಿದೆ. ಅರ್ಜಿ ಹಾಕಿದ ಮಾಲೀಕರಿಗೆ ಬಿಡಿಎ ನೋಟಿಸ್ ಹಾರಿ ಗೊಳಿಸುವ ಪ್ರಕ್ರಿಯೆ ಪ್ರಾರಂಭಿಸಿದೆ. ಈ ಮಧ್ಯೆ ಕಾನೂನು ತೊಡಕು ತೂಗು ಕತ್ತಿಯಂತೆ ತೂಗಾಡುತ್ತಿದ್ದು, ಇದು ಅಕ್ರಮ-ಸಕ್ರಮದ ಯೋಜನೆ ಜಾರಿಗೆ ಕಂಟಕವಾಗಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಲೇ ಬಿಡಿಎ 72,000 ಅಕ್ರಮ ಕಟ್ಟಡಗಳನ್ನು ಗುರುತಿಸಿದ್ದು, ಈ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವ ಮೂಲಕ ಸುಮಾರು 9,000 ಕೋಟಿ ರೂ. ಆದಾಯ ಸಂಗ್ರಹಕ್ಕೆ ಯೋಜಿಸಿತ್ತು. ಆದರೆ ಇನ್ನೂ ಅಕ್ರಮ-ಸಕ್ರಮ ಯೋಜನೆ ಕೈಗೂಡುವ ಕಾಲ ಸನಿಹದಲ್ಲಿಲ್ಲ. ಈವರೆಗೆ ಅಕ್ರಮ ಸಕ್ರಮದಿಂದ ಬಿಡಿಎಗೆ ಬಿಡಿಗಾಸು ಕೈ ಸೇರಿಲ್ಲ ಎನ್ನಲಾಗುತ್ತಿದೆ.

ವಿಳಂಬವಾಗಲಿದೆ ಒತ್ತುವರಿ ಭೂಮಿಯ ಹರಾಜು:

ಕರ್ನಾಟಕ ಸರ್ಕಾರ ಒತ್ತುವರಿಯಾಗಿರುವ ಸರ್ಕಾರಿ ಜಮೀನನ್ನು ತೆರವು ಮಾಡಿ ಅದನ್ನು ಹರಾಜು ಹಾಕುವ ಮೂಲಕ ಸಂಪನ್ಮೂಲ ಕ್ರೋಢೀಕರಣಕ್ಕೆ ನಿರ್ಧರಿಸಿತ್ತು. ಆ ಮೂಲಕ ಸುಮಾರು 3,000 ಕೋಟಿ ರೂ. ಆದಾಯ ಸಂಗ್ರಹದ ಗುರಿ ಸರ್ಕಾರದ್ದು. ಕಳೆದ ವರ್ಷ ಆಗಸ್ಟ್ ನಲ್ಲೇ ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಆದರೆ ಈವರೆಗೆ ತೆರವುಗೊಳಿಸಿರುವ ಒತ್ತುವರಿ ಸರ್ಕಾರಿ ಭೂಮಿಯ ಹರಾಜು ಪ್ರಕ್ರಿಯೆ ಮಾತ್ರ ಪ್ರಾರಂಭವಾಗಿಲ್ಲ. ಸದ್ಯಕ್ಕೆ ಹರಾಜು ಪ್ರಕ್ರಿಯೆ ಪ್ರಾರಂಭ ಸಾಧ್ಯತೆ ಕಡಿಮೆ ಇದ್ದು, ಬಜೆಟ್ ಬಳಿಕ ಹರಾಜು ಪ್ರಕ್ರಿಯೆ ಶುರುವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿವರೆಗೆ ಸುಮಾರು 2.7 ಲಕ್ಷ ಎಕರೆ ಒತ್ತುವರಿಗೊಂಡಿದ್ದ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಪೈಕಿ ಬೆಂಗಳೂರಲ್ಲೇ 16,148 ಎಕರೆ ಜಮೀನು ಇದೆ. ಮೊದಲ ಸುತ್ತಿನಲ್ಲಿ ಕಾನೂನು ತಕರಾರು ಇಲ್ಲದ ಸುಮಾರು 107 ಎಕರೆ ಜಮೀನನ್ನು ರಾಜ್ಯ ಸರ್ಕಾರ ಹರಾಜು ಹಾಕಲು ಮುಂದಾಗಿತ್ತು. ಆದರೆ ಅದು ಇನ್ನೂ ಸಾಧ್ಯವಾಗಿಲ್ಲ.

ಓದಿ: ತನ್ವೀರ್ ಸೇಠ್​ ಜೆಡಿಎಸ್​ಗೆ ಬಂದರೆ ಸ್ವಾಗತ: ಶಾಸಕ ಸಾ.ರಾ. ಮಹೇಶ್ ಮುಕ್ತ ಆಹ್ವಾನ

ಇನ್ನೂ ಜಾರಿಯಾಗದ ಸಿಎ ನಿವೇಶನ ಮಾರಾಟ:

ಸಿಎ ನಿವೇಶನಗಳನ್ನು ವಿವಿಧ ಸಂಸ್ಥೆಗಳಿಗೆ ಮಾರಾಟ ಮಾಡುವ ಮೂಲಕ ಸುಮಾರು 3000 ಕೋಟಿ ರೂ. ಆದಾಯ ಸಂಗ್ರಹಕ್ಕೂ ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಬಿಡಿಎ ಸುಮಾರು 1,500 ಸಿಎ ನಿವೇಶನಗಳನ್ನು ವಿವಿಧ ಸಂಸ್ಥೆಗಳಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ಅನೇಕ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳು ಸಿಎ ಸೈಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಗುತ್ತಿಗೆ ಪಡೆದ ಸಂಸ್ಥೆಗಳಿಗೆ ಸಿಎ ಸೈಟ್​ಗಳನ್ನು ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಇಲ್ಲಿವರೆಗೆ ಸುಮಾರು 27 ಖಾಸಗಿ ಸಂಸ್ಥೆಗಳು ಸಿಎ ನಿವೇಶನವನ್ನು ಖರೀದಿಸಲು ಒಲವು ತೋರಿ ಬಿಡಿಎಗೆ ಅರ್ಜಿ ಸಲ್ಲಿಸಿವೆ. ಆದರೆ ಇನ್ನೂ ಸಿಎ ನಿವೇಶನಗಳ ಮಾರಾಟ ಕಾರ್ಯ ರೂಪಕ್ಕೆ‌‌ ಬಂದಿಲ್ಲ. ಜೊತೆಗೆ ಸಿಎ ನಿವೇಶನ ಮಾರಾಟದ ಸರ್ಕಾರದ ನಿರ್ಧಾರಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details