ಬೆಂಗಳೂರು: ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಆಶ್ರಯದಲ್ಲಿ ಸಮಾಜದ ಆರ್ಥಿಕವಾಗಿ ದುರ್ಬಲರಾಗಿರುವ ಬ್ರಾಹ್ಮಣರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಸರ್ಕಾರದಿಂದ ಎಲ್ಲ ಸಹಕಾರ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ಆಯೋಜಿಸಿದ್ದ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಕಳೆದ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಬ್ರಾಹ್ಮಣ ವಿದ್ಯಾರ್ಥಿಗಳನ್ನು ಗೌರವಿಸಿ ಮತ್ತು ಮಂಡಳಿಯ 'ಅರುಂಧತಿ' ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕಳೆದ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳು ಮಂಡಳಿ ಪರೀಕ್ಷೆ ಕೈ ಬಿಟ್ಟಾಗ ಮಕ್ಕಳ ಹಿತದೃಷ್ಟಿಯಿಂದ ನಮ್ಮ ಸರ್ಕಾರ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಡೆಸಿತ್ತು. ಇದರಿಂದಾಗಿ ಅನೇಕ ಪ್ರತಿಭೆಗಳ ಅನಾವರಣಕ್ಕೆ ಅವಕಾಶವಾಯಿತು ಎಂದರು.
ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಸರ್ಕಾರದ ಸಹಕಾರ: ಸಚಿವ ಸುರೇಶ್ ಕುಮಾರ್ ಕಳೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪೂರ್ಣ 625 ಅಂಕಗಳನ್ನು ಪಡೆದ ವಿದ್ಯಾರ್ಥಿನಿ ಸೇರಿದಂತೆ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಮಕ್ಕಳು ವೇದಿಕೆಯಲ್ಲಿ ಗೌರವಕ್ಕೆ ಅರ್ಹರಾಗಿದ್ದನ್ನು ಸ್ಮರಿಸಿದ ಸಚಿವರು, ಪರೀಕ್ಷೆ ನಡೆಸದೆ ಹೋಗಿದ್ದರೆ ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತಿತ್ತು. ಪ್ರತಿಭಾವಂತರಿಗೆ ಅನ್ಯಾಯವಾಗುವುದನ್ನು ತಪ್ಪಿಸಲೋಸುಗವೆ ಎಷ್ಟೇ ಕಷ್ಟವಾದರೂ ನಮ್ಮ ಸರ್ಕಾರ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಡೆಸಿತು. ಅಂದು ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯ ಯಶಸ್ಸು ಅಂದು ಮನೆಯಿಂದ ಧೈರ್ಯವಾಗಿ ಹೊರಬಂದು ಪರೀಕ್ಷೆ ಬರೆದ 8.5 ಲಕ್ಷ ಮಕ್ಕಳಿಗೆ ಸಲ್ಲಬೇಕಿದೆ ಎಂದರು.
ಕಳೆದ ತಿಂಗಳು 6ನೇ ತರಗತಿ ಪುಸ್ತಕದಲ್ಲಿ ವಿಪ್ರ ಸಮಾಜಕ್ಕೆ ಅವಹೇಳನವಾಗುವಂತಹ ಪಠ್ಯವೊಂದಿರುವ ಕುರಿತು ಮಂತ್ರಾಲಯ ಶ್ರೀಮಠದ ಪೂಜ್ಯರು ನನ್ನ ಗಮನಕ್ಕೆ ತಂದಿದ್ದಲ್ಲದೇ ಪಠ್ಯಗಳಲ್ಲಿ ಯಾವುದೇ ಸಮಾಜದ ಇಲ್ಲವೇ ಯಾವುದೇ ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಪಠ್ಯಗಳಿರಬಾರದು ಎಂದರು. ತಕ್ಷಣವೇ ಅವರಿಗೆ ಮಾತು ಕೊಟ್ಟಂತೆ ನಾವು ಅದನ್ನು ಸರಿಪಡಿಸಿದೆವು. ಈ ಪಠ್ಯ ನಮ್ಮ ಸರ್ಕಾರದ ಅವಧಿಯಲ್ಲಿ ಪರಿಷ್ಕರಣೆ ಆಗಿದ್ದಾಗಿರಲಿಲ್ಲ ಎಂಬುದನ್ನು ನಾನು ಮಂತ್ರಾಲಯದ ಶ್ರೀಗಳ ಗಮನಕ್ಕೆ ತಂದು, ಯಾವುದೇ ಸಮಾಜದ ಭಾವನೆಗಳಿಗೆ ಧಕ್ಕೆಯಾಗುವಂತಹ ಪಠ್ಯಗಳಿದ್ದರೆ ಅವುಗಳನ್ನು ಪಠ್ಯದಿಂದ ಕೈಬಿಡುವ ಕುರಿತು ಗಮನಹರಿಸಲಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು. ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎಸ್. ಸಚ್ಚಿದಾನಂದ ಮೂರ್ತಿಯವರು ತಮಗೆ ದೊರೆತ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಸಮಾಜದ ಬಡವರ ಆರ್ಥಿಕಾಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆಂದು ಕೃತಜ್ಞತೆ ಸಲ್ಲಿಸಿದರು.
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಬಡ ಬ್ರಾಹ್ಮಣ ಎಂದು ಸರ್ಟಿಫಿಕೇಟ್ ತೆಗೆದುಕೊಳ್ಳಲು 70, 80 ವರ್ಷ ಆಯಿತು. ಜಾತಿ ಸರ್ಟಿಫಿಕೇಟ್ ತೆಗೆದುಕೊಳ್ಳಲು ಕಾನೂನಿನಡಿ ಅವಕಾಶ ಇರಲಿಲ್ಲ. ಈ ರೀತಿಯ ಅರ್ಜಿ ಬಂದಾಗ ನನಗೇ ಆಶ್ಚರ್ಯವಾಯಿತು. ಜಿಲ್ಲಾಧಿಕಾರಿಗಳನ್ನು ಕೇಳಿದಾಗ ಅವರು ಸಹ ಪ್ರಾವಿಜನ್ ಇಲ್ಲವೆಂದು ಹೇಳಿದರು. ಹಾಗಾಗಿ ಎಲ್ಲ 30 ಜಿಲ್ಲೆಗಳಲ್ಲೂ ಜಾತಿ ಸರ್ಟಿಫಿಕೇಟ್ ಕೊಡಲು ಆದೇಶಿಸಲಾಗಿದೆ. ಸರ್ಟಿಫಿಕೇಟ್ ಕೊಡದಿದ್ದರೆ ಅಂತಹ ಮಾಹಿತಿಯನ್ನು ನನ್ನ ಗಮನಕ್ಕೆ ತರಬಹುದು. ಇನ್ನೂ ಕೇಂದ್ರ ಸರ್ಕಾರ ಶೇ 10 ರಷ್ಟು ಮೀಸಲಾತಿಯನ್ನು ಘೋಷಣೆ ಮಾಡಿದೆ. ರಾಜ್ಯದಲ್ಲೂ ಮೀಸಲಾತಿ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಸಚಿವ ಅಶೋಕ್ ತಿಳಿಸಿದರು.
ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಗೋವಿಂದ ಕಾರಜೋಳ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕೆ. ಗೋಪಾಲಯ್ಯ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್, ಶಾಸಕ ಎಸ್.ಆರ್. ಶ್ರೀನಿವಾಸ್, ಎಸ್.ಎ. ರಾಮದಾಸ್, ಉದಯ ಗರುಡಾಚಾರ್, ಪೂರ್ಣಿಮಾ ಶ್ರೀನಿವಾಸ್, ಕರ್ನಾಟಕ ಬ್ರಾಹ್ಮಣ ಮಂಡಳಿ ಅಧ್ಯಕ್ಷ ಕೆ.ಎಸ್. ಸಚ್ಚಿದಾನಂದ ಮತ್ತಿತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್, ಹಿಂದಿನ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಅವರನ್ನು ಸನ್ಮಾನಿಸಲಾಯಿತು.