ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು. ಬೆಂಗಳೂರು: ಆರ್ ಟಿ ಐ ಹಾಕುವವರ ಮಾಹಿತಿ ಕಲೆ ಹಾಕುವಂತೆ ಎಲ್ಲ ಇಲಾಖೆಗಳಿಗೆ ಸುತ್ತೋಲೆ ಹೊರಡಿಸುವ ಮೂಲಕ ರಾಜ್ಯ ಸರ್ಕಾರ ಸಾಮಾಜಿಕ ಕಾರ್ಯಕರ್ತರ ನಿಯಂತ್ರಣಕ್ಕೆ ಮುಂದಾಗಿದೆ. ಆರ್‌ಟಿಐ ಉದ್ದೇಶವನ್ನು ಗಾಳಿಗೆ ತೂರಿ ಕಾನೂನು ದುರ್ಬಳಕೆಗೆ ಮುಂದಾಗಿದೆ ಎಂದು ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಆರೋಪಿಸಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್ಟಿಐನಡಿ ಮಾಹಿತಿ ಕೇಳಿದ ಆರ್‌ಟಿಐ ಕಾರ್ಯಕರ್ತರ ದಾಖಲೆ ಸಂಗ್ರಹಕ್ಕೆ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳಿಗೂ ಸರ್ಕಾರ ಸೂಚನೆ ನೀಡಿದೆ. ಇದು ಸ್ಪಷ್ಟ ಕಾನೂನು ದುರ್ಬಳಕೆ, ಆರ್‌ಟಿಐ ನಿಯಮಗಳಲ್ಲೇ ಮಾಹಿತಿ ಕೇಳಿದವರ ಮಾಹಿತಿ ಬಹಿರಂಗ ಮಾಡಬಾರದು ಅಂತ ಇದೆ. ಆದರೆ ಸರ್ಕಾರ ಆರ್‌ಟಿಐ ಉದ್ದೇಶವನ್ನೇ ಗಾಳಿಗೆ ತೂರುತ್ತಿದೆ. ಆರ್‌ಟಿಐ ಕಾರ್ಯಕರ್ತರನ್ನು ಬೆದರಿಸಲು ಅವರ ಪಟ್ಟಿಯನ್ನು ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಇಂಥ ಜನವಿರೋಧಿ ನೀತಿ ಅನುಸರಿಸುತ್ತದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಔರಂಗಜೇಬ್, ಟಿಪ್ಪು ಕಟೌಟ್ ವಿಚಾರದ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅಶ್ವತ್ಥನಾರಾಯಣ, ನಮ್ಮ ದೇಗುಲಗಳನ್ನು ನಿರ್ನಾಮ ಮಾಡಿದ್ದು ಔರಂಗಜೇಬ್, ಟಿಪ್ಪು ಸುಲ್ತಾನ್. ಹಿಂದುಗಳನ್ನು ಕೊಲ್ಲಿಸಿದ ಅವರಿಬ್ಬರ ಕಟೌಟ್ ಹಾಕಿ ಏನು ಸಂದೇಶ ಕೊಡ್ತಿದ್ದಾರೆ ಇವರು? ಎಂದು ಪ್ರಶ್ನಿಸಿದರು. ಕರ್ನಾಟಕದಲ್ಲಿ ಹಿಂದುಗಳನ್ನು ಎರಡನೇ ದರ್ಜೆ ನಾಗರಿಕರಂತೆ ಬಿಂಬಿಸಲಾಗಿದೆ. ಇದನ್ನೆಲ್ಲ ಸರ್ಕಾರ ಮುಚ್ಚಿಡಲು ಪ್ರಯತ್ನಿಸಿದೆ. ಗೃಹ ಸಚಿವರು ಇದು ಸಣ್ಣ ಘಟನೆ ಅಂತಾರೆ. ಕಲ್ಲು ತೂರಿದವರನ್ನು ಬಿಟ್ಟು ಅಮಯಾಕರನ್ನು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದವರಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ದೂರಿದರು.
ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿಯುತ್ತದೆ. ಜನರ ರಕ್ಷಣೆ ಇರಲಿ ಪೊಲೀಸರ ರಕ್ಷಣೆ ಮಾಡಲು ಸಹ ವಿಫಲವಾಗುತ್ತಿದೆ. ಶಿವಮೊಗ್ಗದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಐಪಿಎಸ್ ಅಧಿಕಾರಿ ಮೇಲೆ ಕಲ್ಲು ತೂರಿದ್ದಾರೆ. ಈ ಸರ್ಕಾರ ಓಲೈಕೆ ರಾಜಕೀಯ ಮಾಡುತ್ತಿದೆ. ಭಯದ ವಾತಾವರಣಕ್ಕೆ ಕುಮ್ಮಕ್ಕು ಕೊಡುತ್ತಿದೆ. ಔರಂಗಜೇಬ್ ವಿಜೃಂಭಣೆಯನ್ನು ತಡೆದಿದ್ದರೆ ಗಲಭೆ ಆಗುತ್ತಿತ್ತಾ? ಎಂದು ಅಶ್ವತ್ಥನಾರಾಯಣ ಪ್ರಶ್ನಿಸಿದರು.
ಕೆಜಿಹಳ್ಳಿ ಡಿಜೆಹಳ್ಳಿ ಘಟನೆ ಸೇರಿದಂತೆ ಹಲವು ಕಡೆ ಆರೋಪಿಗಳ ವಿರುದ್ಧ ಇದ್ದ ಪ್ರಕರಣಗಳನ್ನು ಹಿಂಪಡೆಯಲಾಗುತ್ತಿದೆ. ಇಂತಹ ಪ್ರಕರಣಗಳನ್ನು ವಾಪಸ್ ಪಡೆಯಬಾರದು. ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಆಗಿ ಕೇಸ್ಗಳು ನಡೆಯುತ್ತಿವೆ. ಕೇಸ್ ವಾಪಸ್ ಮಾಡಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆಯಲಿ ಎಂದು ಅವರು ಆಗ್ರಹಿಸಿದರು.
ಜಾತಿ ಗಣತಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ, ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಈಗ ಜಾತಿ ಗಣತಿ ಮಾಡಲು ಬೇಡಿಕೆ ಇಡುತ್ತಿದೆ. ಇದು ಸರಿಯಲ್ಲ ಎಂದರು. ಆರು ತಿಂಗಳಲ್ಲಿ ಸರ್ಕಾರ ಇರಲ್ಲ ಅನ್ನೋ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ, ಈ ವಿಚಾರದಲ್ಲಿ ನಾವೇನೂ ಮಾಡುತ್ತಿಲ್ಲ, ಸರ್ಕಾರದಲ್ಲೇ ಎಲ್ಲ ಆಗುತ್ತಿದೆ. ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನ ಇದೆ. ಹಲವರು ಬೇಸರ, ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅವರ ಶಾಸಕರು ತಮ್ಮ ಸರ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ. ಏನೇ ಹಾಳಾದರೂ ಅವರ ಒಳಗಿಂದ ಆಗುತ್ತದೆ. ನಾವೇನೂ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಸ್ಥಾನ ವಿಳಂಬ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಅಶ್ವತ್ಥನಾರಾಯಣ, ವರಿಷ್ಠರು ಯಾರನ್ನು ನೇಮಕ ಮಾಡುತ್ತಾರೋ ಆಗ ಅವರು ಆಗುತ್ತಾರೆ. ನಾವು ಅದನ್ನು ಕೊಡಿ ಇದನ್ನು ಕೊಡಿ ಅಂತ ಯಾರೂ ಅಪೇಕ್ಷೆ ಪಟ್ಟಿಲ್ಲ. ಯಾರಿಗೆ ಯಾವ ಜವಾಬ್ದಾರಿ ಕೊಡುತ್ತಾರೋ ಅದರಂತೆ ಕೆಲಸ ಮಾಡುತ್ತಾರೆ. ವಿಳಂಬಕ್ಕೆ ಅದರದ್ದೇ ಆದ ಕಾರಣಗಳು ಇರಲಿವೆ. ಪ್ರತಿಪಕ್ಷ ಆಗಿ ನಾವು ಈಗ ಪ್ರಬಲವಾಗಿ ಕೆಲಸ ಮಾಡುತ್ತಿದ್ದೇವೆ. ಸೂಕ್ತ ಕಾಲದಲ್ಲಿ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಮಾತನಾಡಿ, ಯಾರೆಲ್ಲ ಅತಿ ಹೆಚ್ಚು ಆರ್‌ಟಿಐ ಹಾಕುತ್ತಾರೋ ಅವರ ಮಾಹಿತಿಯನ್ನೇ ಕಲೆ ಹಾಕಿ ಎಂದು ಸರ್ಕಾರ ಹೇಳಿದೆ. ಮಾಹಿತಿ ಹಕ್ಕಿನಡಿ ಅರ್ಜಿ ಹಾಕಲು ಮುಕ್ತ ವಾತಾವರಣ ಇರಬೇಕು. ಆದರೆ ಸರ್ಕಾರ ಅದಕ್ಕೆ ಅವಕಾಶ ಕೊಡುತ್ತಿಲ್ಲ. ಸರ್ಕಾರ ಆರ್‌ಟಿಐ ಕಾರ್ಯಕರ್ತರಿಗೆ ಅಡ್ವಾನ್ಸ್ ಬೆದರಿಕೆ ಕೊಡುತ್ತಿದೆ. ಎಲ್ಲ ವ್ಯವಹಾರಗಳ ಮಾಹಿತಿ ಹಂಚಿಕೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿದೆ. ಸ್ಕ್ಯಾಮ್ ಬಹಿರಂಗ ಆಗದಂತೆ ತಡೆಯಲು ಈ ಪ್ರಯತ್ನ ಮಾಡುತ್ತಿದೆ. ಭ್ರಷ್ಟಾಚಾರವನ್ನು ಸುರಕ್ಷಿತವಾಗಿಡಲು ಸರ್ಕಾರ ಈ ಸರ್ಕ್ಯುಲರ್ ಹೊರಡಿಸಿದೆ. ಈ ರೀತಿಯ ನಿರ್ದೇಶನ ಹೊರಡಿಸಲು ಯಾರಿಗೂ ಹಕ್ಕಿಲ್ಲ. ಆರ್ ಟಿ ಐ ಕಾರ್ಯಕರ್ತರ ಗೌಪ್ಯತೆ ಕಾಪಾಡಲು ಸುಪ್ರಿಂ ಕೋರ್ಟ್ ಇತ್ತೀಚೆಗೆ ಹೇಳಿದೆ ಎಂದು ಮಾಹಿತಿ ಹಂಚಿಕೊಂಡರು.
ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮಾತನಾಡಿ, ಈ ಸರ್ಕಾರ ಸಂಪೂರ್ಣ ನರ್ವಸ್ ಆಗಿದೆ. ಕಾವೇರಿ ವಿಚಾರದಲ್ಲಿ ವಿಫಲವಾಗಿದೆ. ಸೋಶಿಯಲ್ ಆಕ್ಟಿವಿಸ್ಟ್ ಮೇಲೆ ನಿಗಾ ವಹಿಸಿದ್ದಾರೆ. ಶಿವಮೊಗ್ಗ ಕೇಸ್ ಹ್ಯಾಂಡ್ಲಿಂಗ್ ನಲ್ಲಿ ವಿಫಲವಾಗಿದ್ದಾರೆ. ಹಿಂದೂಗಳ ಮೇಲೆ ದೌರ್ಜನ್ಯ ಎಸಗಿದ ಔರಂಗಜೇಬನ ಫೋಟೊ ಹಾಕಿ ಏನು ಸಂದೇಶ ಕೊಡ್ತೀರಾ? ಎಸ್ಪಿ ಸ್ಥಳಕ್ಕೆ ಬಂದಾಗ ಅವರ ಮೇಲೆ ಕಲ್ಲು ತೂರಾಟ ಮಾಡಿದರು. ಶಿಕ್ಷಣ ಸಚಿವರು, ಗ್ರಾಮೀಣಾಭಿವೃದ್ಧಿ ಘಟನೆ ಬಗ್ಗೆ ಸಚಿವರು ಹೇಳಿಕೆ ಕೊಡುತ್ತಿದ್ದಾರೆ. ಸಿಎಂಗೆ ಸಂಪೂರ್ಣ ಹಿಡಿತ ಕೈತಪ್ಪಿ ಹೋಗಿದೆಯಾ ಎಂದು ಟೀಕಿಸಿದರು.
ಇದನ್ನೂಓದಿ: ನಮ್ಮ ಸರ್ಕಾರ ಕೋಮು ಗಲಭೆಯನ್ನು ತಕ್ಷಣ ಹತ್ತಿಕ್ಕುವ ಕೆಲಸ ಮಾಡುತ್ತದೆ: ಸಿಎಂ ಸಿದ್ದರಾಮಯ್ಯ