ಬೆಂಗಳೂರು:ರಾಜ್ಯದಲ್ಲಿ ಈಗಾಗಲೇ ಸರ್ಕಾರ ಹಂತ-ಹಂತವಾಗಿ ಎಲ್ಲಾ ಶಾಲೆಗಳ ಭೌತಿಕ ತರಗತಿಗಳನ್ನು ಪುನಾರಂಭಿಸಿದೆ. ಇದೀಗ ನ.08 ರಿಂದ ಎಲ್ಲಾ ಎಲ್ಕೆಜಿ, ಯುಕೆಜಿ, ಅಂಗನವಾಡಿ ಕೇಂದ್ರಗಳನ್ನು ಸಹ ಪುನಾರಂಭಿಸಲು ಸರ್ಕಾರ ಅನುಮತಿ ನೀಡಿದ್ದು, ಈ ಸಂಬಂಧ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಸುಮಾರು ಒಂದೂವರೆ ವರ್ಷಕ್ಕೂ ಹೆಚ್ಚು ದಿನಗಳಿಂದ ಅಂಗನವಾಡಿ ಕೇಂದ್ರಗಳು ಬಂದ್ ಆಗಿದ್ದು, ನ.08ರಿಂದ ಕೇಂದ್ರಗಳನ್ನು ಆರಂಭಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಮಾರ್ಗಸೂಚಿಯಲ್ಲಿ ಏನಿದೆ :
- ಕೋವಿಡ್ ಮಾರ್ಗಸೂಚಿಗಳ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಎಲ್ಕೆಜಿ, ಯುಕೆಜಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳನ್ನು ಆರಂಭಿಸಬೇಕು.
- ಮೊದಲ ಹಂತದಲ್ಲಿ ಬೆಳಗ್ಗೆ 10 ರಿಂದ 12 ರವರೆಗೆ ಮಾತ್ರ ನಡೆಸಬೇಕು. ಕೇಂದ್ರದ ಆರಂಭಕ್ಕೂ ಮುನ್ನ ಸ್ಥಳೀಯ ಗ್ರಾಮ ಪಂಚಾಯತ್ ಗಮನಕ್ಕೆ ತರಬೇಕು.
- ಮಕ್ಕಳ ಹಾಜರಾತಿಗೆ ಪೋಷಕರ ಅನುಮತಿ ಪತ್ರ ಪಡೆಯಬೇಕು.
- ಅಂಗನವಾಡಿ ಕಾರ್ಯಕರ್ತರು, ಸಿಬ್ಬಂದಿ ಹಾಗೂ ಕೇಂದ್ರಕ್ಕೆ ಬರುವ ಮಕ್ಕಳ ಪೋಷಕರು ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು.
- ಅಂಗನವಾಡಿಗೆ ಬರುವ ಪ್ರತಿಯೊಬ್ಬರೂ ಮಾಸ್ಕ್ ಧರಿಸಿರಬೇಕು.
- ಯುಕೆಜಿ, ಎಲ್ಕೆಜಿ, ಅಂಗನವಾಡಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು ಹಾಗೂ ಪುಟ್ಟ ಮಕ್ಕಳ ಕೈಗೆ ಸಿಗದಂತೆ ಸಿಬ್ಬಂದಿ ಎಚ್ಚರ ವಹಿಸಬೇಕು.
- ಕೈ ತೊಳೆಯಲು ಸೋಪ್ ವ್ಯವಸ್ಥೆ ಮಾಡಬೇಕು.
- ಮಕ್ಕಳನ್ನು ಕನಿಷ್ಠ ಒಂದು ಮೀಟರ್ ಅಂತರದಲ್ಲಿ ಕೂರಿಸಬೇಕು.
- ಮಕ್ಕಳ ಸಂಖ್ಯೆ ಹೆಚ್ಚಿದ್ದರೆ ತಂಡಗಳನ್ನು ರಚಿಸಿ ಒಂದು ತಂಡ ಒಂದು ದಿನ, ಮತ್ತೊಂದು ತಂಡ ಮರುದಿನ ಬರಲು ಸೂಚಿಸಬೇಕು.
- ಮಕ್ಕಳು, ಸಿಬ್ಬಂದಿ ಪ್ರತಿ 30 ನಿಮಿಷಕ್ಕೊಮ್ಮೆ ಕೈತೊಳೆಯಬೇಕು.
- ಅಂಗನವಾಡಿ ಕೇಂದ್ರಗಳಿಗೆ ಸಾರ್ವಜನಿಕರ ಭೇಟಿ ನಿರ್ಬಂಧಿಸಬೇಕು.
- ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಕೋವಿಡ್ ಲಕ್ಷಣಗಳಿರುವ ಮಕ್ಕಳನ್ನು ಅಂಗನವಾಡಿಗೆ ಕಳುಹಿಸದಂತೆ ಪೋಷಕರಿಗೆ ಸೂಚಿಸಬೇಕು.
ಎಲ್ ಕೆಜಿ, ಯುಕೆಜಿ ವೇಳಾಪಟ್ಟಿ :ಸೋಮವಾರದಿಂದ ಶುಕ್ರವಾರದವರೆಗೆ - ಬೆಳಗ್ಗೆ 9-30 ರಿಂದ ಮಧ್ಯಾಹ್ನ 3-30