ಬೆಂಗಳೂರು: ಕೇವಲ ಶ್ರೀಮಂತರ ಮಕ್ಕಳಿಗಷ್ಟೇ ಸೀಮಿತವಾಗಿದ್ದ ವಿಮಾನ ಚಾಲನಾ ಪರವಾನಗಿ ಭಾಗ್ಯ ಇನ್ನು ಮುಂದೆ ರಾಜ್ಯದ ಕಾರ್ಮಿಕರ ಮಕ್ಕಳಿಗೂ ಸಿಗಲಿದೆ. ಕಾರ್ಮಿಕರ ಮಕ್ಕಳಿಗೆ ಉಚಿತ ಪೈಲಟ್ ತರಬೇತಿ ನೀಡಲು ಮುಂದಾಗಿದೆ.
ವಿಮಾನ ಚಾಲನಾ ಪರವಾನಗಿ ತರಬೇತಿ ಸಾಮಾನ್ಯವಾಗಿ ಶ್ರೀಮಂತರಿಗೆ ಮಾತ್ರ ಸೀಮಿತವಾದ ಕೋರ್ಸ್. ಏಕೆಂದರೆ 18 ತಿಂಗಳ ಅವಧಿಯ ಈ ಕೋರ್ಸ್ಗೆ ಸುಮಾರು 40 ಲಕ್ಷ ರೂಪಾಯಿ ಖರ್ಚಾಗುತ್ತದೆ. ಇಷ್ಟು ದುಬಾರಿ ಶುಲ್ಕ ಭರಿಸಿ, ಬಡ ಮಕ್ಕಳು ಪೈಲಟ್ ತರಬೇತಿ ಪಡೆಯುವುದು ಅಸಾಧ್ಯವಾಗಿದೆ. ಹೀಗಾಗಿ, ಕಾರ್ಮಿಕರ ಮಕ್ಕಳಿಗೂ ಉದ್ಯೋಗ ಖಾತ್ರಿಯ ಈ ಪೈಲೆಟ್ ಕೋರ್ಸ್ ಭಾಗ್ಯ ಕೊಡಲು ಕಾರ್ಮಿಕ ಇಲಾಖೆ ನಿರ್ಧರಿಸಿದೆ.
30 ಕಾರ್ಮಿಕ ಮಕ್ಕಳಿಗೆ ಉಚಿತ ತರಬೇತಿ: ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ 30 ಮಕ್ಕಳಿಗೆ ಉಚಿತವಾಗಿ ವಿಮಾನ ಚಾಲನಾ (ಪೈಲಟ್) ತರಬೇತಿ ನೀಡಲು ಕಾರ್ಮಿಕ ಇಲಾಖೆ ನಿರ್ಧರಿಸಿದೆ. ಕಳೆದ ತಿಂಗಳು ನಡೆದ ಮಂಡಳಿಯ ಸಭೆಯಲ್ಲಿ 2022-23ನೇ ಸಾಲಿನಿಂದ ಈ ಯೋಜನೆ ಆರಂಭಿಸಲು ಅನುಮೋದನೆ ನೀಡಲಾಗಿದೆ.
ಈ ಸಂಬಂಧ ಈಗಾಗಲೇ ಜಕ್ಕೂರು ವಿಮಾನ ನಿಲ್ದಾಣದಲ್ಲಿರುವ ಸರ್ಕಾರಿ ವೈಮಾನಿಕ ಶಾಲೆಯ ನಿರ್ದೇಶಕರಿಗೆ ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಪಿ ಗುರುಪ್ರಸಾದ್ ಅವರು ಪತ್ರ ಬರೆದಿದ್ದಾರೆ. ಆಗಸ್ಟ್ 23ಕ್ಕೆ ಬರೆದ ಪತ್ರದಲ್ಲಿ ವಾಣಿಜ್ಯ ಪೈಲಟ್ ಪರವಾನಗಿಗೆ (ಸಿಪಿಎಲ್) ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸೂಕ್ತ ತರಬೇತಿ ನೀಡಲು ಮಂಡಳಿಯು ಕೈಗೊಳ್ಳಬೇಕಾದ ಕ್ರಮಗಳು ಮತ್ತು ಈ ಯೋಜನೆಗೆ ತಗಲುವ ಅಂದಾಜು ವೆಚ್ಚದ ಪ್ರಸ್ತಾವನೆ ಕಳುಹಿಸಿಕೊಡುವಂತೆ ಕೋರಿದ್ದಾರೆ.