ಬೆಂಗಳೂರು : ಸಂಬಂಧಿಗಳ ಆಸ್ತಿ ವಿಭಾಗ ಮಾಡಿಕೊಳ್ಳಲು ಜಮೀನು ನಕಾಶೆ ಹಾಗೂ ಚಕ್ಕುಬಂದಿ ರಚಿಸಿ ಪಹಣಿಯಲ್ಲಿ ಹೆಸರು ದಾಖಲಿಸುವುದೇ ಪೋಡಿ ಎನ್ನುತ್ತಾರೆ. ಆದರೆ, ಜಮೀನು ಅಳತೆ, ನಕ್ಷೆ ಇಲ್ಲದಿರುವುದು ಮತ್ತು ಒಡೆತನ ಸೇರಿ ಹತ್ತಾರು ಸಮಸ್ಯೆಗಳಿಂದ ಕುಟುಂಬಗಳ ನಡುವೆ ಭೂಮಿ ಹಂಚಿಕೆಯಾಗದೆ ಬಹು ಮಾಲೀಕತ್ವದಲ್ಲಿ ಉಳಿಯುತ್ತಿದೆ. ಇಂತಹ ಬಹುಮಾಲೀಕತ್ವ ಪಹಣಿಗಳನ್ನು ಏಕವ್ಯಕ್ತಿ ಹೆಸರಿನಲ್ಲಿ ಪಹಣಿ ತಯಾರಿಸುವುದೇ ಈ ಪೋಡಿ ಯೋಜನೆ.
ಹದ್ದು ಬಸ್ತು ಎಂದರೇನು? :ಪೋಡಿಯಾದ ಜಮೀನು ಅಥವಾ ಜಾಗ ಬೇರೆಯವರಿಂದ ಒತ್ತುವರಿಯಾಗಿದ್ದರೆ ಅಳತೆ ಮಾಡಿ ನಿಖರ ಗಡಿ ಗುರುತಿಸುವುದರ ಮೂಲಕ ಜಮೀನು ಬಂದೋಬಸ್ತ್ ಮಾಡಿಕೊಳ್ಳುವುದೇ ಹದ್ದುಬಸ್ತು. ಮಾಲೀಕರಿಗೆ ತಮ್ಮ ಜಮೀನು ಮತ್ತು ಜಾಗದ ವಿಸ್ತೀರ್ಣ ಬಗ್ಗೆ ಸಮರ್ಪಕವಾಗಿ ಗೊತ್ತಿರುವುದಿಲ್ಲ.
ಹಾಗಾಗಿ, ಹದ್ದುಬಸ್ತು ಮಾಡಿಕೊಂಡರೆ ಜಮೀನು ಎಲ್ಲಿ ಒತ್ತುವರಿಯಾಗಿದೆ, ಯಾರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಒತ್ತುವರಿ ಜಾಗ ತೆರವುಗೊಳಿಸಿ ನಿಖರ ಗಡಿ ಗುರುತಿಸಲು ಅನುಕೂಲವಾಗುತ್ತದೆ. ಜಮೀನು ಖರೀದಿ ಮಾಡಬೇಕಾದರೆ ಸರ್ವೇ ನಕ್ಷೆ ಮುಖ್ಯವಾಗಿದೆ. ಬಹುದಿನಗಳಿಂದ ತಲೆನೋವಾಗಿದ್ದ ಭೂಮಿಯ ಸರ್ವೇ ನಕ್ಷೆಯನ್ನು ಸಮಸ್ಯೆಯನ್ನು ಬಗೆಹರಿಸಲು ಕಂದಾಯ ಇಲಾಖೆ ಪೋಡಿ ಮುಕ್ತ ಗ್ರಾಮ ಯೋಜನೆ ರೂಪಿಸಿದೆ.
ಅಳತೆ ಮಾಡಲು ಸಿಬ್ಬಂದಿ ಕೊರತೆ ಸಮಸ್ಯೆ ಬಗೆಹರಿಸಲು 3 ಸಾವಿರ ಸರ್ವೇಯರ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸರ್ಕಾರ ಅಧಿಸೂಚನೆ ಹೊರಡಿಸಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸಕಾಲಕ್ಕೆ ಭೂಮಿ ಕ್ರಯ ಮತ್ತು ಸೂಕ್ತ ದಾಖಲೆ ಮಾಡಿಸುವುದು ದೊಡ್ಡ ಸವಾಲಿನ ಕೆಲಸವಾಗಿರುತ್ತದೆ.
ಇಲ್ಲವಾದರೆ ನಕ್ಷೆ ಇಲ್ಲದೆ ಭೂಮಿ ಕ್ರಯ ನೋಂದಣಿ ಮತ್ತು ಖಾತಾ ಆಗುತ್ತಿಲ್ಲ. ಬಹುಮಾಲೀಕತ್ವ ಪಹಣಿಗಳಲ್ಲಿನ ಭೂಮಿ ಖರೀದಿಗೆ ಸಾಕಷ್ಟು ವಿಳಂಬವಾಗುತ್ತಿತ್ತು. ನಿಗದಿತ ಸಮಯದಲ್ಲಿ ಸರ್ವೇ ನಕ್ಷೆ ಸಿಗುವುದರಿಂದ ಯೋಜನೆಗೆ ವೇಗ ಸಿಗಲಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ನಗರ ಪ್ರದೇಶದ ಕ್ಷೇತ್ರ ಹೊರತುಪಡಿಸಿ ಉಳಿದ 174 ವಿಧಾನಸಭಾ ಕ್ಷೇತ್ರಗಳಲ್ಲಿ ಪೋಡಿ ಯೋಜನೆ ಪ್ರಾರಂಭಿಸಲಾಗಿದೆ.
ಪೋಡಿ ಮುಕ್ತ ಗ್ರಾಮ ಯೋಜನೆ ಅಡಿಯಲ್ಲಿ ಆಯ್ದ ಗ್ರಾಮಗಳ ಬಹು ಮಾಲೀಕತ್ವದ ಖಾಸಗಿ/ಹಿಡುವಳಿ ಜಮೀನುಗಳನ್ನು ಅಳತೆಗೆ ಒಳಪಡಿಸಿ ಏಕಮಾಲೀಕತ್ವ ಪರಿವರ್ತಿಸುವ ಉದ್ದೇಶದಿಂದ ಕಂದಾಯ ಇಲಾಖೆ ಈ ಯೋಜನೆಯನ್ನು ಆರಂಭಿಸಿದೆ. ಈಗಾಗಲೇ ಅಳತೆ ಮಾಡಲು 16,723 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ 16,454 ಗ್ರಾಮಗಳ ನಕ್ಷೆ ಪೂರ್ಣಗೊಂಡಿದೆ.
ಅದು ಅಲ್ಲದೆ, 15, 905 ಗ್ರಾಮಗಳಲ್ಲಿ ದುರಸ್ತಿ ಕಾರ್ಯ ಪೂರ್ಣಗೊಂಡಿವೆ. ಈ ಗ್ರಾಮಗಳಲ್ಲಿ 20,33,857 ಏಕವ್ಯಕ್ತಿ ಪಹಣಿಗಳನ್ನು ಸೃಜಿಸುವ ಮೂಲಕ ಪೋಡಿ ಮುಕ್ತ ಗ್ರಾಮ ಮಾಡಲಾಗಿದೆ. ಸಾರ್ವಜನಿಕರು ಸಲ್ಲಿಸುವ 11ಇ, ತತ್ಕಾಲ್ ಪೋಡಿ, ಹದ್ದುಬಸ್ತು ಇತ್ಯಾದಿಗಳ ಅರ್ಜಿಗಳು ಹಾಗೂ ತಾಲೂಕುಗಳಲ್ಲಿ ಬರುವ ಸ್ಥಳೀಯ ತೊಂದರೆಗಳ ಬಗ್ಗೆ ಅಳತೆ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಿ, ಜೊತೆ ಜೊತೆಗೆ ಪೋಡಿ ಮುಕ್ತ ಗ್ರಾಮ ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ಕಂದಾಯ ಇಲಾಖೆ ಮುಂದಾಗಿದೆ.
ಹದ್ದು ಬಸ್ತು ಶುಲ್ಕ ಹೆಚ್ಚಳ :ಕೃಷಿ ಭೂಮಿ ಪೋಡಿ ಶುಲ್ಕ ಹೆಚ್ಚಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಹದ್ದುಬಸ್ತು ಶುಲ್ಕವನ್ನೂ ಹೆಚ್ಚಳ ಮಾಡಿದೆ. ಫೆಬ್ರವರಿ 1ರಿಂದಲೇ ಹೊಸ ಶುಲ್ಕ ಜಾರಿಗೆ ಬಂದಿದೆ. ಆದರೆ, ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ ಈಗಾಗಲೇ ಅಳತೆಗಾಗಿ ಸಲ್ಲಿಕೆಯಾಗಿರುವ ಬಾಕಿ ಅರ್ಜಿಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ಗ್ರಾಮೀಣ ಪ್ರದೇಶದಲ್ಲಿ 2 ಎಕರೆವರೆಗೆ ಪ್ರತಿ ಸರ್ವೇ ನಂಬರ್‌ಗೆ ಈ ಹಿಂದೆ 35 ರೂ.ಇದ್ದ ಶುಲ್ಕವನ್ನು 1,500 ರೂ.ಗೆ. 2 ಎಕರೆಗಿಂತ ಮೇಲ್ಪಟ್ಟ ಭೂಮಿಗೆ ಪ್ರತಿ ಎಕರೆಗೆ 300 ರೂ. ಹೆಚ್ಚುವರಿ ಶುಲ್ಕ ಹಾಗೂ 3 ಸಾವಿರ ರೂ. ಗರಿಷ್ಠ ಶುಲ್ಕ ನಿಗದಿಪಡಿಸಿದೆ. ನಗರ ಪ್ರದೇಶದಲ್ಲಿ 2 ಎಕರೆವರೆಗೆ 2 ಸಾವಿರ ರೂ. ಹಾಗೂ 2 ಎಕರೆಗಿಂತ ಹೆಚ್ಚು ಮೇಲ್ಪಟ್ಟ ಭೂಮಿಗೆ ಪ್ರತಿ ಎಕರೆಗೆ 400 ರೂ. ಹೆಚ್ಚುವರಿ ಶುಲ್ಕವಿದ್ದು, ಗರಿಷ್ಠ ಶುಲ್ಕ 4 ಸಾವಿರ ರೂ. ನಿಗದಿಪಡಿಸಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಪ್ರತಿ ಬಾಜೂದಾರರಿಗೆ 25 ರೂ. ನೋಟಿಸ್ ಶುಲ್ಕ ವಿಧಿಸಿದೆ.
ಕರ್ನಾಟಕ ಭೂ ಕಂದಾಯ ಅಧಿನಿಯಮ, 1964 ಕಲಂ 131(ಬಿ)ಅಡಿ ಸಾರ್ವಜನಿಕರಿಂದ ಅಳತೆಗಾಗಿ ಮೋಜಿಣಿ ವ್ಯವಸ್ಥೆಯಡಿ ಸಲ್ಲಿಕೆಯಾಗುವ ಹದ್ದು ಬಸ್ತು ಅರ್ಜಿಗಳಿಗೆ ಪ್ರತಿ ಸರ್ವೇ ನಂಬರ್ ಗೆ 35 ರೂ. ಇತ್ತು. ಅಲ್ಲದೆ, ಗ್ರಾಮದ 4 ಸರ್ವೆ ಅಥವಾ ಹಿಸ್ಸಾ ನಂಬರ್ ಗೆ 35 ರೂ. ಇತ್ತು. ಹೆಚ್ಚುವರಿ ಸರ್ವೇ ಅಥವಾ ಹಿಸ್ಸಾ ನಂಬರ್ ಗಳಿಗೆ 10 ರೂ. ಇತ್ತು. ಅಂದಾಜು 45 ವರ್ಷಗಳ ಹಿಂದೆ ಈ ಶುಲ್ಕವನ್ನು ನಿಗದಿಪಡಿಸಲಾಗಿತ್ತು. ಇದುವರೆಗೆ ಪರಿಷ್ಕರಣೆ ಆಗಿರಲಿಲ್ಲ. ಆಡಳಿತಾತ್ಮಕ ಮತ್ತು ನಿರ್ವಹಣಾ ವೆಚ್ಚ ಅಧಿಕವಾಗಿರುವ ಹಿನ್ನೆಲೆಯಲ್ಲಿ ಶುಲ್ಕ ಹೆಚ್ಚಿಸಿದೆ.
ಕಂದಾಯ ಇಲಾಖೆ ಸರ್ವೇ ನಕ್ಷೆ ಸೇವೆ ಒದಗಿಸಲು ಮೋಜಣಿ ತಂತ್ರಾಂಶ ಮತ್ತಷ್ಟು ಜನಸ್ನೇಹಿ ಮಾಡಲಾಗಿದೆ. ಪೋಡಿ, 11ಇ ನಕ್ಷೆ ತತ್ಕಾಲ್ ಪೋಡಿ, ಹದ್ದುಬಸ್ತ್ ಸೇರಿದಂತೆ ಮತ್ಯಾವುದೇ ಸರ್ವೇ ಸಂಬಂಧಪಟ್ಟ ಸೇವೆ ಪಡೆಯಲು ಮೋಜಣಿ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಿದ ಮೇಲೆ ಅರ್ಹತೆ ಆಧಾರದ ಮೇಲೆ ಅರ್ಜಿ ವಿಲೇವಾರಿ ಆಗಲಿದೆ. ಸಂಬಂಧಪಟ್ಟ ತಾಲೂಕು ಸರ್ವೇಯರ್‌ಗೆ ವರ್ಗಾವಣೆ ಆಗಿ, ನಂತರ ಸರ್ವೇ ನಡೆಸಲಿದ್ದಾರೆ.
ನಿಗದಿತ ಅವಧಿಯಲ್ಲಿ ಸರ್ವೇ ನಡೆಯದಿದ್ದರೆ ಸಂಬಂಧಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ಹೋಗಲಿದೆ. ಅರ್ಜಿದಾರ ಸಹ ತನ್ನ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲನೆ ನಡೆಸಲು ಅವಕಾಶವಿದೆ. ಸರ್ವೇ ಕಾರ್ಯ ಪೂರ್ಣಗೊಂಡಿದ್ದರೆ ಮೋಜಣಿ ತಂತ್ರಾಂಶದಲ್ಲಿಯೇ ನಕ್ಷೆಯನ್ನು ಪಡೆಯಲು ಅವಕಾಶವಿದೆ. ಡಿಜಿಟಲ್ ಸಹಿ ಸಹ ಸಿಗಲಿದೆ. ಈ ಮೂಲಕ ನಕ್ಷೆಗಾಗಿ ನಾಡ ಕಚೇರಿ, ತಾಲೂಕು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಓದಿ:₹705 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ: ಸಚಿವ ಎಂಟಿಬಿ