ಬೆಂಗಳೂರು: ರಾಜ್ಯದಲ್ಲಿ ಅಂಗಾಂಗ ಕಸಿಗೆ ಸಾವಿರಾರು ಜನ ರೋಗಿಗಳು ಹಲವಾರು ವರ್ಷಗಳಿಂದ ಕಾಯತೊಡಗಿದ್ದು, ಸಾರ್ವಜನಿಕರಲ್ಲಿ ಅಂಗಾಂಗ ದಾನ ವನ್ನು ಪ್ರೇರೇಪಿಸಲು ''ಆರ್ಗನ್ ಡೋನರ್ಸ್ ನೀತಿ'' ಅನುಷ್ಠಾನಕ್ಕೆ ತರಲು ರಾಜ್ಯ ಸರಕಾರ ಸಿದ್ಧತೆ ನಡೆಸಿದ್ದು ಅದಕ್ಕಾಗಿ ರೂಪುರೇಷೆ ಅಂತಿಮಗೊಳಿಸುತ್ತಿದೆ.
ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕಿಡ್ನಿ, ಲಿವರ್, ಹೃದಯ, ಶ್ವಾಸಕೋಶ, ಸಣ್ಣ ಕರಳು, ಕಾರ್ನಿಯಾ ಸೇರಿದಂತೆ ಜೀವ ರಕ್ಷಕ ಅಂಗಾಂಗಳ ಕಸಿಗಾಗಿ ರಾಜ್ಯದಲ್ಲಿ ಸುಮಾರು 8000 ರೋಗಿಗಳು ತಮ್ಮ ಹೆಸರನ್ನು ನೋಂದಣಿ ಮಾಡಿ ಕಾಯತೊಡಗಿದ್ದು ಅಂಗಾಂಗಗಳನ್ನ ದಾನ ಮಾಡುವವರ ಕೊರತೆಯಿಂದಾಗಿ ಸಕಾಲಕ್ಕೆ ಸರಿಯಾಗಿ ಅಂಗಾಂಗಳು ಲಭ್ಯವಿಲ್ಲದೇ ರೋಗಿಗಳು ಹೆಚ್ಚಿನ ರೀತಿಯಲ್ಲಿ ಬಳಲತೊಡಗಿದ್ದಾರೆ. ಅಂಗಾಂಗ ದಾನವನ್ನು ಉತ್ತೇಜಿಸಲು ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರಕಾರ ಪ್ರತ್ಯೇಕವಾದ ಅಂಗಾಂಗ ದಾನ ಪಾಲಿಸಿಯನ್ನ ಜಾರಿಗೆ ತರಲು ಹೆಚ್ಚು ಉತ್ಸುಕವಾಗಿದೆ. ಅದಕ್ಕಾಗಿ ಆರ್ಗನ್ ಡೋನರ್ಸ್ ನೀತಿಯಲ್ಲಿ ಯಾವ ಯಾವ ಅಂಶಗಳನ್ನ ಸೇರಿಸಬೇಕೆನ್ನುವುದರ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಅಂಗಾಂಗ ದಾನದ ನೀತಿ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಅಂಗಾಂಗ ದಾನ ಮಾಡುವ ವ್ಯಕ್ತಿಗಳ ಕುಟುಂಬದವರನ್ನ ಸರಕಾರದಿಂದ ಸತ್ಕರಿಸುವ, ಅಂಗಾಂಗ ದಾನ ಮಾಡಿದ ವ್ಯಕ್ತಿಗಳು ಮೃತಪಟ್ಟಾಗ ಅವರ ಅಂತ್ಯಕ್ರಿಯೆಯನ್ನು ಸರಕಾರಿ ಗೌರವಗಳೊಂದಿಗೆ ನಡೆಸುವ ಸಾಧ್ಯತೆಗಳ ಬಗ್ಗೆ ಗಂಭೀರ ಪರಿಶೀಲನೆಯನ್ನ ಆರೋಗ್ಯ ಇಲಾಖೆ ನಡೆಸತೊಡಗಿದೆ ಎಂದು ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರತ್ಯೇಕ ಕ್ಯೂ ಆರ್ ಕೋಡ್: ರಾಜ್ಯದಲ್ಲಿ ಅಂಗಾಂಗ ದಾನ ಮಾಡುವವರಿಗಾಗಿ ಪ್ರತ್ಯೇಕ ಕ್ಯೂ ಆರ್ ಕೋಡ್ ಅನ್ನು ಸರಕಾರ ರಚಿಸಿದೆ. ಅಂಗಾಂಗ ದಾನಕ್ಕೆ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳುವವರಿಗೆ ಸರಕಾರದಿಂದ ಪ್ರಮಾಣ ಪತ್ರವನ್ನ ನೀಡಲಾಗುತ್ತದೆ. ಅಂಗಾಂಗ ದಾನಕ್ಕೆ ಸಾರ್ವಜನಿಕರನ್ನು ಉತ್ತೇಜಿಸುವ ಉದ್ದೇಶದಿಂದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ ಪ್ರಕಾಶ ಪಾಟೀಲ್ ಅಂಗಾಂಗ ದಾನಕ್ಕೆ ತಮ್ಮ ಹೆಸರನ್ನ ನೋಂದಣಿ ಮಾಡಿದ್ದಾರೆ. ಆ ಮೂಲಕ ಸಾರ್ವಜನಿಕರೂ ಸಹ ಅಂಗಾಂಗ ದಾನಕ್ಕೆ ಉತ್ಸುಕತೆ ತೋರಲಿ ಎನ್ನುವ ಉದ್ದೇಶ ಇದರ ಹಿಂದಿದೆ.