ಕರ್ನಾಟಕ

karnataka

ETV Bharat / state

ಕೊರೊನಾ ಕರ್ಫ್ಯೂ ನಡುವೆಯೂ ಏರುತ್ತಿದೆ ಸೋಂಕಿತರ ಸಂಖ್ಯೆ: ಲಾಕ್​​ಡೌನ್​ ದಾರಿ ಹಿಡಿಯಲಿದ್ಯಾ ಸರ್ಕಾರ..? - ಕರ್ನಾಟಕ ಲಾಕ್​ಡೌನ್

ರಾಜ್ಯಾದ್ಯಂತ ಜಾರಿ ಮಾಡಲಾಗಿದ್ದ ಕೊರೊನಾ ಕರ್ಫ್ಯೂ ಸದ್ಯ ಇನ್ನಷ್ಟು ದಿನ ಮುಂದೂಡುವ ಸಾಧ್ಯತೆಯ ಜೊತೆಗೆ ಲಾಕ್​ಡೌನ್​ ಹೇರುವ ಸಾಧ್ಯತೆಯೂ ದಟ್ಟವಾಗಿದೆ ಎನ್ನಲಾಗುತ್ತಿದೆ.

ಲಾಕ್​​ಡೌನ್​ ದಾರಿ ಹಿಡಿಯಲಿದ್ಯಾ ಸರ್ಕಾರ..?
ಲಾಕ್​​ಡೌನ್​ ದಾರಿ ಹಿಡಿಯಲಿದ್ಯಾ ಸರ್ಕಾರ..?

By

Published : May 6, 2021, 7:35 PM IST

ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಕಠಿಣ ಕೊರೊನಾ ಕರ್ಫ್ಯೂ ಜಾರಿಗೊಳಿಸಲಾಗಿದೆ. ಆದರೆ, 2ನೇ ಅಲೆಯ ಅಬ್ಬರ ಮಾತ್ರ ತಗ್ಗಿಲ್ಲ, ಕೋವಿಡ್ ಸ್ಫೋಟಕ್ಕೆ ಬೆಡ್ ಸಿಕ್ಕದೆ ಸೋಂಕಿತರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಲಾಕ್​ಡೌನ್ ಎನ್ನುವ ಅಂತಿಮ ಅಸ್ತ್ರ ಪ್ರಯೋಗಿಸಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಕೈಮೀರುತ್ತಿರುವ ಕೊರೊನಾ ನಿಯಂತ್ರಣಕ್ಕಾಗಿ ಏಪ್ರಿಲ್‌ 27 ರಿಂದ 14 ದಿನಗಳ ಕಠಿಣ ಕರ್ಫ್ಯೂ ಜಾರಿಗೆ ತರಲಾಗಿದೆ. ಈಗಾಗಲೇ ಕರ್ಫ್ಯೂ ಜಾರಿಯಾಗಿ 10 ದಿನ ಕಳೆದರೂ ಸೋಂಕಿತರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ, ಅಗತ್ಯ ವಸ್ತು ಖರೀದಿಗೆ ಅವಕಾಶ, ಕೆಲ ವಲಯಕ್ಕೆ ನೀಡಿರುವ ವಿನಾಯಿತಿಯ ದುರುಪಯೋಗ ಸ್ಪಷ್ಟವಾಗಿದ್ದು ಕೊರೊನಾ ಕರ್ಫ್ಯೂ ಸಂಪೂರ್ಣ ವಿಫಲವಾಗುವಂತೆ ಮಾಡಿದೆ. ಇದಕ್ಕೆ ಸೋಂಕಿತರ ಅಂಕಿ - ಅಂಶಗಳೇ ಸ್ಪಷ್ಟ ಉದಾಹರಣೆ ಎಂಬಂತಾಗಿದೆ.

ಏಪ್ರಿಲ್ 26 ರಿಂದ ಮೇ 5ರ ವರೆಗೂ ರಾಜ್ಯದಲ್ಲಿ ಒಟ್ಟು 4,01,845 ಹೊಸ ಪ್ರಕರಣ ದೃಢಪಟ್ಟಿದೆ, ಕಠಿಣ ಮಾರ್ಗಸೂಚಿ ಜಾರಿಯಲ್ಲಿದ್ದರೂ ಇಷ್ಟೊಂದು ಪ್ರಮಾಣದ ಸೋಂಕು ಆರೋಗ್ಯ ಇಲಾಖೆಗೆ ಸಂಕಷ್ಟ ತಂದಿದೆ. ಅಲ್ಲದೇ ಸಕ್ರಿಯ ಪ್ರಕರಣಗಳ ಸಂಖ್ಯೆ ಕೊರೊನಾ ಕರ್ಫ್ಯೂಗೂ ಮೊದಲು ಏಪ್ರಿಲ್ 26 ರಂದು 2,81,042 ಇದ್ದರೆ ಮೇ 5ಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ 4,87,288ಕ್ಕೆ ಬಂದು ತಲುಪಿದೆ. ಕೋವಿಡ್ ಸೋಂಕಿತರ ಮರಣ ಪ್ರಮಾಣ ಶೇ.0.67 ರಿಂದ ಶೇ.0.69ಕ್ಕೆ ಹೆಚ್ಚಳವಾಗಿ ಆತಂಕ ಮೂಡಿಸಿದೆ.

ಏಪ್ರಿಲ್​​ 26 ರಿಂದ ಇಂದಿನವರೆಗೆ ಕೋವಿಡ್​​ ಪಾಸಿಟಿವ್​ ವಿವರ

ಏಪ್ರಿಲ್ 26 : 29,744
ಏಪ್ರಿಲ್ 27 : 31,830
ಏಪ್ರಿಲ್ 28 : 39,047
ಏಪ್ರಿಲ್ 29 : 35,024
ಏಪ್ರಿಲ್ 30 : 48,296
ಮೇ 01 : 40,990
ಮೇ 02 : 37,733
ಮೇ 03 : 44,438
ಮೇ 04 : 44,631
ಮೇ 05: 50,112

ಕಳೆದ ನಾಲ್ಕೈದು ದಿನಗಳಲ್ಲಿ ಸತತವಾಗಿ 40 ಸಾವಿರಕ್ಕೂ ಅಧಿಕ ಕೊರೊನಾ ಸೋಂಕಿನ ಪ್ರಕರಣ ದೃಢವಾಗುತ್ತಿದೆ. ರಾಜ್ಯಾದ್ಯಂತ ಕೊರೊನಾ ಕರ್ಫ್ಯೂ ಜಾರಿಯಲ್ಲಿದ್ದರೂ ಸೋಂಕಿನ ಸಂಖ್ಯೆ ಸತತವಾಗಿ ಏರುತ್ತಲೇ ಇದೆ, ಕರ್ಫ್ಯೂಗೂ ಮೊದಲು 30 ಸಾವಿರ ಕೆಳಗಡೆ ಇದ್ದ ಸೋಂಕಿತರ ಸಂಖ್ಯೆ ಇದೀಗ 50 ಸಾವಿರ ದಾಟಿದ್ದು ರಾಜ್ಯ ಸರ್ಕಾರವನ್ನು ತಲ್ಲಣಗೊಳ್ಳುವಂತೆ ಮಾಡಿದೆ.

ಕೊರೊನಾ ಸ್ಫೋಟದಿಂದಾಗಿ ರಾಜ್ಯದಲ್ಲಿ ಸೋಂಕಿತರು ಬೆಡ್​ಗಳಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆಕ್ಸಿಜನ್ ಕೊರತೆ, ರೆಮ್​​ಡಿಸಿವಿರ್ ಕೊರತೆ, ಐಸಿಯು, ವೆಂಟಿಲೇಟರ್ ಸಮಸ್ಯೆ ಹೆಚ್ಚಾಗುತ್ತಿದೆ, ಇದನ್ನೆಲ್ಲ ನಿಯಂತ್ರಿಸಲು ಸರ್ಕಾರ ಇನ್ನಿಲ್ಲದ ಕಸರತ್ತು ಮಾಡುವಂತಾಗಿದೆ. ಆಕ್ಸಿಜನ್, ರೆಮ್​​ಡಿಸಿವಿರ್ ವ್ಯವಸ್ಥೆ ಮಾಡುವಲ್ಲಿ ಸಫಲವಾಗುತ್ತಿದ್ದರೂ ಐಸಿಯು, ವೆಂಟಿಲೇಟರ್ ವ್ಯವಸ್ಥೆ ಹೊಸ ಸವಾಲು ತಂದಿದೆ. ಐಸಿಯು ಬೆಡ್ ಸಿಗದೇ ಇಂದು ಸಿಎಂ ನಿವಾಸಕ್ಕೇ ಸೋಂಕಿತ ವ್ಯಕ್ತಿಯನ್ನು ಕರೆತಂದು ಗೋಳಾಡಿದ ಸನ್ನಿವೇಶ ಸಮಸ್ಯೆಯ‌ ಗಂಭೀರತೆಗೆ ಸಾಕ್ಷಿಯಾಗಿದೆ.

ಬೆಂಗಳೂರಿನಲ್ಲಿ ಐಸಿಯು, ವೆಂಟಿಲೇಟರ್, ಬೆಡ್ ಕೊರತೆ ಸಾಕಷ್ಟು ಪ್ರಮಾಣದಲ್ಲಿ ತಲೆದೂರಿರುವ ಹಿನ್ನೆಲೆ ಸರ್ಕಾರ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣದ ಯೋಜನೆ ಹಾಕಿಕೊಂಡಿದೆ. 15 ದಿನದಲ್ಲಿ 2 ಸಾವಿರ ಐಸಿಯು ಬೆಡ್​​​ಗಳ ಮೇಕ್ ಶಿಫ್ಟ್ ಆಸ್ಪತ್ರೆ ಆರಂಭಿಸಲು ಮುಂದಾಗಿದೆ. ಇದರಲ್ಲಿ 800 ವೆಂಟಿಲೇಟರ್ ವ್ಯವಸ್ಥೆ ಅಳವಡಿಕೆ ಮಾಡಲಾಗುತ್ತಿದೆ. ವಿಕ್ಟೋರಿಯಾ ಆವರಣ, ಬೌರಿಂಗ್ ಆಸ್ಪತ್ರೆ, ನಿಮ್ಹಾನ್ಸ್, ರಾಜೀವ್ ಗಾಂಧಿ ಆಸ್ಪತ್ರೆ ಸೇರಿದಂತೆ ಇತರ ಕಡೆ ಮೇಕ್ ಶಿಫ್ಟ್ ಆಸ್ಪತ್ರೆ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಆದರೆ ಇದೆಲ್ಲಾ ಕೇವಲ ಮಾತಿನಲ್ಲೇ ಇದೆ. 10 ದಿನ ಕಳೆದರೂ ಬೆಡ್ ವ್ಯವಸ್ಥೆ ಮಾತ್ರ ಆಗಿಲ್ಲ.

ಕೊರೊನಾ ಕರ್ಫ್ಯೂ ವಿಫಲ..?

14 ದಿನಗಳ ಕೊರೊನಾ ಕರ್ಫ್ಯೂ ವಿಫಲವಾಗಿದೆ ಎನ್ನುವ ತೀರ್ಮಾನಕ್ಕೆ ಸರ್ಕಾರ ಬಂದಂತ್ತಿದ್ದು, ಕಳೆದ ಬಾರಿಯಂತೆ ಸಂಪೂರ್ಣ ಲಾಕ್​​ಡೌನ್ ಮಾಡುವುದೊಂದೇ ಪರಿಹಾರ ಎನ್ನುವ ಚಿಂತನೆ ಆರಂಭಿಸಿದೆ. ಈಗಾಗಲೇ ಈ ಸಂಬಂಧ ಆರೋಗ್ಯ ಇಲಾಖೆ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಂತರ ಮುಂದೇನು ಎನ್ನುವ ನಿರ್ಧಾರಕ್ಕೆ ಬರಲಾಗುತ್ತದೆ. ಬಹುತೇಕ ಲಾಕ್​​ಡೌನ್ ಖಚಿತ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ABOUT THE AUTHOR

...view details