ಬೆಂಗಳೂರು: ಸರ್ಕಾರ ಲಾಕ್‌ಡೌನ್ ಮಾಡಿದ ನಂತರ ಬಡ ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವಲ್ಲಿ ವಿಫಲವಾಗಿದೆ. ಅವರಿಗೆ ಘೋಷಿಸಿದ್ದ ಪ್ಯಾಕೇಜ್ ಹಣವು ತಿಂಗಳು ಕಳೆದರೂ ತಲುಪಿಲ್ಲ. ಹೀಗಾಗಿ ಸರ್ಕಾರ ಮಾಡದ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ತಿಳಿಸಿದರು.
ಸರ್ಕಾರ ಮಾಡದ ಕೆಲಸವನ್ನು ನಾವು ಮಾಡುತ್ತಿದ್ದೇವೆ: ರಾಮಲಿಂಗಾರೆಡ್ಡಿ
ಲಾಕ್‌ಡೌನ್‌ನಿಂದ ಕಾರ್ಮಿಕರೂ ಸೇರಿದಂತೆ ವಿವಿಧ ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಸರ್ಕಾರ ಘೋಷಿಸಿದ್ದ ಪ್ಯಾಕೇಜ್ ತಿಂಗಳು ಕಳೆದರೂ ತಲುಪಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ದೂರಿದರು.
ಬೆಂಗಳೂರಿನ ಬಿಟಿಎಂ ವಿಧಾನಸಭಾ ಕ್ಷೇತ್ರದ ಜಕ್ಕಸಂದ್ರ ವಾರ್ಡ್ನಲ್ಲಿ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು. ಲಾಕ್‌ಡೌನ್ ನೆಪದಲ್ಲಿ ಸರ್ಕಾರ ಜನರನ್ನು ಮನೆಯಲ್ಲಿ ಕೂರಿಸಿತ್ತೇ ಹೊರತು ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸಲಿಲ್ಲ. ಹೀಗಾಗಿ ನಾವು ಲಾಕ್‌ಡೌನ್ ಸಂದರ್ಭದಲ್ಲಿ ಮಧ್ಯಾಹ್ನದ ಹೊತ್ತು ಆಹಾರ ನೀಡಿದ್ದೆವು. ಇದೀಗ ಆಹಾರದ ಕಿಟ್ ನೀಡುತ್ತಿದ್ದೇವೆ. ಕ್ಷೇತ್ರದಲ್ಲಿ ಸುಮಾರು 40 ಸಾವಿರ ಮಂದಿ ಇದರ ಪ್ರಯೋಜನ ಪಡೆಯಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಹಾಗೂ ಬೆಂಗಳೂರು ದಕ್ಷಿಣ ಪ್ರಧಾನ ಕಾರ್ಯದರ್ಶಿ ವೇದಾ ರೆಡ್ಡಿ ಉಪಸ್ಥಿತರಿದ್ದರು.