ಕರ್ನಾಟಕ

karnataka

By

Published : Aug 19, 2021, 11:07 AM IST

ETV Bharat / state

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ರೂಪಿಸುವಂತೆ ಆದೇಶಿಸಿದ ಸರ್ಕಾರ

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಯೋಜನಾ ವರದಿಯನ್ನು ಎರಡು ತಿಂಗಳ ಒಳಗಾಗಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ಕಾರ್ಯಕಾರಿ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶಿಸಿದೆ.

bommai
bommai

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸಲು 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ'(KASS)ಯನ್ನು ರೂಪಿಸುವ ಬಗ್ಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್​ಗೆ (SAST) ರಾಜ್ಯ ಸರ್ಕಾರ ಆದೇಶ ನೀಡಿದೆ.

ರಾಜ್ಯ ಸರ್ಕಾರವು 2020-21 ಹಾಗೂ 2021-22 ನೇ ಸಾಲಿನ ಆಯವ್ಯಯದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲು ಈ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಘೋಷಿಸಲಾಗಿತ್ತು. ಪ್ರಸ್ತುತ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963 ರ ಅನ್ವಯ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರು ಸರ್ಕಾರಿ ಆಸ್ಪತ್ರೆ ಹಾಗೂ ಸರ್ಕಾರದ ಮಾನ್ಯತೆ ಹೊಂದಿದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ಚಿಕಿತ್ಸೆಯ ವೆಚ್ಚದ ಮರುಪಾವತಿಯನ್ನು ಸಿ.ಜಿ.ಹೆಚ್.ಎಸ್. ದರ ಪಟ್ಟಿಯನ್ವಯ ಆಯಾ ಇಲಾಖೆ ಹಂತದಲ್ಲಿ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ.

ಆದೇಶ ಪ್ರತಿ

ಈ ಯೋಜನೆಯಡಿ ಹೃದ್ರೋಗ, ಕ್ಯಾನ್ಸರ್, ನ್ಯೂರೋ ಸರ್ಜರಿ, ಸುಟ್ಟ ಗಾಯ, ಗಂಭೀರ ಗಾಯಗಳು, ಪೀಡಿಯಾಟ್ರಿಕ್, ನವಜಾತ ಶಿಶುಗಳ ಶಸ್ತ್ರಚಿಕಿತ್ಸೆ ಸೇರಿದಂತೆ 7 ಮಾರಣಾಂತಿಕ ಕಾಯಿಲೆಗಳನ್ನು ಗುರುತಿಸಲಾಗಿದೆ. ಈ ಕಾಯಿಲೆಗಳಿಗೆ ಸರ್ಕಾರಿ ನೌಕರರು, ಕುಟುಂಬ ಸದಸ್ಯರು ಜ್ಯೋತಿ ಸಂಜೀವಿನಿ ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಆದೇಶ ಪ್ರತಿ

ಈ ಹೊಸ ಯೋಜನೆ ಅನುಷ್ಠಾನಗೊಳಿಸುವ ಪೂರ್ವದಲ್ಲಿ ಈ ಯೋಜನೆಯ ಕಾರ್ಯ ಸ್ವರೂಪ, ಯೋಜನಾ ವೆಚ್ಚ, ಆಯವ್ಯಯ, ವೈದ್ಯಕೀಯ ಚಿಕಿತ್ಸಾ ವಿಧಾನ, ಚಿಕಿತ್ಸಾ ದರಗಳು, ಫಲಾನುಭವಿಗಳು, ಖಾಸಗಿ ವೈದ್ಯಕೀಯ ಆಸ್ಪತ್ರೆಗಳು, ಅವುಗಳೊಂದಿಗೆ ಮಾಡಿಕೊಳ್ಳಬೇಕಾದ ಒಡಂಬಡಿಕೆ, ಯೋಜನೆಗೆ ಅಗತ್ಯವಿರುವ ತಂತ್ರಜ್ಞಾನದ ಅಭಿವೃದ್ಧಿ ಮತ್ತಿತರೆ ಅಂಶಗಳ ಬಗ್ಗೆ ವಿಸ್ಕೃತ ಯೋಜನಾ ವರದಿ ಸಿದ್ಧಪಡಿಸುವುದು ಅತ್ಯಗತ್ಯವೆಂದು ಸರ್ಕಾರ ಹೇಳಿದೆ.

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಯೋಜನಾ ವರದಿಯನ್ನು ಎರಡು ತಿಂಗಳ ಒಳಗಾಗಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ಕಾರ್ಯಕಾರಿ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶಿಸಿದೆ.

ABOUT THE AUTHOR

...view details