ಬೆಂಗಳೂರು: ಉಡುಪಿ ಕಾಲೇಜಿನಲ್ಲಿ ಸಮವಸ್ತ್ರ ವಿವಾದ ಹಿನ್ನೆಲೆ ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಜಾರಿ ಸಂಬಂಧ ಪರಿಶೀಲನೆ ನಡೆಸಲು ಉನ್ನತ ಮಟ್ಟದ ಸಮಿತಿ ರಚನೆಗೆ ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿಯು ನಿರ್ದೇಶಕಿಗೆ ಸಮಿತಿ ರಚಿಸುವಂತೆ ನಿರ್ದೇಶನ ನೀಡಿದ್ದಾರೆ. ಉಡುಪಿ ಕಾಲೇಜಿನಲ್ಲಿನ ಹಿಜಾಬ್ ವಿವಾದದಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಪ್ರಧಾನ ಕಾರ್ಯದರ್ಶಿ ಪತ್ರದಲ್ಲಿ ರಾಜ್ಯದ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನಿಗದಿಗೊಳಿಸಿ, ಕಡ್ಡಾಯಗೊಳಿಸಿಲ್ಲ.
ಆದರೆ, ತಮ್ಮ ಆಯ್ಕೆಯ ವಸ್ತ್ರವನ್ನು ಧರಿಸಿ ಬರಲು ಅನುಮತಿ ನೀಡುವಂತೆ ಒತ್ತಾಯಿಸುತ್ತಿರುವ ಉಡುಪಿ ಜಿಲ್ಲೆಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಕಾಲೇಜಿಗೆ ಪ್ರವೇಶ ಪಡೆಯುವ ವೇಳೆ ಕಾಲೇಜು ನಿಗದಿ ಮಾಡಿದ್ದ ಸಮವಸ್ತ್ರ/ವಸ್ತ್ರ ಸಂಹಿತೆಯ ಕುರಿತು ಮಾಹಿತಿ ಇದ್ದು, ಅದನ್ನು ಒಪ್ಪಿಯೇ ಸ್ವ ಇಚ್ಛೆಯಿಂದ ಕಾಲೇಜಿಗೆ ದಾಖಲಾತಿಯನ್ನು ಪಡೆದಿರುತ್ತಾರೆ. ಆದರೆ, ಇಷ್ಟು ದಿನಗಳು ಇಲ್ಲದ ಗೊಂದಲವನ್ನು ಈಗ ಹೊಸದಾಗಿ ಸೃಷ್ಟಿಸುತ್ತಿರುವುದು ಶೈಕ್ಷಣಿಕ ಹಿತದೃಷ್ಟಿಯಿಂದ ಒಳಿತಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.