ಬೆಂಗಳೂರು: ಕೋವಿಡ್-19ಗೆ ಮೀಸಲಾದ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ, ಆರೋಗ್ಯ ಇಲಾಖೆ ಅಧಿಕಾರಿಗಳು, ಪೊಲೀಸರಿಗೆ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧ ನೀಡಬಹುದು ಎಂದು ರಾಜ್ಯ ಸರ್ಕಾರ ಸೂಚಿಸಿದೆ.
ಸರ್ಕಾರ ಹೊರಡಿಸಿರುವ ಸುತ್ತೋಲೆ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಅಧಿಕ ಅಪಾಯವಿರುವವರಿಗೆ ಈ ಔಷಧ ನೀಡಬಹುದು. ಐಸಿಎಂಆರ್ ಶಿಫಾರಸಿನಂತೆ ಪ್ರತಿಬಂಧಕವಾಗಿ ಔಷಧ ನೀಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸೋಂಕಿತರ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿರುವ ಸಿಬ್ಬಂದಿಗೆ ಮೊದಲ ದಿನ 400 ಎಂಜಿ (ಎರಡು ಬಾರಿ), ಮುಂದಿನ 7 ವಾರ ವಾರಕ್ಕೊಂದರಂತೆ 400 ಎಂಜಿ ನೀಡಬೇಕು. ಸೋಂಕಿತರ ಸಂಪರ್ಕ ಹೊಂದಿರುವ ಹಾಗೂ ಮನೆಯಲ್ಲಿರುವ ವ್ಯಕ್ತಿಗಳಿಗೆ ಮೊದಲ ದಿನ 400 ಎಂಜಿ (ಎರಡು ಬಾರಿ), ಮುಂದಿನ 3 ವಾರ ವಾರಕ್ಕೊಂದರಂತೆ 400 ಎಂಜಿ ನೀಡಬೇಕು. ಆಹಾರದೊಡನೆ ಔಷಧ ಸೇವಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಯಾರಿಗೆ ಔಷಧ ನೀಡಬಹುದು?
- ಕೋವಿಡ್ -19ಗೆ ಮೀಸಲಾದ ಆಸ್ಪತ್ರೆಗಳ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ
- ವೈದ್ಯಕೀಯ ತಪಾಸಣೆಗೆಂದು ಮನೆ ಮನೆಗೆ ಭೇಟಿ ನೀಡುವವರು
- ಕಣ್ಗಾವಲು ತಂಡಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿ
- ಸೋಂಕಿತರ ಸಂಪರ್ಕ ಹೊಂದಿದವರು
- ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು
- ಕೊರೊನಾ ಸಂಬಂಧಿ ಕಾರ್ಯದಲ್ಲಿ ತೊಡಗಿರುವ ಆಂಬ್ಯುಲೆನ್ಸ್ ಸಿಬ್ಬಂದಿ
- ಪೊಲೀಸ್ ಇಲಾಖೆ ಸಿಬ್ಬಂದಿ
- ಕೊರೊನಾ ಸಂಬಂಧಿ ಕೆಲಸದಲ್ಲಿ ತೊಡಗಿರುವ ಖಾಸಗಿ ಆಸ್ಪತ್ರೆ ವೈದ್ಯಕೀಯ ವೃಂದ