ಬೆಂಗಳೂರು: ಗುತ್ತಿಗೆದಾರರಿಗೆ ಹಣ ಪಾವತಿ ಮಾಡದಿರುವ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯ ಹೈಕೋರ್ಟ್, ಸರ್ಕಾರಿ ದಾಖಲೆಗಳ ಪ್ರಕಾರವೇ ಈವರೆಗೆ ಇಬ್ಬರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಘಟನೆಗಳು ಮತ್ತೆ ಮುಂದುವರೆಯಬಾರದು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಅಲ್ಲದೇ, ಬಿಲ್ ಪಾವತಿ ಮಾಡುವಲ್ಲಿಯೂ ಹಿರಿತನ ಅನುಸರಿಸಲಾಗುತ್ತಿದೆ, ಸರ್ಕಾರದ ಈ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ ಎಂದು ಹೇಳಿದೆ.
ಕಾಮಗಾರಿಗೆ ಬಾಕಿ ಬಿಲ್ ಬಿಡುಗಡೆ ಮಾಡುವಂತೆ ನ್ಯಾಯಾಲಯದ ಆದೇಶವಿದ್ದರೂ ಜಾರಿ ಮಾಡದ ಬಿಬಿಎಂಪಿ ಕ್ರಮ ಪ್ರಶ್ನಿಸಿ ಮೆಸ್ ನಿಕ್ಷೀಪ್ ಇಫ್ರಾ ಪ್ರೋಜೆಕ್ಟ್ ಗುತ್ತಿಗೆದಾರ ಕಂಪನಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಇಬ್ಬರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ನಿಮ್ಮ ದಾಖಲೆಗಳೇ ಹೇಳುತ್ತಿವೆ. ಇದನ್ನು ನೋಡಿ ಅವರನ್ನು ಮೂಲೆಗುಂಪು ಮಾಡುವುದಕ್ಕೆ ಮುಂದಾಗದಿರಿ. ಈ ಹಿಂದೆ ನಡೆದ ವಿಚಾರಣೆಯಲ್ಲಿ ಬಿಬಿಎಂಪಿ ಹಿರಿತನದ ಆಧಾರದಲ್ಲಿ ಗುತ್ತಿಗೆದಾರರ ಬಾಕಿ ಮೊತ್ತವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿತ್ತು. ಈ ಅಂಶವನ್ನು ಗಮನಿಸಿದ ನ್ಯಾಯಪೀಠ, ಕಲ್ಯಾಣ ರಾಜ್ಯದಲ್ಲಿ ಹಿರಿತನದ ಆಧಾರದಲ್ಲಿ ಬಿಲ್ ಪಾವತಿ ಮಾಡುತ್ತಿರುವ ಬಿಬಿಎಂಪಿಯ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನಮ್ಮಿಂದ ಸಾಧ್ಯವಾಗುತ್ತಿಲ್ಲ. ಸರ್ಕಾರಿ ಸಂಸ್ಥೆಯೊಂದು ಕೆಲವೊಂದು ಕೆಲಸಗಳಿಗೆ ಟೆಂಡರ್ ಕರೆಯುತ್ತದೆ. ಗುತ್ತಿಗೆ ಪಡೆದವರು ಸಂಸ್ಥೆಯ ಎಲ್ಲಾ ಷರತ್ತುಗಳನ್ನು ಅನುಸರಿಸಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಗುತ್ತಿಗೆ ನೀಡಿದ ಸಂಸ್ಥೆಯು ಅದನ್ನು ಒಪ್ಪಿಕೊಂಡಿದೆ. ಆದರೂ, ಬಾಕಿ ಮೊತ್ತ ಪಾವತಿಗೆ ಷರತ್ತುಗಳೇಕೆ ಎಂದು ಪ್ರಶ್ನಿಸಿದೆ.
ಇದಕ್ಕೆ ಬಿಬಿಎಂಪಿ ಪರ ವಕೀಲರು, ಕೆಲವು ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಾವು ಹಿಂದಿನ ಆದೇಶದಲ್ಲಿ ಉಲ್ಲೇಖಿಸಿದಂತೆ ರಾಜ್ಯ ಸರ್ಕಾರವೇ ಇಂತಹ ಪರಿಸ್ಥಿತಿಗಳನ್ನು ತಪ್ಪಿಸಲು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಬೇಕಾಗಿದೆ ಎಂದು ಆದೇಶಿಸಿ ವಿಚಾರಣೆಯನ್ನು ಡಿ. 13ಕ್ಕೆ ಮುಂದೂಡಿತು.