ಕರ್ನಾಟಕ

karnataka

ETV Bharat / state

ಪಿಎಫ್​ಐ ಮೇಲಿನ ರಾಜ್ಯ ಪೊಲೀಸರ ದಾಳಿಯ ಸತ್ಯಾಂಶ ಜನರ ಮುಂದೆ ಇಡಿ: ಹೆಚ್​ಡಿ ಕುಮಾರಸ್ವಾಮಿ ಆಗ್ರಹ

ಪಿಎಫ್ಐ ಮೇಲೆ ನಡೆದಿರುವ ದಾಳಿ ಕುರಿತು ಸರ್ಕಾರ ನೈಜ ಮಾಹಿತಿ ಕೊಡದಿದ್ದರೆ, ಆರೋಪ ಮತ್ತು ಹಗರಣಗಳ ಕುರಿತು ಜನರ ಗಮನ ಬೇರೆಡೆಗೆ ಸೆಳೆಯಲು ದಾಳಿ ನಡೆಸಲಾಗಿದೆ ಎಂದು ಭಾವಿಸಬೇಕಾಗುತ್ತದೆ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಹೇಳಿದರು.

govt-must-give-the-facts-of-state-police-raids-on-pfi-says-ex-cm-hd-kumaraswamy
ಪಿಎಫ್​ಐ ಮೇಲಿನ ರಾಜ್ಯ ಪೊಲೀಸರ ದಾಳಿಯ ಸತ್ಯಾಂಶ ಜನರ ಮುಂದೆ ಇಡಿ: ಹೆಚ್​ಡಿ ಕುಮಾರಸ್ವಾಮಿ ಆಗ್ರಹ

By

Published : Sep 27, 2022, 9:40 PM IST

ಬೆಂಗಳೂರು:ಪಿಎಫ್ಐ ಸಂಘಟನೆ ಮೇಲೆ ರಾಜ್ಯ ಪೊಲೀಸರು ದಾಳಿ ನಡೆಸಿ ಆ ಸಂಘಟನೆಯ ಹಲವರನ್ನು ಬಂಧಿಸಿದ್ದು, ಆ ಬಗ್ಗೆ ರಾಜ್ಯದ ಜನತೆಯ ಮುಂದೆ ವಾಸ್ತವಾಂಶ ಇಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು

ಜೆಡಿಎಸ್​ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮೇಲೆ ಅನೇಕ ಆರೋಪಗಳಿವೆ. ನಾನು ಸ್ವತಃ ಬಿಎಂಎಸ್ ಶಿಕ್ಷಣ ಟ್ರಸ್ಟ್​ನಲ್ಲಿ ನಡೆದಿರುವ ಅಕ್ರಮ ಬಗ್ಗೆ ಸದನದಲ್ಲಿಯೇ ದಾಖಲೆಗಳ ಸಮೇತ ಮಾಹಿತಿ ನೀಡಿದ್ದೆ. ಇದಲ್ಲದೆ, ಅನೇಕ ಹಗರಣ, ಅಕ್ರಮಗಳ ಬಗ್ಗೆ ಜನರು ರೋಸಿ ಹೋಗಿದ್ದಾರೆ. ಒಂದು ವೇಳೆ ಪಿಎಫ್ಐ ಮೇಲೆ ನಡೆದಿರುವ ದಾಳಿ ಕುರಿತು ನೈಜ ಮಾಹಿತಿ ಕೊಡದಿದ್ದರೆ, ಆರೋಪ ಮತ್ತು ಹಗರಣಗಳ ಕುರಿತು ಜನರ ಗಮನ ಬೇರೆಡೆಗೆ ಸೆಳೆಯಲು ಈ ದಾಳಿ ನಡೆಸಲಾಗಿದೆ ಎಂದು ಭಾವಿಸಬೇಕಾಗುತ್ತದೆ ಎಂದರು.

ಎರಡು ದಿನಗಳಿಂದ ಕರ್ನಾಟಕವೂ ಸೇರಿ ರಾಷ್ಟ್ರಮಟ್ಟದಲ್ಲಿ ಪಿಎಫ್ಐ ಮೇಲೆ ಎನ್ಐಎನಿಂದ ದಾಳಿ ಆಗಿತ್ತು. ಆ ದಾಳಿ ಸಮಯದಲ್ಲಿ ಪಿಎಫ್ಐ ಸಂಘಟನೆಗಳ ವ್ಯಕ್ತಿಗಳ ಬಂಧನವೂ ಆಗಿತ್ತು. ಮತ್ತೆ ಕಳೆದ ರಾತ್ರಿ ರಾಜ್ಯದ ನಾನಾ ಭಾಗದಲ್ಲಿ ಮಧ್ಯರಾತ್ರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ರಾಜ್ಯ ಪೊಲೀಸರು ನಡೆಸಿದ ದಾಳಿಯಲ್ಲಿ ಸಂಘಟನೆಯ ಕಾರ್ಯಕರ್ತರು, ಜಿಲ್ಲಾಧ್ಯಕ್ಷರ‌ ಬಂಧನವಾಗಿದೆ.

ಮಧ್ಯರಾತ್ರಿಯಲ್ಲಿ ಕಾರ್ಯಾಚರಣೆ ಎನ್ನುವುದು ಸರ್ಕಾರದ ಆದೇಶವೋ ಅಥವಾ ಪೊಲೀಸರ ಮಾಹಿತಿ ಆಧಾರದ ದಾಳಿಯ ಆಗಿದೆಯೋ ಗೊತ್ತಿಲ್ಲ. ಆದರೆ, ಕಾರ್ಯಾಚರಣೆ ಬಗ್ಗೆ ನಾಡಿನ ಜನರ ಮುಂದೆ ನಿಜವಾದ ವಾಸ್ತವವಾದ ಅಂಶ ಸರ್ಕಾರ ಇಡಬೇಕೆಂದು ಆಗ್ರಹಿಸಿದರು.

ಏಕಾಏಕಿ ಈ ಬೆಳವಣಿಗೆಯಿಂದ ರಾಜ್ಯದಲ್ಲಿ ಯಾವುದೇ ಸಮಾಜದ ಮೇಲೆ ಆತಂಕ, ಭಯ ಸೃಷ್ಟಿ ಆಗಬಾರದು. ಇತ್ತೀಚೆಗೆ ಅನೇಕ ಸಂಘಟನೆಗಳು ತಮ್ಮ ಅಜೆಂಡಾ ಪೂರೈಸಲು ಕೆಲಸ ಮಾಡುತ್ತಿವೆ. ಅವುಗಳಿಗೆ ಅರ್ಥಿಕ ಶಕ್ತಿ ಹೇಗೆ ಬರ್ತಿದೆ?. ಕೆಲ ಘಟನೆಗಳ ಹಿಂದೆ ಯಾವ ಸಂಘಟನೆಗಳಿವೆ ಎನ್ನುವುದನ್ನು ತನಿಖೆಯಿಂದ ಹೊರಬರಬೇಕೆಂದೂ ಹೇಳಿದರು.

ಪೇ‌ಸಿಎಂ ಅಭಿಯಾನ ಡೈವರ್ಟ್ ಶಂಕೆ ಬರುತ್ತದೆ: ಕಳೆದ ರಾತ್ರಿ ಏಕಾಏಕಿ ದಾಳಿ ಆಗಿರೋದು‌ ಸಣ್ಣ ಪುಟ್ಟ ಕಾರ್ಯಕರ್ತರಿಗೆ ಆತಂಕ ಉಂಟು ಮಾಡಿದೆ ಎನ್ನುವುದು ನಿಜ. ಈ ದಾಳಿಯ ವೇಳೆ ಏನು ಸಿಕ್ಕಿದೆ?. ಯಾವ ದಾಖಲೆ ಇದೆ ಎಂಬುದನ್ನು ಜನರ ಮುಂದೆ ಇಡಬೇಕು. ದಾಳಿಯ ಬಗ್ಗೆ ಸತ್ಯ ಹೇಳದೇ ಹೋದರೆ ಕಾಂಗ್ರೆಸ್​ನ ಪೇ‌ಸಿಎಂ ಅಭಿಯಾನ ಡೈವರ್ಟ್ ಮಾಡೋಕೆ ಸರ್ಕಾರ ಹೀಗೆ ಮಾಡಿದೆ ಎಂಬ ಅನುಮಾನ ಜನರಿಗೆ ಬರುತ್ತದೆ ಎಂದು ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿದರು.

ನಿಜವಾಗಿಯೂ ಸಮಾಜಘಾತುಕ ಶಕ್ತಿ ಬಗ್ಗೆ ಮಾಹಿತಿ ಇದ್ದರೆ ಜನರ ಮುಂದೆ ಇಡಬೇಕು. ನೆಪಗಳನ್ನು ಹೇಳಿ ಸರ್ಕಾರ ನುಣುಚಿಕೊಳ್ಳಬಾರದು. ಮಧ್ಯರಾತ್ರಿ ಕಾರ್ಯಾಚರಣೆಯಲ್ಲಿ ಯಾರು ಯಾರನ್ನು ಬಂಧನ ಮಾಡಿದ್ದಾರೆ. ಅವರ ಸಮಾಜಘಾತುಕ ಕೆಲಸ ಏನು ಎಂಬುದನ್ನು ಅಂತಾ ಸರ್ಕಾರ ಜನರ ಮುಂದೆ ಇಡದೇ ಹೋದರೆ, ಸರ್ಕಾರವೇ ಅನುಮಾನಗಳಿಗೆ ಎಡೆ ಮಾಡಿಕೊಟ್ಟಂತೆ ಆಗುತ್ತದೆ ಎಂದು ಎಚ್ಚರಿಸಿದರು.

ಇದನ್ನೂ ಓದಿ:ನಿಷೇಧಿತ ಸಂಘಟನೆ ಸಿಮಿ ಹುಟ್ಟಿದ್ದು ವಿಜಯಪುರದಲ್ಲಿ, ಅದರ ಪ್ರತಿರೂಪ ಪಿಎಫ್ಐ, ಎಸ್​ಡಿಪಿಐ: ಯತ್ನಾಳ್

ABOUT THE AUTHOR

...view details