ಬೆಂಗಳೂರು: ಅತಿ ಸುರಕ್ಷಿತ ನೋಂದಣಿ ಫಲಕ(ಎಚ್‌ಎಸ್‌ಆರ್‌ಪಿ) ಜಾರಿಗೆ ಸಂಬಂಧಿಸಿದಂತೆ ತಯಾರಕರಿಗೆ ಅನುಮತಿ ನೀಡುವ ಕುರಿತು ಅರ್ಜಿದಾರರು ಸೇರಿದಂತೆ ಸಂಬಂಧ ಪಟ್ಟ ಪಾಲುದಾರರೊಂದಿಗೆ ಮುಂದಿನವಾರ ಸಭೆ ನಡೆಸಿ, ಹೊರಬಂದು ನಿರ್ಧಾರವನ್ನು ನ್ಯಾಯಪೀಠಕ್ಕೆ ತಿಳಿಸುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ. ಎಚ್‌ಎಸ್‌ಆರ್‌ಪಿ ನಂಬರ್ ಫಲಕ ತಯಾರಕರ ಒಕ್ಕೂಟ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ನ್ಯಾಯಪೀಠ ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿಕ್ರಮ ಹುಯಿಲಗೋಳ, ನವೆಂಬರ್ ತಿಂಗಳಲ್ಲಿ ಸಭೆ ನಿದಿಯಾಗಿತ್ತು. ಆದರೆ, ಕಾರಣಾಂತರಗಳಿಂದ ಎಲ್ಲ ಪಾಲುದಾರರನ್ನು ಸಭೆಗೆ ಆಹ್ವಾನಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಆದ್ದರಿಂದ ಮುಂದಿನ ವಾರ ಸಭೆ ಹಮ್ಮಿಕೊಳ್ಳುವುದಾಗಿ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ಎಚ್‌ಎಸ್‌ಆರ್‌ಪಿ ತಯಾರಕರ ಸಂಘದ ಪರ ವಕೀಲರು, ಸರ್ಕಾರ ನಡೆಸುವ ಸಭೆಗೆ ಸಂಬಂಧಿಸಿದಂತೆ ಎಲ್ಲ ಪಾಲುದಾರರನ್ನು ಸೇರಿಸಿ ಸಭೆ ನಡೆಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಆದರೂ, ಸಭೆಗೆ ಯಾವುದೇ ಪಾಲುದಾರರನ್ನು ಸರ್ಕಾರ ಆಹ್ವಾನಿಸಿಲ್ಲ ಎಂದು ವಿವರಿಸಿದರು.
ಪ್ರಕರಣದ ಹಿನ್ನೆಲೆ:2019ರ ಏಪ್ರಿಲ್ 1ಕ್ಕಿಂತ ಮುಂಚಿತವಾಗಿ ನೋಂದಣಿಯಾಗಿರುವ ವಾಹನಗಳು 90 ದಿನಗಳ ಒಳಗಾಗಿ ಹೊಸ ಪರವಾನಗಿ ನೋಂದಣಿ ಫಲಕ ಹೊಂದಬೇಕು ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಿಡಿಸಿತ್ತು. ಈ ಅಧಿಸೂಚನೆ ಪ್ರಶ್ನಿಸಿದ್ದ ಭಾರತೀಯ ಅತಿ ಸುರಕ್ಷಿತ ನಂಬರ್ ಫಲಕಗಳ ಉತ್ಪಾದಕರ ಒಕ್ಕೂಟ ಹೈಕೋರ್ಟ್ ಮೆಟ್ಟಿಲೇರಿ, ಕೆಲ ಕಂಪನಿಗಳಿಗೆ ಮಾತ್ರ ನಂಬರ್ ಪ್ಲೇಟ್ ಉತ್ಪಾದನೆಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಇತರರಿಗೆ ಅವಕಾಶ ನೀಡಿಲ್ಲ. ಹೀಗಾಗಿ ಅಧಿಸೂಚನೆಗೆ ತಡೆ ನೀಡಬೇಕು ಎಂದು ಕೋರಿದ್ದರು.