ಕರ್ನಾಟಕ

karnataka

ETV Bharat / state

ಪ್ರತಿ 3ನೇ ಶನಿವಾರ ನಿಮ್ಮ ಹಳ್ಳಿಗೆ ಬರಲಿದ್ದಾರೆ ಡಿಸಿಗಳು: ಗ್ರಾಮ ವಾಸ್ತವ್ಯದ ವೇಳೆ ಅಧಿಕಾರಿಗಳು ಮಾಡಿಕೊಡುವ ಕೆಲಸಗಳೇನು? - ಸರ್ಕಾರದ ನೂತನ ಕಾರ್ಯಕ್ರಮ

ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಹಳ್ಳಿಗೆ ನಡೆಯಿರಿ ಎಂಬ ಹೊಸ ಕಾರ್ಯಕ್ರಮ ಜಾರಿಗೆ ತರಲು ನಿರ್ಧರಿಸಿದೆ. ಇದರ ಪ್ರಕಾರ ಡಿಸಿಗಳು ಪ್ರತಿ ತಿಂಗಳ ಮೂರನೇ ಶನಿವಾರ ಹಳ್ಳಿಗಳಿಗೆ ತೆರಳಬೇಕು. ಈ ವೇಳೆ, ಅಲ್ಲಿನ ಗ್ರಾಮಸ್ಥರ ಸಂಕಷ್ಟಗಳನ್ನು ನೇರವಾಗಿ ಕೇಳಿ ಪರಿಹಾರ ನೀಡುವ ಜವಾಬ್ದಾರಿಯನ್ನು ವಹಿಸಲಾಗುತ್ತಿದೆ.

ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ
Govt made DC village tour program

By

Published : Jan 21, 2021, 6:29 AM IST

ಬೆಂಗಳೂರು:ಕಂದಾಯ ಇಲಾಖೆಯನ್ನು ಜನಸ್ನೇಹಿಯಾಗಿ ಪರಿವರ್ತಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೆಯಿರಿ ಎಂಬ ಹೊಸ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಜಾರಿಗೆ ತರಲು ನಿರ್ಧರಿಸಿದೆ. ಅಧಿಕಾರಿಗಳ ಗ್ರಾಮ ವಾಸ್ತವ್ಯದ ಕಾರ್ಯಕ್ರಮ ಹೇಗಿರಲಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಳೆದ ವರ್ಷದ ಆರಂಂಭದಲ್ಲಿ ಘೋಷಿಸಲಾಗಿದ್ದ ಈ ವಿನೂತನ ಕಾರ್ಯಕ್ರಮ ಇದೀಗ ಕಾರ್ಯರೂಪಕ್ಕೆ ಬರುತ್ತಿದೆ. ಪ್ರತಿ ತಿಂಗಳ 3ನೇ ಶನಿವಾರ ಜಿಲ್ಲಾಧಿಕಾರಿಗಳಿಗೆ ಹಳ್ಳಿ ವಾಸ್ತವ್ಯ ಹೂಡಿ ಅಲ್ಲಿನ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಗ್ರಾಮಸ್ಥರ ಸಂಕಷ್ಟಗಳನ್ನು ನೇರವಾಗಿ ಕೇಳಿ ಪರಿಹಾರ ನೀಡುವ ಜವಾಬ್ದಾರಿ ವಹಿಸಲಾಗುತ್ತಿದೆ. ಡಿಸಿಗಳ ಜೊತೆ ಭೂ ದಾಖಲೆಗಳ ಉಪ ನಿರ್ದೇಶಕರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಉಪವಿಭಾಗದ ಸಹಾಯಕ ಆಯುಕ್ತರು, ತಹಶೀಲ್ದಾರ್‌, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರು ಹಳ್ಳಿಗಳಿಗೆ ತೆರಳಿ, ಗ್ರಾಮ ವಾಸ್ತವ್ಯ ಮಾಡಲು ಸೂಚಿಸಲಾಗಿದೆ.

ಈ ಸಂಬಂಧ ಕಂದಾಯ ಇಲಾಖೆ ಎಲ್ಲ ಡಿಸಿಗಳಿಗೆ ಸುತ್ತೋಲೆ ಹೊರಡಿಸಿದೆ. ಜಿಲ್ಲಾಧಿಕಾರಿಗಳು ಯಾವ ತಾಲೂಕಿಗೆ ಭೇಟಿ ನೀಡುತ್ತಾರೋ ಆ ತಾಲೂಕಿನ ತಹಶೀಲ್ದಾರರನ್ನು ಹೊರತುಪಡಿಸಿ ಉಳಿದ ತಾಲೂಕು ತಹಶೀಲ್ದಾರ್​​ಗಳು ತಮ್ಮ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಪ್ರತಿ ತಿಂಗಳ ಮೂರನೇ ಶನಿವಾರ ಭೇಟಿ ನೀಡಿ ಗ್ರಾಮ ವಾಸ್ತವ್ಯ ಹೂಡಬೇಕಾಗಿದೆ. ಅಧಿಕಾರಿಗಳ ಭೇಟಿ ಸಮಯ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಇರಲಿದೆ‌.

ಓದಿ: ಕೇರಳದ ಮನೆಯೊಂದರಲ್ಲಿದೆ 'ಬೊನ್ಸಾಯ್ ಸಾಮ್ರಾಜ್ಯ'..!

ಗ್ರಾಮಗಳಿಗೆ ಭೇಟಿ ನೀಡುವ ಒಂದು ವಾರದ ಮೊದಲೇ ಕಂದಾಯ ಅಧಿಕಾರಿಗಳು, ಗ್ರಾಮ ಭೇಟಿ ಸಂದರ್ಭದಲ್ಲಿ ನೀಡಲಾಗಿರುವ ಕಾರ್ಯಸೂಚಿಗಳ ಅನ್ವಯ ಫಲಾನುಭವಿಗಳ ಅರ್ಜಿಗಳನ್ನು ಸಂಗ್ರಹಿಸಿ, ಅರ್ಜಿಗಳ ಮೇಲೆ ಯಾರ ಹಂತದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಮೊದಲೇ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಲೇವಾರಿಯಾಗಿರುವ ಬಗ್ಗೆ ಸಂಬಂಧಪಟ್ಟ ಫಲಾನುಭವಿಗಳಿಗೆ ತಿಳಿಸಬೇಕು. ಅರ್ಜಿಗಳ ಮೇಲೆ ಬೇರೆ ಬೇರೆ ಹಂತದಲ್ಲಿ ವಿಚಾರಣೆಯ ಅವಶ್ಯಕತೆ ಇದ್ದಲ್ಲಿ ಅದನ್ನು ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಗ್ರಾಮ ವಾಸ್ತವ್ಯದಲ್ಲಿ ಮಾಡಿಕೊಡುವ ಕೆಲಸಗಳೇನು?:

  • ಭೇಟಿ ನೀಡಿದ ಗ್ರಾಮದಲ್ಲಿನ ಎಲ್ಲ ಪಹಣಿಯಲ್ಲಿನ ಲೋಪದೋಷಗಳು, ಪಹಣಿ ಕಾಲಂ 3 ಮತ್ತು ಆಕಾರ್ ಬಂದ್ ತಾಳೆಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
  • ಎಲ್ಲ ಪಹಣಿಗಳಲ್ಲಿಯೂ ಕೂಡ ಕಾಲಂ 3 ಮತ್ತು ಕಾಲಂ 9 ತಾಳೆ ಹೊಂದುವಂತೆ ಸೂಕ್ತ ಆದೇಶಗಳನ್ನು ಹೊರಡಿಸಬೇಕು.
  • ಗ್ರಾಮದಲ್ಲಿ ಪೌತಿ ಹೊಂದಿದ ಖಾತೆದಾರರ ಹೆಸರನ್ನು ಪಹಣಿಯ ಕಾಲಂ 9 ರಿಂದ ತೆಗೆದು, ನೈಜ ವಾರಸುದಾರರ ಹೆಸರಿಗೆ ಖಾತೆ ಮಾಡಲು ಕ್ರಮ ವಹಿಸಬೇಕು.
  • ಗ್ರಾಮದ ಎಲ್ಲಾ ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಪರಿಶೀಲಿಸಿ, ಬಿಟ್ಟು ಹೋದಂತಹ ಅರ್ಹ ಪ್ರಕರಣಗಳಿಗೆ ಸ್ಥಳದಲ್ಲಿಯೇ ಆದೇಶ ನೀಡಬೇಕು.
  • ಗ್ರಾಮದಲ್ಲಿ ಸ್ಮಶಾನ ಲಭ್ಯತೆಯ ಬಗ್ಗೆ ಪರಿಶೀಲಿಸಬೇಕು. ಹಾಗೂ ಸ್ಮಶಾನವಿಲ್ಲದಿದ್ದಲ್ಲಿ ಸರ್ಕಾರದ ಆದೇಶದಂತೆ ಕ್ರಮವಹಿಸಬೇಕು.
  • ಸರ್ಕಾರಿ ಜಮೀನು ಅಕ್ರಮ ಒತ್ತುವರಿ ತೆರವುಗೊಳಿಸಬೇಕು.
  • ಬರ/ಪ್ರವಾಹ ಇದ್ದಲ್ಲಿ ಪರಿಹಾರ ಒದಗಿಸಲು ಕ್ರಮ ವಹಿಸಬೇಕು. ಪ್ರವಾಹದ ಹಾನಿ ತಡೆಗಟ್ಟಲು ಸಲಹೆ ನೀಡಬೇಕು. ಅತಿವೃಷ್ಟಿ/ಅನಾವೃಷ್ಟಿ ಎದುರಿಸಲು ಮುಂಜಾಗ್ರತಾ ಕ್ರಮ ವಹಿಸಬೇಕು- ಹದ್ದುಬಸ್ತು, ಪೋಡಿ, ಪೋಡಿ ಮುಕ್ತಗ್ರಾಮ, ದರಕಾಸ್ತು ಪೋಡಿ ಮಾಡಬೇಕು. ಕಂದಾಯ ಗ್ರಾಮಗಳ ರಚನೆ
  • ಗ್ರಾಮದಲ್ಲಿ ಎಸ್‌ಸಿ/ಎಸ್ಟಿ/ಬಿಸಿಎಂ ವಸತಿ ನಿಲಯಗಳಿದ್ದಲ್ಲಿ ಭೇಟಿ ನೀಡಿ ಸುಸ್ಥಿತಿಯಲ್ಲಿರುವ ಬಗ್ಗೆ ಕ್ರಮವಹಿಸಬೇಕು.
  • ಶಾಲೆ ಹಾಗೂ ಅಂಗನವಾಡಿಗಳಿಗೆ ಭೇಟಿ ನೀಡಿ ಆಹಾರ, ಕಲಿಕಾ ಕ್ರಮ ಇತ್ಯಾದಿ ಬಗ್ಗೆ ಪರಿಶೀಲಿಸಬೇಕು.
  • ಎಲ್ಲ ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ದೊರೆತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿದ್ದಲ್ಲಿ ಅವರ ಮೇಲೆ ನಿಯಮಾನುಸಾರ ಕ್ರಮವಹಿಸಬೇಕು.
  • ಗ್ರಾಮಗಳಿಗೆ ಭೇಟಿ ನೀಡಿದ ಸಮಯದಲ್ಲಿ ಗುಡಿಸಲುಗಳು ಇರುವ ವಾಸದ ಮನೆಗಳನ್ನು ಪತ್ತೆಹಚ್ಚಿ ಲಭ್ಯವಿರುವ ಸರ್ಕಾರದ ವಿವಿಧ ಯೋಜನೆಗಳಡಿ ಮನೆ ಕಟ್ಟಲು ಅನುದಾನ ನೀಡುವಂತೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗೆ ನಿರ್ದೇಶನವನ್ನು ನೀಡಿ, ಆ ಗ್ರಾಮದ ಗುಡಿಸಲು ರಹಿತ ವಾಸದ ಮನೆ ನಿರ್ಮಾಣ ಮಾಡಲು ಕ್ರಮ ವಹಿಸಬೇಕು.

ABOUT THE AUTHOR

...view details