ಬೆಂಗಳೂರು: ಜಮೀನು, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಾನೂನು, ನಿಯಮಗಳಿವೆ. ಆದರೆ, ಆಸ್ತಿ ವಿಷಯದಲ್ಲಿ ಹಲವರಿಗೆ ಮಾಹಿತಿ ಕೊರತೆ ಇರುತ್ತದೆ. ಹಾಗಾಗಿ, ರೈತರು ಸೇರಿದಂತೆ ಜನರಿಗೆ ಅನುಕೂಲವಾಗಲೆಂದು ರಾಜ್ಯದಲ್ಲಿ ದರಖಾಸ್ತು ಪೋಡಿ ಅಭಿಯಾನಕ್ಕೆ ಸರ್ಕಾರ ಚಾಲನೆ ನೀಡಿದೆ. ಸರ್ಕಾರಿ ಭೂಮಿ ಮಂಜೂರಾತಿ ಪಡೆದುಕೊಂಡವರ ಪೋಡಿ, ಒತ್ತುವರಿ ಸೇರಿದಂತೆ ಇತರ ಸಮಸ್ಯೆಗಳಿಗೆ ಪರಿಹಾರ ನೀಡಲು ಕಂದಾಯ ಇಲಾಖೆ ಪೋಡಿ ಆಂದೋಲನ ಕಾರ್ಯಕ್ರಮ ಕೈಗೊಂಡಿದೆ.
ಏನಿದು ದರಖಾಸ್ತು ಪೋಡಿ ಕಾನೂನು?: ಕಾನೂನಿನ ನಿಯಮದ ಪ್ರಕಾರ, ರೈತರ ಜಮೀನು ಅವರ ತಂದೆ ಅಥವಾ ತಾತನ ಹೆಸರಿನಲ್ಲಿ ಇದ್ದರೆ, ಅವರು ಅರ್ಜಿ ಸಲ್ಲಿಸಿದಲ್ಲಿ ಅಥವಾ ಅರ್ಜಿ ಸಲ್ಲಿಸದೇ ಇದ್ದರೂ ಕೂಡ ಸರ್ಕಾರವೇ ಅವರ ಆಸ್ತಿ ಸರ್ವೇ ನಡೆಸಿ, ಆಸ್ತಿಯನ್ನು ಮಕ್ಕಳ ಹೆಸರಿಗೆ ವರ್ಗಾವಣೆ ಮಾಡಿಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ವೇಳೆ ಹಣಕಾಸಿನ ತೊಂದರೆ, ಕುಟುಂಬ ಸಮಸ್ಯೆ ಅಥವಾ ಬೇರೆ ಯಾವುದೇ ಕಾರಣದಿಂದ ಆಸ್ತಿಯನ್ನು ತಮ್ಮ ಹೆಸರಿಗೆ ಬದಲಾಯಿಸಿಕೊಳ್ಳಲು ಸಾಧ್ಯವಾಗಿಲ್ಲದಿದ್ದರೆ ಅಂತಹವರಿಗೆ ಈಗ ಸರ್ಕಾರವೇ ಸಹಾಯ ಮಾಡಲಿದೆ.
ಇಂತಹ ರೈತರಿಗೆ ಸಹಾಯ ಮಾಡಲು ದರಖಾಸ್ತು ಪೋಡಿ ಆಂದೋಲನವನ್ನು ಸರ್ಕಾರ ಆರಂಭಿಸಿದೆ. ನ್ಯಾಯಾಲಯಗಳಲ್ಲಿ ಇಂತಹ ಕೇಸ್ಗಳು ಹೆಚ್ಚಾಗುತ್ತಿರುವ ಕಾರಣದಿಂದ ಸರ್ಕಾರ ದರಖಾಸ್ತು ಪೋಡಿಗೆ ಮುಂದಾಗಿದೆ. ಇದರಿಂದ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಮತ್ತಿತರ ಕಚೇರಿಗಳಿಗೆ ರೈತರು ಅಲೆದಾಡುವುದು ತಪ್ಪಿದಂತಾಗುತ್ತದೆ. ಈ ಆಂದೋಲನದ ಮೂಲಕ ಅರ್ಜಿ ಸಲ್ಲಿಸಿದಿದ್ದರೂ ರೈತರ ಜಮೀನಿನಲ್ಲಿ ಸರ್ವೇ ನಡೆಸಿ ಕಂದಾಯ ಇಲಾಖೆ ಪೋಡಿ ಮಾಡಿಕೊಡಲಿದೆ.
ಸರ್ಕಾರಿ ಭೂಮಿಯನ್ನು ದರಖಾಸ್ತು ಕಮಿಟಿ ಮೂಲಕ ಪಡೆದುಕೊಂಡವರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಸರ್ಕಾರದಿಂದ ಭೂ ಮಂಜೂರಾತಿ ಆಗಿರುವ ಪೋಡಿ ಪ್ರಕರಣಗಳ ಬಾಕಿ ವಿಲೇವಾರಿಗಾಗಿ ದರಖಾಸ್ತು ಪೋಡಿ ಆಂದೋಲನ ಕೈಗೊಂಡಿದ್ದು, ರೋವರ್, ಆರ್ಥೋ ರೆಕ್ಟಿಫೈಡ್ ರೆಡಾರ್ ಇಮೇಜ್ ಆಧಾರಿತ ಸರ್ವೇ ಮೂಲಕ ಬಾಕಿ ಇರುವ ಪೋಡಿ ಪ್ರಕರಣಗಳ ಸರ್ವೇ ನಡೆಸಲಾಗುತ್ತಿದೆ. ಎಲ್ಲಾ ಅರ್ಹರಿಗೆ ಮಂಜೂರಾದ ಭೂಮಿಯ ಬಗ್ಗೆ ಮಾಹಿತಿ ಸಿಗಲಿದೆ. ವಿಸ್ತೀರ್ಣದಲ್ಲಿ ವ್ಯತ್ಯಾಸವಾಗುವುದಿಲ್ಲ. ಬದಲಾವಣೆ ಅವಕಾಶ ಇರುವುದಿಲ್ಲ. ಕಚೇರಿಯಲ್ಲಿ ಪೋಡಿ ಸಿದ್ಧಪಡಿಸುವ ಕಾರ್ಯ ಸರಾಗವಾಗಲಿದೆ.