ಬೆಂಗಳೂರು:ಅಪರಾಧ ದಂಡ ಸಂಹಿತೆ ಸೆಕ್ಷನ್ 372ರಡಿ ಸರ್ಕಾರ ಸಂತ್ರಸ್ತ ಎಂದು ಪರಿಗಣಿಸಿ ಆರೋಪಿಗಳು ಖುಲಾಸೆಯಾಗಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಕಡೂರಿನ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ. ಅಲ್ಲದೇ ಹಾಗೊಂದು ವೇಳೆ ಸರ್ಕಾರ ಮೇಲ್ಮನವಿ ಸಲ್ಲಿಸುವುದಾದರೆ ಸೆಕ್ಷನ್ 378ರಡಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಸಿಆರ್ಪಿಸಿ ಕಾಯಿದೆಯಡಿ ಸೆಕ್ಷನ್ 372 ರಡಿ ಸಂತ್ರಸ್ತರಿಗೆ ಮಾತ್ರ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅದೆ ರೀತಿ ಸೆಕ್ಷನ್ 378(1) ಮತ್ತು (3)ರಲ್ಲಿ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಲು ಪ್ರತ್ಯೇಕ ಅವಕಾಶವಿದೆ. ಎರಡೂ ಬೇರೆ ಬೇರೆ ಸೆಕ್ಷನ್‌ಗಳು, ಹಾಗಾಗಿ ಸಂತ್ರಸ್ತರು ಸೆಕ್ಷನ್ 372ರಡಿ ಸಲ್ಲಿಸಬೇಕಾದ ಮೇಲ್ಮನವಿಯನ್ನು ಸರ್ಕಾರ ಸಲ್ಲಿಸಲು ಸಾಧ್ಯವಿಲ್ಲ. ಸರ್ಕಾರ ತಾನೇ ಸೆಕ್ಷನ್ 378ರಡಿ ಪ್ರತ್ಯೇಕ ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದು ಪೀಠ ಆದೇಶ ನೀಡಿದೆ.ಅಲ್ಲದೆ, ಅದೇ ಕಾರಣಕ್ಕಾಗಿ ವಿಚಾರಣಾ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿ ನೀಡಿದ್ದ ಆದೇಶವನ್ನು ಪ್ರಶ್ನಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.
ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವಾಗಲು ನೇಮಕವಾಗಿದ್ದ ಅಮೈಕಾಸ್ ಕ್ಯೂರಿ ಎಸ್.ಜಾವೇದ್, ರಾಜ್ಯ ಸರ್ಕಾರ ತಾನೇ ಬಾಧಿತ ವ್ಯಕ್ತಿ ಎಂದು ಭಾವಿಸಿ ಸಿಆರ್ಪಿಸಿ ಸೆಕ್ಷನ್ 372 ರಡಿ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.