ಬೆಂಗಳೂರು:ರಾಜ್ಯದ ಕಾರಾಗೃಹಗಳಲ್ಲಿ ಇರುವ ಕೈದಿಗಳಿಗೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ವಿವಿಧ ಪ್ರಕರಣಗಳಲ್ಲಿ ಜೈಲು ಸೇರಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ಮಾತ್ರ ಭರಪೂರ ಸಂಬಳ ಜಾಸ್ತಿ ಮಾಡಿದೆ. ರಾಜ್ಯ ಗೃಹ ಇಲಾಖೆ ಮೂರುಪಟ್ಟು ರಾಜ್ಯ ಕೈದಿಗಳ ಸಂಬಳ ಜಾಸ್ತಿ ಮಾಡಿ ಆದೇಶ ಮಾಡಿದ್ದು, ದೇಶದಲ್ಲೆ ಹೆಚ್ಚು ಸಂಬಳವನ್ನ ರಾಜ್ಯದ ಜೈಲಿನಲ್ಲಿರುವ ಕೈದಿಗಳು ಪಡೆಯುತ್ತಿದ್ದಾರೆ.
ಒಂದು ವರ್ಷದ ರಾಜ್ಯದ ಎಲ್ಲ ಕೈದಿಗಳ ಸಂಬಳ 58 ಕೋಟಿ ರೂ.ಗೂ ಅಧಿಕ:ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಟ್ಟು 54 ಕಾರಾಗೃಹಗಳಿವೆ. ಈ 54 ಕಾರಾಗೃಹಗಳಲ್ಲಿ ಶಿಕ್ಷೆಗೊಳಗಾಗಿರುವ ಕೈದಿಗಳ ಸಂಖ್ಯೆ 3,565. ಇವರಿಗೆ ನೀಡುವ ಸಂಬಳ ಒಂದು ವರ್ಷಕ್ಕೆ 58 ಕೋಟಿ 28 ಲಕ್ಷದ 34,720 ರೂಪಾಯಿ. ಇಷ್ಟೊಂದು ಪ್ರಮಾಣದ ಹಣವನ್ನು ರಾಜ್ಯ ಗೃಹ ಇಲಾಖೆ ಜೈಲಿನ ಕೈದಿಗಳಿಗೆ ನೀಡುತ್ತಿದೆ.
ಕೈದಿಗಳ ಸಂಬಳದ ವಿವರ:ಆರಂಭದ 1 ವರ್ಷದವರೆಗೆ ಕೈದಿಗಳಿಗೆ 524 ರೂಪಾಯಿ ನಿಗದಿ ಆಗಿರುತ್ತದೆ. ಒಂದು ವರ್ಷ ಅನುಭವದ ಬಳಿಕ ಕುಶಲ ಬಂದಿ ಎಂದು ಪರಿಗಣಿಸಲಾಗುತ್ತದೆ. ಆಗ ಓರ್ವ ಕೈದಿಗೆ ಸಿಗುವ ಸಂಬಳ ದಿನಕ್ಕೆ 548 ರೂಪಾಯಿ. ಅಂದರೆ ವಾರದ ರಜೆ ಪಡೆದು ಕೆಲಸ ಮಾಡಿದರೆ ಸಿಗುವ ಸಂಬಳ 14,248 ರೂಪಾಯಿ. ಎರಡು ವರ್ಷ ಅನುಭವ ಆದರೆ ಅರೆ ಕುಶಲ ಬಂದಿ ಎಂದು ಪರಿಗಣನೆ. ಆಗ ಒಬ್ಬ ಕೈದಿಗೆ ಸಿಗುವ ಸಂಬಳ ದಿನಕ್ಕೆ 615 ರೂಪಾಯಿ.
ವಾರದ ರಜೆ ಪಡೆದು ಕೆಲಸ ಮಾಡಿದರೆ ತಿಂಗಳಿಗೆ 15,990 ರೂಪಾಯಿ. ಮೂರು ವರ್ಷ ಅನುಭವ ಆದ ಬಳಿಕ ತರಬೇತಿ ಕೆಲಸಗಾರ ಬಂದಿ ಎಂದು ಪರಿಗಣನೆ. ಆಗ ಓರ್ವ ಕೈದಿಗೆ ದಿನಕ್ಕೆ ಸಿಗುವ ಸಂಬಳ 663 ರೂಪಾಯಿ. ವಾರದ ರಜೆ ಪಡೆದು ಸಿಗುವ ತಿಂಗಳ ಸಂಬಳ 17,238 ರೂಪಾಯಿಯಾಗಿದೆ.
ಹೊಸ ಕೂಲಿಗೆ ಈ ಕೆಳಗಿನ ಷರತ್ತುಗಳು ಅನ್ವಯ:
* 8 ಗಂಟೆಗಳ ಕಾಲ ಕೈದಿಗಳಿಗೆ ನಿಗದಿಪಡಿಸಿದ ಕೆಲಸ ಮಾಡಿದಾಗ ಪರಿಷ್ಕೃತ ವೇತನ ಅನ್ವಯ.
* ತರಬೇತಿ ಕೆಲಸಗಾರ ಬಂಧಿಯು ಕನಿಷ್ಠ ಒಂದು ವರ್ಷ ತರಬೇತಿ ಪಡೆದ ನಂತರ ಅರೆಕುಶಲ ಕೆಲಸಗಾರ ಬಂಧಿಯ ವರ್ಗಕ್ಕೆ ಸೇರ್ಪಡೆ.
* ಅರಕುಶಲ ಕೆಲಸಗಾರ ಬಂಧಿಯು ಕನಿಷ್ಠ 2 ವರ್ಷ ಪೂರ್ಣಗೊಳಿಸಿದ ನಂತರ ಕುಶಲ ಕೆಲಸಗಾರ ಬಂಧಿಯ ವರ್ಗಕ್ಕೆ ಪರಿಗಣನೆ.
* ಕುಶಲ ಕೆಲಸಗಾರ ಬಂಧಿಯು 3 ವರ್ಷ ಕೆಲಸ ಪೂರ್ಣಗೊಳಿಸಿದ ನಂತರ ಅತಿ ಕುಶಲಬಂಧಿಯಾಗಿ ಸೇರ್ಪಡೆ.