ಬೆಂಗಳೂರು: ಸರ್ಕಾರ ನೆರೆ ಸಂತ್ರಸ್ತರ ನೆರವಿಗೆ ಬಂದಿದ್ದು, ನೆರೆ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ವಿಧಾನಸಭೆಯಲ್ಲಿ ಅತಿವೃಷ್ಟಿ ವಿಚಾರವಾಗಿ ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಅವರು, ನೆರೆ ಪೀಡಿತ ಪ್ರದೇಶಗಳ ಜನರ ನೆರವಿಗೆ ಸರ್ಕಾರ ಬಂದಿದೆ. ಪ್ರವಾಹವನ್ನು ನಿಯಂತ್ರಣ ಮಾಡಲು ಸಕಲ ಕ್ರಮ ಕೈಗೊಂಡಿದ್ದೇವೆ. ಆಗಸ್ಟ್- ಸೆಪ್ಟೆಂಬರ್ ನಲ್ಲಿ ವಾಡಿಕೆಗಿಂತ ಶೇ 500 ಹೆಚ್ಚು ಮಳೆಯಾಗಿದೆ. ಆ ಸಂದರ್ಭ ರಾಜ್ಯದ 133 ತಾಲೂಕುಗಳು ನೆರೆ ಪೀಡಿತವಾಗಿದ್ದವು. ಸೆ.15 ರಿಂದ 30ರವರೆಗೆ ಎರಡನೇ ಅವಧಿಗೆ ಬಿದ್ದ ಮಳೆಗೆ 50 ತಾಲೂಕು ಪ್ರವಾಹ ಪೀಡಿತವಾಗಿತ್ತು. ಅಕ್ಟೋಬರ್ ಎರಡನೇ ವಾರದಿಂದ ಮೂರನೇ ವಾರದವರೆಗೆ ಮೂರನೇ ಬಾರಿ ಮಳೆಯಾಗಿದೆ. ಮೂರು ಬಾರಿ ಸುರಿದ ಮಳೆಗೆ ಅಪಾರ ಹಾನಿ ಸಂಭವಿಸಿದೆ ಎಂದು ಅವರು ವಿವರಿಸಿದರು.
ಮಹಾಮಳೆಗೆ 48,367 ಮನೆಗಳು ಹಾನಿಯಾಗಿವೆ. 20.87 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. 37,805 ಕಿ.ಮೀ ರಸ್ತೆಗಳು ಹಾನಿಯಾಗಿದ್ದರೆ, 4,084 ಸೇತುವೆಗಳು ಹಾಳಾಗಿವೆ. 7,606 ಕಟ್ಟಡಗಳು, 291 ಕುಡಿಯುವ ನೀರಿನ ಟ್ಯಾಂಕ್‌ಗಳಿಗೆ ಹಾನಿಯಾಗಿದೆ. ಒಟ್ಟು 52,242 ಜನರನ್ನು ಕಾಳಜಿ ಕೇಂದ್ರಗಳಿಗೆ ಶಿಫ್ಟ್ ಮಾಡಲಾಗಿದೆ. ಊಟಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ.