ಕರ್ನಾಟಕ

karnataka

ETV Bharat / state

ಬೇಕಾಬಿಟ್ಟಿ ವರ್ಗಾವಣೆಗೆ ಬಿತ್ತು ಬ್ರೇಕ್.. ಹೊಸ ನಿಯಮಾವಳಿಗೆ ಸಚಿವರು, ಶಾಸಕರ ಬೇಸರ! - ಹೊಸ ನಿಯಮ ಜಾರಿಗೆ ತಂದ ಸರ್ಕಾರ

ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿ ಡಾ.ವಿಶಾಲ್ ವರ್ಗಾವಣೆ ಕಡತ ವಿಲೇವಾರಿಗೆ ಹೊಸ ನಿಯಮ ಜಾರಿಗೆ ತಂದಿದ್ದು, ಯಾವುದೇ ಇಲಾಖೆಯ ಅಧಿಕಾರಿಯ ವರ್ಗಾವಣೆ ಮೌಖಿಕ ಆದೇಶದಂತೆ ನಡೆಸದೆ ಕಡ್ಡಾಯವಾಗಿ ಸಮಗ್ರ ವಿವರಗಳು ಚೆಕ್ ಲಿಸ್ಟ್ ಭರ್ತಿ ಮಾಡಿ ಕಳುಹಿಸಬೇಕು ಎಂಬ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಈ ಹೊಸ ಪದ್ಧತಿಯಿಂದ ಕಿರಿಕಿರಿ ಅನುಭವಿಸುತ್ತಿರುವ ಶಾಸಕರು ಸಿಎಂ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ.

vidhanasowda

By

Published : Nov 15, 2019, 7:48 PM IST

ಬೆಂಗಳೂರು:ಯಾವುದೇ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕೆಂದರೂ ಇನ್ಮೇಲೆ‌ ವರ್ಗಾವಣೆ ಅರ್ಜಿ ನಮೂನೆ(ಚೆಕ್‌ ಲಿಸ್ಟ್) ಭರ್ತಿ ಮಾಡಬೇಕೆಂಬ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಶಾಸಕರಾದರೂ ಸರಿ, ಸಚಿವರಾದರೂ ಸರಿ ಅರ್ಜಿ ಭರ್ತಿ ಮಾಡುವ ಹೊಸ ಪದ್ದತಿ ಜಾರಿಗೆ ತರಲಾಗಿದೆ. ಈ ಹೊಸ ಪದ್ಧತಿಯಿಂದ ಕಿರಿಕಿರಿ ಅನುಭವಿಸುತ್ತಿರುವ ಶಾಸಕರು ಸಿಎಂ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ.

ಆಡಳಿತ ಯಂತ್ರದ ಚುರುಕಿಗಾಗಿ ಸರ್ಕಾರಿ ಇಲಾಖೆಯಲ್ಲಿ ವರ್ಗಾವಣೆ ಸಾಮಾನ್ಯ. ಸಚಿವರು ತಮ್ಮ ಇಲಾಖೆಗೆ, ಶಾಸಕರು ತಮ್ಮ ಕ್ಷೇತ್ರಗಳಿಗೆ ಇಂತಹ ಅಧಿಕಾರಿ ಬೇಕು ಎಂದು ವರ್ಗಾವಣೆ ಮಾಡಿಸಿಕೊಳ್ಳುವುದು ನಡೆದುಕೊಂಡು ಬಂದಿದೆ. ಬೇಕಾದ ಸಮಯದಲ್ಲಿ ಬೇಕಾದ ಅಧಿಕಾರಿಯನ್ನು ಮುಖ್ಯಮಂತ್ರಿಗಳ ಬಳಿ ಹೇಳಿ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಆದರೆ, ಈಗ ಈ ಪದ್ಧತಿಗೆ ಬ್ರೇಕ್ ಬಿದ್ದಿದೆ. ಚೆಕ್ ಲಿಸ್ಟ್ ಭರ್ತಿ ಮಾಡಿ ಕಳುಹಿಸಿ ಕೊಟ್ಟರೆ ಮಾತ್ರ ವರ್ಗಾವಣೆ ಕಡತ ವಿಲೇವಾರಿ ಮಾಡಲಾಗುತ್ತದೆ. ಇಲ್ಲದಿದ್ದರೆ ಇಲ್ಲ ಎಂಬ ಹೊಸ ನಿಯಮ ಜಾರಿಗೆ ತರಲಾಗಿದೆ.

ಹೊಸ ನಿಯಮಗಳ ಆದೇಶದ ಪ್ರತಿ..

ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿ ಡಾ.ವಿಶಾಲ್ ವರ್ಗಾವಣೆ ಕಡತ ವಿಲೇವಾರಿಗೆ ಹೊಸ ನಿಯಮ ಜಾರಿಗೆ ತಂದಿದ್ದು, ಯಾವುದೇ ಇಲಾಖೆಯ ಅಧಿಕಾರಿಯ ವರ್ಗಾವಣೆ ಮೌಖಿಕ ಆದೇಶದಂತೆ ನಡೆಸದೆ ಕಡ್ಡಾಯವಾಗಿ ಸಮಗ್ರ ವಿವರಗಳು ಚೆಕ್ ಲಿಸ್ಟ್ ಭರ್ತಿ ಮಾಡಿ ಕಳುಹಿಸಬೇಕು. 15 ದಿನಕ್ಕೊಮ್ಮೆ ಮಾತ್ರ ವರ್ಗಾವಣೆ ಕಡತಗಳ ವಿಲೇವಾರಿಗೆ ಸಿಎಂ ಕಚೇರಿಗೆ ಕಳಿಸಬೇಕು. ಸಚಿವರು ವರ್ಗಾವಣೆ ಮಾಡಿ‌ ನಂತರ ಸಹಿಗೆ ಸಿಎಂ ಕಚೇರಿಗೆ ಕಳುಹಿಸುವಂತಿಲ್ಲ ಎನ್ನುವ ನಿಯಮ ಜಾರಿಗೊಳಿಸಿದ್ದಾರೆ.

ಹೊಸ ನಿಯಮದಿಂದಾಗಿ ಶಾಸಕರು ಮಾತ್ರವಲ್ಲ, ಸಚಿವರು ಕೂಡ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಳ್ಳಲು ಪರದಾಡುವಂತಾಗಿದೆ. ಚೆಕ್ ಲಿಸ್ಟ್ ಭರ್ತಿ ಮಾಡುವಂತಹ ಪದ್ಧತಿಗೆ ತೀವ್ರ ಅಸಮಾಧಾನಗೊಂಡಿದ್ದು, ಮುಖ್ಯಮಂತ್ರಿಗಳ ವಿರುದ್ಧವೇ ಕಿಡಿ ಕಾರಿದ್ದಾರೆ. ಉಪ ಚುನಾವಣೆ ಸಮಯದಲ್ಲಿಯೂ ತಮಗೆಬೇಕಾದ ಅಧಿಕಾರಿ ವರ್ಗಾವಣೆ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ನೂತನ ನಿಯಮದಲ್ಲೇನಿದೆ!

• ವರ್ಗಾವಣೆಗೆ ಸಂಬಂಧಿಸಿದಂತೆ 15 ದಿನಗಳಿಗೊಮ್ಮೆ ಕಡತಗಳನ್ನು ಪರಿಶೀಲಿಸಿ ಒಟ್ಟುಗೂಡಿಸಿ ಮಂಡಿಸಬೇಕು.
• ತುರ್ತು ಸಂದರ್ಭದಲ್ಲಿ ಮಾತ್ರ ಸಿಂಗಲ್ ಫೈಲ್‌ನ ಕಳುಹಿಸಬೇಕು.
• ಸದರಿ ಕಡತಗಳ ನಕಲು ಫೈಲ್‌ನ ಸಂರಕ್ಷಿಸಲು (shadow file)ರಚಿಸಬೇಕು.
• ಬೇರೆ ಇಲಾಖೆಗಳಿಗೆ ನೌಕರರನ್ನು ವರ್ಗಾಯಿಸಬೇಕಾದ ಸಂದರ್ಭದಲ್ಲಿ ಸಂಬಂಧಿಸಿದ ಇಲಾಖೆಗಳ ಸಹಮತಿಯನ್ನು ಪಡೆದ ನಂತರವೇ ವರ್ಗಾವಣೆ ಪ್ರಸ್ತಾವನೆಯನ್ನು ಮಂಡಿಸುವುದು. ಮಂಜೂರಾದ ಹುದ್ದೆಗಳ ಪ್ರಮಾಣಕ್ಕೆ ಅನುಗುಣವಾಗಿ ಖಾಲಿ ಹುದ್ದೆ ಇದ್ದಲ್ಲಿ ಪ್ರಸ್ತಾವನೆಯನ್ನು ಮಂಡಿಸಬೇಕು.
• ವರ್ಗಾವಣೆಗೆ ಸಂಬಂಧಿಸಿದ ಎಲ್ಲಾ ಕಡತದಲ್ಲಿಯೂ ಚೆಕ್ ಲಿಸ್ಟ್ ಅನ್ನು ಭರ್ತಿ ಮಾಡಿ ಅದಕ್ಕೆ ಉಪಕಾರ್ಯದರ್ಶಿ ಹಾಗೂ ಅಧೀನ ಕಾರ್ಯದರ್ಶಿಯವರು ಸಹಿ ಮಾಡಿರಬೇಕು.
• ಒಬ್ಬರ ಹೆಸರಿನಲ್ಲಿಯೇ 2-3 ಕಡತಗಳು ಬರುವಂತಿಲ್ಲ.
• ಒಂದು ಸ್ಥಳಕ್ಕೆ 2-3 ಹೆಸರುಗಳನ್ನು ಪ್ರಸ್ತಾಪಿಸುವಂತಿಲ್ಲ.
• ಸಚಿವರಿಂದ ಅನುಮೋದನೆಗೊಂಡ ಕಡತಗಳನ್ನು ಆದೇಶ ಹೊರಡಿಸಿದ ನಂತರ ಘಟನೋತ್ತರ ಅನುಮೋದನೆಗೆ ಮುಖ್ಯಮಂತ್ರಿಗಳಿಗೆ ಕಳುಹಿಸುವಂತಿಲ್ಲ.
• ಮುಖ್ಯಮಂತ್ರಿಗಳ ಸಹಿಯೊಂದಿಗೆ ನೋಟ್ ಶೀಟ್ ರೂಪದಲ್ಲಿ ಬರುವ ಆದೇಶಗಳಿಗೆ ವರ್ಗಾವಣೆ ಆದೇಶಗಳನ್ನು ಕಡತ ರೂಪದಲ್ಲಿ ಮಂಡಿಸಿ ತದನಂತರ ಅನುಮೋದನೆಯೊಂದಿಗೆ ವರ್ಗಾವಣೆ ಆದೇಶಗಳನ್ನು ಜಾರಿಗೊಳಿಸಬೇಕು.

ನೂತನ ವರ್ಗಾವಣೆ ನಿಯಮ ಜಾರಿಯಾಗಿರುವ ಕಾರಣದಿಂದ ಕಳೆದ ಮೂರು‌ ದಿನದಿಂದ ಯಾವುದೇ ವರ್ಗಾವಣೆ ಆದೇಶ ಹೊರ ಬಿದ್ದಿಲ್ಲ. ಹೊಸ ನಿಯಮದಿಂದ ತಬ್ಬಿಬ್ಬಾಗಿರುವ ಶಾಸಕರು ವರ್ಗಾವಣೆ ಮಾಡಿಸಿಕೊಳ್ಳಲು ಸಿಎಂ ದುಂಬಾಲು ಬೀಳುತ್ತಿದ್ದಾರೆ. ಉಪ ಚುನಾವಣೆ,ಟಿಕೆಟ್ ಹಂಚಿಕೆಯಂತಹ ಸಂದಿಗ್ಧತೆಯಲ್ದಿದ್ದ ಸಿಎಂಗೆ ವರ್ಗಾವಣೆ ನೀತಿ ಹೊಸ ತಲೆನೋವು ಸೃಷ್ಟಿಸಿದೆ.

ABOUT THE AUTHOR

...view details