ಕರ್ನಾಟಕ

karnataka

ETV Bharat / state

ವೈದ್ಯರ ರಕ್ಷಣೆಗೆ ಕಾನೂನಿನ ಬಲ: ಹಲ್ಲೆ ನಡೆಸಿದರೆ ಜೈಲು ಪಾಲು, ಆಸ್ತಿಯೂ ಮುಟ್ಟುಗೋಲು

ಕೋವಿಡ್ ಸಂದರ್ಭದಲ್ಲಿ ವೈದ್ಯರು ಮತ್ತು ವಾರಿಯರ್ಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರೆ 6 ತಿಂಗಳಿನಿಂದ 7 ವರ್ಷದವರೆಗೆ ಜೈಲುವಾಸ, 1 ಲಕ್ಷದಿಂದ 5 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ. ಹಲ್ಲೆ ಹಾಗೂ ಆಸ್ತಿ-ಪಾಸ್ತಿಗೆ ಹಾನಿ ಮಾಡಲು ಪ್ರಚೋದನೆ ನೀಡಿದ ವ್ಯಕ್ತಿಗೂ ಇದೇ ಶಿಕ್ಷೆ ಹಾಗೂ ದಂಡ ಅನ್ವಯವಾಗಲಿದೆ.

By

Published : Jul 1, 2021, 1:35 PM IST

Govt enacts tough law to protect doctor
ವೈದ್ಯರಿಗೆ ಕಾನೂನು ರಕ್ಷಣೆ

ಬೆಂಗಳೂರು: ರಾಜ್ಯದಲ್ಲಿ ವೈದ್ಯರು ನಿರ್ಭೀತಿಯಿಂದ‌ ಕರ್ತವ್ಯ ನಿರ್ವಹಣೆ ಮಾಡಲು ಹಾಗೂ ಸಾಂಕ್ರಾಮಿಕದ ವೇಳೆ ವೈದ್ಯರ ರಕ್ಷಣೆಗೆ ಪೂರಕವಾಗಿ ಕಾನೂನು ರೂಪಿಸಲಾಗಿde. ಕಾಲ ಕಾಲಕ್ಕೆ ಅಗತ್ಯ ತಿದ್ದುಪಡಿಗಳನ್ನು ತರಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಇರುವ ಕಾನೂನಿಗೆ ತಿದ್ದುಪಡಿ ಮೂಲಕ ಶಕ್ತಿ ನೀಡಲಾಗಿದೆ. ಅಲ್ಲದೆ ಸುಗ್ರೀವಾಜ್ಞೆಯ ಅಸ್ತ್ರ ಪ್ರಯೋಗಿಸಿ ವೈದ್ಯರಿಗೆ ಕಾನೂನು ರಕ್ಷಣೆ ಒದಗಿಸಲಾಗಿದೆ.

ವೈದ್ಯಕೀಯ ಸಿಬ್ಬಂದಿಗೆ ಕಾನೂನು ರಕ್ಷಣೆ:

ರಾಜ್ಯದಲ್ಲಿ ರೋಗಿಗಳ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸುವುದು, ಆಸ್ಪತ್ರೆಯ ಸ್ವತ್ತಿನ ಮೇಲೆ ದಾಳಿ ನಡೆಸುವುದನ್ನು ನಿಯಂತ್ರಿಸಲು ಸರ್ಕಾರ ವೈದ್ಯರ ರಕ್ಷಣೆಗಾಗಿಯೇ 2006 ರಲ್ಲಿ ಕಾನೂನು ಜಾರಿಗೆ ತಂದಿದ್ದು, ಅದರ ಪ್ರಕಾರ ಯಾವುದೇ ಸಮಯದಲ್ಲಿ ರೋಗಿಗಳ ಸಂಬಂಧಿಕರು, ಸಾರ್ವಜನಿಕರು ಇತರ ಯಾರೇ ಆಗಲಿ ವೈದ್ಯರ ಮೇಲೆ ಹಲ್ಲೆ ನಡೆಸಿದರೆ ಅಂತವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗುತ್ತದೆ. ಜತೆಗೆ 3 ವರ್ಷ ಕಾರಾಗೃಹ ಶಿಕ್ಷೆ ವಿಧಿಸುವ ಅವಕಾಶವನ್ನೂ ಮಾಡಿಕೊಡಲಾಗಿದೆ. ಆ ಮೂಲಕ ವೈದ್ಯರ ಮೇಲಿನ ಹಲ್ಲೆ ತಡೆಗೆ ಸರ್ಕಾರ ಕ್ರಮ ಕೈಗೊಂಡು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಕಾನೂನು ರಕ್ಷಣೆ ಒದಗಿಸಿದೆ.

ಆರೋಗ್ಯ ಸೇವಾ ಸಿಬ್ಬಂದಿಗೆ ಹಾಗೂ ಸ್ವತ್ತುಗಳಿಗೆ ರಕ್ಷಣೆ ನೀಡುವ 1897ರ ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ತಿದ್ದುಪಡಿ ತರುವ ಸಾಂಕ್ರಾಮಿಕ ರೋಗಗಳ ತಿದ್ದುಪಡಿ ವಿಧೇಯಕ 2020ಕ್ಕೆ ವಿಧಾನಸಭೆ 2020 ರ ಸೆ.25 ರಂದು ಅಂಗೀಕಾರ ನೀಡಿತು. ಆರೋಗ್ಯ ಸಚಿವ ಶ್ರೀರಾಮುಲು ಕರ್ನಾಟಕ ಸಾಂಕ್ರಾಮಿಕ ರೋಗಗಳ ವಿಧೇಯಕ ಮಂಡನೆ ಮಾಡಿ ಸದನಗಳ ಒಪ್ಪಿಗೆ ಪಡೆದುಕೊಂಡರು.

ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ, ಹಲ್ಲೆ ನಡೆಸಿದರೆ 3 ತಿಂಗಳಿನಿಂದ 5 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ, 50 ಸಾವಿರದಿಂದ 2 ಲಕ್ಷ ರೂ.ಗಳ ವರೆಗೆ ದಂಡ ವಿಧಿಸುವ ಅಧಿಕಾರವನ್ನು ಕಾಯ್ದೆ ಮೂಲಕ ಜಾರಿಗೆ ತರಲಾಗಿದೆ. ಕೋವಿಡ್ ಸಂದರ್ಭದಲ್ಲಿ ವೈದ್ಯರು ಮತ್ತು ವಾರಿಯರ್ಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರೆ 6 ತಿಂಗಳಿನಿಂದ 7 ವರ್ಷದ ವರೆಗೆ ಜೈಲುವಾಸ, 1 ಲಕ್ಷದಿಂದ 5 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ. ಹಲ್ಲೆ ಹಾಗೂ ಆಸ್ತಿ-ಪಾಸ್ತಿಗೆ ಹಾನಿ ಮಾಡಲು ಪ್ರಚೋದನೆ ನೀಡಿದ ವ್ಯಕ್ತಿಗೂ ಇದೇ ಶಿಕ್ಷೆ ಹಾಗೂ ದಂಡ ಅನ್ವಯವಾಗಲಿದೆ.

ನಷ್ಟ ಪರಿಹಾರ ಸಂದಾಯಕ್ಕೆ ಹಾನಿ ಮಾಡಿದ ವ್ಯಕ್ತಿಯೇ ಹೊಣೆಗಾರ:

ವೈದ್ಯರಿಗೆ ಸೇರಿದ ಹಾಗೂ ಇತರ ಸಾರ್ವಜನಿಕ ಮತ್ತು ಖಾಸಗಿ ಸ್ವತ್ತಿಗೆ ಹಾನಿ ಮಾಡಿದಲ್ಲಿ ನ್ಯಾಯಾಲಯ ನಿರ್ಧರಿಸುವ ನಷ್ಟ ಪರಿಹಾರ ಸಂದಾಯಕ್ಕೆ ಹಾನಿ ಮಾಡಿದ ವ್ಯಕ್ತಿಯೇ ಹೊಣೆಗಾರನಾಗಬೇಕಾಗಲಿದೆ. ನ್ಯಾಯಯುತ ಮಾರುಕಟ್ಟೆ ಮೌಲ್ಯಕ್ಕಿಂತ ಎರಡುಪಟ್ಟು ಹಣ ಭರಿಸಬೇಕಾಗಲಿದೆ. ಅದಕ್ಕಾಗಿ ಆತನ ಸ್ವತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಅಪರಾಧವನ್ನು ಇನ್ಸ್​​ಪೆಕ್ಟರ್ ಶ್ರೇಣಿಯ ಒಳಗಿರುವ ಅಧಿಕಾರಿ 30 ದಿನಗಳ ಒಳಗೆ ತನಿಖೆ ನಡೆಸಲಿದ್ದಾರೆ. ನ್ಯಾಯಾಲಯ ವಿಚಾರಣೆಯನ್ನು ವಿಸ್ತರಿಸದಿದ್ದರೆ ಈ ಕಾಯ್ದೆಯ ಪ್ರಕಾರ ಒಂದು ವರ್ಷದಲ್ಲಿ ವಿಚಾರಣೆ ಪೂರ್ಣಗೊಳ್ಳಲಿದೆ.

2020ರಲ್ಲಿ ಅಂದಿನ ಆರೋಗ್ಯ ಸಚಿವ ಶ್ರೀರಾಮುಲು ಮಂಡಿಸಿ ಉಭಯ ಸದನಗಳಿಂದ ಅಂಗೀಕಾರ ಪಡೆದುಕೊಂಡಿದ್ದ ಕರ್ನಾಟಕ ಸಾಂಕ್ರಾಮಿಕ ರೋಗಗಳ ವಿಧೇಯಕ 2020ಕ್ಕೆ 2021 ರ ಫೆ.2 ರಂದು ತಿದ್ದುಪಡಿ ಮಾಡಲಾಯಿತು. ಆರೋಗ್ಯ ಸಚಿವ ಡಾ.ಸುಧಾಕರ್ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು.

ಉನ್ನತ ಮಟ್ಟದ ಅಧಿಕಾರಿಗಳಿಗೆ ದಂಡ ವಿಧಿಸುವ ಅಧಿಕಾರ:

ಸಾಂಕ್ರಾಮಿಕ ರೋಗದ ವೇಳೆ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ದಂಡ ವಿಧಿಸುವ ಅಧಿಕಾರ ಇರುವ ಕರ್ನಾಟಕ ಸಾಂಕ್ರಾಮಿಕ ರೋಗಗಳ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರ ಸಿಕ್ಕಿತು. ಸಾಂಕ್ರಾಮಿಕ ರೋಗದ ವೇಳೆ ನಿಯಮಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ ದಂಡ ವಿಧಿಸಲು ಸರ್ಕಾರಕ್ಕೆ ಅಧಿಕಾರ ನೀಡುವ ನಿಟ್ಟಿನಲ್ಲಿ ಈ ತಿದ್ದುಪಡಿಯನ್ನು ಮಾಡಲಾಗಿದೆ. ಪಿಡಿಓ ಹಾಗೂ ಮುಖ್ಯ ಪೇದೆಗಿಂತ ಉನ್ನತ ಮಟ್ಟದ ಅಧಿಕಾರಿಗಳಿಗೆ ನ್ಯಾಯಾಲಯದ ಅನುಮತಿ ಪಡೆಯದೆ ದಂಡ ವಿಧಿಸುವ ಅಧಿಕಾರವನ್ನು ಈ ತಿದ್ದುಪಡಿ ಮೂಲಕ ನೀಡಲಾಗಿದೆ.

ಸುಗ್ರೀವಾಜ್ಞೆ:
ಕೊರೊನಾ ಸಾಂಕ್ರಾಮಿಕದ ವೇಳೆ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರು ಹಾಗೂ ಆಸ್ತಿ ರಕ್ಷಣೆಗೆ ಸಂಬಂಧಿಸಿದಂತೆ 2020ರ ಏಪ್ರಿಲ್ 22ರಂದು ನಡೆದ ಕೇಂದ್ರ ಸಚಿವ ಸಂಪುಟವು ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ಕ್ಕೆ ತಿದ್ದುಪಡಿ ಮಾಡಿ ಹೊಸ ಸುಗ್ರೀವಾಜ್ಞೆ ಹೊರಡಿಸುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿತು. ಅದಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದು ರಾಜ್ಯದಲ್ಲಿಯೂ ಸುಗ್ರೀವಾಜ್ಞೆ ಮೂಲಕ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು.

ನಂತರ ವಿಧಾನಸಭೆಯಲ್ಲಿ ವಿಧೇಯಕವನ್ನು ಮಂಡಿಸಿ ಉಭಯ ಸದನಗಳಿಂದ ಅಂಗೀಕಾರ ಪಡೆದುಕೊಂಡಿತು. ಯಾವುದೇ ಸುಗ್ರೀವಾಜ್ಞೆಗೆ 6 ತಿಂಗಳ ಅವಧಿ ಮಾತ್ರವಿದ್ದು ಅಷ್ಟರಲ್ಲಿ ವಿಧಾನಸಭೆಯಿಂದ ಅಂಗೀಕಾರ ಪಡೆಯಬೇಕು ಅಥವಾ ಮತ್ತೆ ಹೊಸದಾಗಿ ಸುಗ್ರೀವಾಜ್ಞೆ ಹೊರಡಿಸಿದಬೇಕಾಗಲಿದೆ. ಅದರಂತೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದ್ದ ಕಾನೂನನ್ನು ವಿಧಾನಸಭೆಯಲ್ಲಿ 2020 ರ ಸೆಪ್ಟೆಂಬರ್​ನಲ್ಲಿ ಅಂಗೀಕರಿಸುವ ಮೂಲಕ ವೈದ್ಯರ ರಕ್ಷಣೆಗೆ ಇರುವ ಕಾನೂನನ್ನು ಶಕ್ತಿಯುತಗೊಳಿಸಲಾಗಿದೆ.

ಇದನ್ನೂ ಓದಿ:ಯಾರೋ ಆ ರೋಹಿಣಿ‌‌ ಸಿಂಧೂರಿ... ಆವಮ್ಮ ಹೇಳಿದಂತೆ ಕೇಳಬೇಕಾ?: ಸಿದ್ದರಾಮಯ್ಯ ಕಿಡಿ

ABOUT THE AUTHOR

...view details